Advertisement

ವಾರದೊಳಗೆ ಮಳೆ ಬರದಿದ್ದರೆ ಮೋಡಬಿತ್ತನೆ

03:45 AM Jun 29, 2017 | Harsha Rao |

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಹೀಗಾಗಿ, ಮೋಡಬಿತ್ತನೆ ಪ್ರಸ್ತಾಪ ಇನ್ನೂ
ಪರಿಶೀಲನೆಯಲ್ಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇನ್ನೂ ಒಂದು ವಾರ ಕಾಲ ಮಳೆ ಪರಿಸ್ಥಿತಿ ನೋಡಿಕೊಂಡು ಜುಲೈ 4 ರಂದು ನಡೆಯಲಿರುವ ಸಂಪುಟ ಉಪ ಸಮಿತಿ ಸಭೆಯಲ್ಲಿ ಮೋಡ ಬಿತ್ತನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಮೋಡ ಬಿತ್ತನೆ ಕಾರ್ಯಕ್ಕೆ ಕೋಟ್ಯಂತರ ರೂ. ವೆಚ್ಚವಾಗಲಿದೆ. ಆದರೆ, ಮಳೆ
ಬೀಳದಿದ್ದರೆ ಅನಿವಾರ್ಯ. ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳು ಹೊರತುಪಡಿಸಿದರೆ ರಾಜ್ಯದ ಇತರೆ ಕಡೆ ಮಳೆಯ ಕೊರತೆ ಇದ್ದು, ಈ ವರ್ಷವೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಸಮಸ್ಯೆ ಉಲ½ಣಿಸಲಿದೆ ಎಂದರು.

23 ಲಕ್ಷ ರೈತರಿಗೆ ಬರ ಪರಿಹಾರ: ಕೇಂದ್ರದಿಂದ ಬಿಡುಗಡೆಯಾಗಿರುವ ಬೆಳೆ ಪರಿಹಾರ ಹಣ 23 ಲಕ್ಷ ರೈತರಿಗೆ ಹಂಚಿಕೆ ಮಾಡಲಾಗಿದೆ. ರೈತರ ಆಧಾರ್‌ ಕಾರ್ಡ್‌, ಪಹಣಿ ದಾಖಲೆ ಪರಿಶೀಲಿಸಿದ ನಂತರ ಉಳಿದವರಿಗೂ ಹಣ ತಲುಪಲಿದೆ ಎಂದರು. ಹಿಂಗಾರು ಬೆಳೆನಷ್ಟ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಕೃಷಿ ಸಚಿವ ಕೃಷ್ಣಬೈರೇಗೌಡರು ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಗುರುವಾರ ಭೇಟಿ ಮಾಡಲಿದ್ದಾರೆ ಎಂದರು.

ರಾಜ್ಯದ ಕೆಲವೆಡೆ ಮಳೆ ಆಗಿರುವುದರಿಂದ ಮೇವಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನೀಗಿದೆ. ಆದರೂ ಅಗತ್ಯ ಇರುವ ಕಡೆ
ಗೋಶಾಲೆ ಮುಂದುವರಿಸಲಾಗಿದೆ ಎಂದು ಹೇಳಿದರು. ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಯೋಜನೆ ಹೆಚ್ಚಿನ ರೈತರಿಗೆ ಅನುಕೂಲವಾಗದು ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಗರಂ ಆದ ಸಚಿವರು, ಸುಮ್ಮನೆ ಏನಂದರೆ ಅದು ಮಾತನಾಡಬಾರದು. 16 ಲಕ್ಷ ರೈತರಿಗೆ ಸಾಲ ಮನ್ನಾದ ಸಂಪೂರ್ಣ ಲಾಭವಾಗಲಿದೆ. 2016-17 ನೇ ಸಾಲಿನಲ್ಲಿ ಸಾಲ ಪಡೆದು ಮರುಪಾವತಿಸಿದ್ದ ರೈತರಲ್ಲಿ ಶೇ.99 ರಷ್ಟು ಮತ್ತೆ ಸಾಲ ಮಾಡಿದ್ದಾರೆ. ಬಡ್ಡಿಯ ಹೊರೆ ತಪ್ಪಿಸಿಕೊಳ್ಳಲು ಮಾರ್ಚ್‌ ಒಳಗೆ ಕೆಲವರು ಪಾವತಿಸಿ ಮತ್ತೆ ಹೊಸ ಸಾಲ ಪಡೆದಿದ್ದಾರೆ. ಅವರೆಲ್ಲರಿಗೂ ಸಾಲ ಮನ್ನಾ ಅನ್ವಯವಾಗಲಿದೆ ಎಂದರು.

ಅಕ್ರಮ-ಸಕ್ರಮ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಕ್ರಮ
ಮಾಡಿಕೊಡುವ ಸಂಬಂಧದ 94 ಸಿ ಮತ್ತು 94 ಸಿಸಿ ಅನ್ವಯ ಅರ್ಜಿ ಪಡೆಯುವ ದಿನಾಂಕವನ್ನು ಶಾಸಕರ ಮನವಿ ಮೇರೆಗೆ ಮತ್ತಷ್ಟು ವಿಸ್ತರಿಸಲಾಗಿದೆ. ಪ್ರತಿ ಗ್ರಾಮ, ನಗರ ಪ್ರದೇಶದಲ್ಲಿ ಸ್ಥಳೀಯ ಗ್ರಾಮ ಸಹಾಯಕ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಂದಾಯ ಅಧಿಕಾರಿ ಸ್ಥಳಕ್ಕೆ ಹೋಗಿ ಎಷ್ಟು ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಅಳತೆ ಮಾಡಿ ವಾಸ ಇರುವ ಕುಟುಂಬದಿಂದ ಅರ್ಜಿ ಪಡೆಯಬೇಕು. ಲೋಪ ಎಸಗಿದರೆ ಕ್ರಮ ಕೈಗೊಳ್ಳಲಾಗುವುದು.

Advertisement

ಕೋಲಾರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಇದು ಕ್ರಮಬದ್ಧವಾಗಿ ಆಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಆಗುತ್ತಿಲ್ಲ,
ಶಾಸಕರು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅಧಿಕಾರಿಗಳ ಮೂಗು ಹಿಡಿದು ಕೆಲಸ ಮಾಡಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ 17,62,919 ಹೆಕ್ಟೇರ್‌ ಡೀಮ್ಡ್ ಅರಣ್ಯ ಪ್ರದೇಶದ ಪೈಕಿ 4,98,991 ಹೆಕ್ಟೇರ್‌ ಪ್ರದೇಶ ಡಿನೋಟಿಫೈ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆ ಜಮೀನು ಡಿ ನೋಟಿಫೈ ಆದರೆ ಎಷ್ಟು ಭೂರಹಿತರಿಗೆ ಕೊಡಬಹುದು ಎಂಬ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಕಂದಾಯ ಇಲಾಖೆಯಿಂದ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಮೌಡ್ಯ ಪ್ರತಿಬಂಧಕ ಕಾಯ್ದೆ ಅಧಿವೇಶನದಲ್ಲಿ ಮಂಡನೆ
ಬೆಂಗಳೂರು: ಜಾರಿಗೆ ಮುನ್ನವೇ ವಿವಾದಕ್ಕೆ ಕಾರಣವಾಗಿರುವ ಮೌಡ್ಯ ಪ್ರತಿಬಂಧಕ ಕಾಯ್ದೆ ಮುಂದಿನ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ಪ್ರಾಣಿಹಿಂಸೆ, ಅತಿ ಕ್ರೌರ್ಯ, ವಶೀಕರಣ, ಜ್ಯೋತಿಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಪುಟ ಉಪ ಸಮಿತಿ ಕೆಲವು ಶಿಫಾರಸು ಮಾಡಿದೆ. ದೇವರು, ದೆವ್ವ, ಭೂತ ಮೈ ಮೇಲೆ ಬರುವುದು ಅದರ ಶಾಂತಿಗಾಗಿ ಎಂದು ಪೂಜೆ-ಪುನಸ್ಕಾರ ಮಾಡಿಸುವುದು, ಮಾಟ-ಮಂತ್ರ, ವಶೀಕರಣದಂತಹ
ಕೃತ್ಯಗಳನ್ನು ವಂಚನೆ ಎಂದು ಪರಿಗಣಿಸುವುದು ಶಿಫಾರಸಿನಲ್ಲಿ ಸೇರಿದೆ. ಅಮಾಯಕರಲ್ಲಿ ಭಯ ಹುಟ್ಟಿಸಿ ಸುಲಿಗೆ, ವಂಚನೆ ಹಾಗೂ ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವುದು ತಡೆಯುವ ಸಂಬಂಧವೂ ಸಂಪುಟ ಉಪ ಸಮಿತಿ ಶಿಫಾರಸು ಮಾಡಿದೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿದಾರರ ಜತೆ ಮಾತನಾಡಿದ ಮೌಡ್ಯ ಪ್ರತಿಬಂಧಕ ಕಾಯ್ದೆ ಕುರಿತ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮುಂದಿನ ಚಳಿಗಾಲದ
ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದರು. ಸಂಪುಟ ಉಪ ಸಮಿತಿಯು ಕಾಯ್ದೆಯ ಸಂಬಂಧ ಶಿಫಾರಸುಗಳನ್ನು ಕಾನೂನು ಇಲಾಖೆಗೆ ಕಳುಹಿಸಿದೆ. ಕಾನೂನು ಇಲಾಖೆ ಪರಾಮರ್ಶೆ ನಂತರ ಸಂಪುಟದಲ್ಲೂ ಒಪ್ಪಿಗೆ ಪಡೆದು ವಿಧಾನಮಂಡಲದಲ್ಲಿ ಮಂಡನೆ ಮಾಡಲಾಗುವುದು ಎಂದರು. ಮಡೆಸ್ನಾನ ವಿಷಯದಲ್ಲೂ ಕೆಲವು ಬದಲಾವಣೆ ಸೂಚಿಸಲಾಗಿದೆ ಎಂದ ಸಚಿವರು, ಆ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next