Advertisement

ನನ್ನ ಪ್ರಾಣಕ್ಕೆ ಕುತ್ತು ಬಂದರೆ ಎಸಿಪಿ ಹೊಣೆ

12:39 PM Nov 26, 2017 | Team Udayavani |

ಬೆಂಗಳೂರು: “ಭೂಗತ ಜಗತ್ತಿನ ಹೆಸರಿನಲ್ಲಿ ಅನಾಮಿಕ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಒಂದು ವೇಳೆ ನನ್ನ ಪ್ರಾಣಕ್ಕೆ ಕುತ್ತು ಬಂದರೆ ಅದಕ್ಕೆ ಆರ್‌ಟಿ ನಗರ ಠಾಣೆಯ ಎಸಿಪಿ ಮುಂಜುನಾಥ್‌ ಬಾಬು ನೇರ ಹೊಣೆಗಾರರಾಗುತ್ತಾರೆ,’ ಎಂದು ಶೆಟ್ಟಿ ಲಂಚ್‌ ಹೋಮ್‌ ಮಾಲೀಕ ರಾಜೀವ್‌ ಶೆಟ್ಟಿ ಹೇಳಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟಿ, “ದಿನ್ನೂರಿನ ತಮ್ಮ ಹೋಟೆಲ್‌ನ ಲ್ಯಾಂಡ್‌ ಲೈನ್‌ ಫೋನ್‌ಗೆ ಭೂಗತ ಲೋಕದ ಹೆಸರಿನಲ್ಲಿ ಅನಾಮಿಕ ಕರೆಗಳು ಬರುತ್ತಿವೆ. ತುಳು ಮತ್ತು ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಗಳು, ಹೋಟೆಲ್‌ ಬಿಟ್ಟು ತೊಲಗದಿದ್ದರೆ ಗುಂಡಿಕ್ಕಿ ಹತ್ಯೆ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಹೀಗಾಗಿ ನನಗೆ ಪ್ರಾಣ ಭಯ ಶುರುವಾಗಿದೆ,’ ಎಂದು ಕಣ್ಣೀರಿಟ್ಟರು.

ರಾಜಿ ಮಾಡ್ಕೊ ಅಂತಾರೆ: “ಹೀಗೆ ಕರೆ ಮಾಡುವ ಅನಾಮಿಕರಲ್ಲಿ ಕೆಲವರು, ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಒತ್ತಡ ಹಾಕುತ್ತಿದ್ದಾರೆ. ಈ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ರಾಜಿಗೆ ನಾನು ಒಪ್ಪುವುದಿಲ್ಲ. ಒಂದು ವೇಳೆ ರಾಜಿ ನಡೆಯುವುದೇ ಆದರೆ ಮಾಧ್ಯಮಗಳ ಮುಂದೆ ನಡೆಯಲಿ.

ಒಟ್ಟಿನಲ್ಲಿ ನನಗೆ ನ್ಯಾಯ ಸಿಗಬೇಕು,’ ಎಂದು ರಾಜೀವ್‌ ಶೆಟ್ಟಿ ಹೇಳಿದರು. “ಬೆದರಿಕೆ ಕರೆಗಳನ್ನು ನೆನೆದು ನನಗೆ ರಾತ್ರಿ ನಿದ್ದೆ ಬರುತ್ತಿಲ್ಲ. ಜೀವಭಯದಿಂದಾಗಿ ಹೋಟೆಲ್‌ ಕಡೆ ತೆರಳಲು ಕೂಡ ಆಗುತ್ತಿಲ್ಲ. ಹೀಗಾಗಿ ಹೋಟೆಲ್‌ ಉದ್ಯಮದಲ್ಲಿ ನಷ್ಟವಾಗುತ್ತಿದೆ.

ನಾನು ನಿಯಮ ಉಲ್ಲಂ ಸಿದ್ದರೆ ಅಧಿಕಾರಿಗಳು ನನಗೆ ನೋಟಿಸ್‌ ನೀಡಿ ಎಚ್ಚರಿಸಬಹುದಿತ್ತು. ಆದರೆ ಅದನ್ನು ಮಾಡದೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಒಂದೊಮ್ಮೆ ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ,’ ಎಂದ ಅವರು, ತಮಗೆ ಬೆಂಬಲವಾಗಿ ನಿಂತ ಬಂಟರ ಸಂಘ ಮತ್ತು ಹೋಟೆಲ್‌ ಉದ್ಯಮದವರಿಗೆ ಧನ್ಯವಾದ ಹೇಳಿದರು.

Advertisement

ಗೃಹ ಸಚಿವರು ಮಧ್ಯೆ ಪ್ರವೇಶಿಸಲಿ: ಪ್ರಕರಣ ಸಂಬಂಧ ಪೋಲಿಸ್‌ ಆಯುಕ್ತರಿಗೆ ದೂರು ನೀಡಿದರೂ ತಪ್ಪಿತಸ್ಥ ಅಧಿಕಾರಿ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ನ್ಯಾಯದೊರಕಿಸಿ ಕೊಡಬೇಕು.

ಅಲ್ಲದೆ  ರಾಜೀವ್‌ ಶೆಟ್ಟಿ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಬಂಟರ ಸಂಘ ಬೆಂಗಳೂರು ವಿಭಾಗದ ಗೌರವ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ಆಗ್ರಹಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಂಟರ ಸಂಘ, ವಿವಿಧ ಸಂಘಟನೆಗಳ ಜತೆಗೂಡಿ ಹಂತ ಹಂತವಾಗಿ ಹೋರಾಟ ನಡೆಸಲಿದೆ ಎಂದರು.

ಪ್ರಕರಣದ ವಿಚಾರಣೆ ಮಂದಗತಿಯಲ್ಲಿ ನಡೆಯುತ್ತಿದೆ. ವಿಳಂಬವಾದಷ್ಟೂ ಇಡೀ ಪ್ರಕರಣ ದಿಕ್ಕು ತಪ್ಪುವ ಸಾಧ್ಯತೆ ಇದೆ. ಆಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದು.
-ಡಿ.ಚಂದ್ರಹಾಸ್‌ ರೈ, ಬಂಟರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next