ಎಚ್.ಡಿ.ಕೋಟೆ: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲನುಭವಿಸಿದ್ದೆ. ಪಕ್ಷ ಬಯಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದಾಗಿ ಮಾಜಿ ಸಚಿವ ಎಂ.ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಪ್ರಗತಿಗಾಗಿ ಹಲವಾರು ಕಠಿಣ ನಿರ್ಧಾರ ಕೈಗೊಂಡು ಅಭಿವೃದ್ಧಿಪಡಿಸುವ ಮೂಲಕ ವಿಶ್ವಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ ಎಂದು ತಿಳಿಸಿದರು.
ತಾಲೂಕು ಸೇರಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲೂ ಈ ಬಾರಿ ಬಿಜೆಪಿ ಪಕ್ಷ ಗೆಲ್ಲುವುದು ಖಚಿತವಾಗಿರುವುದರಿಂದ ಕ್ಷೇತ್ರದಲ್ಲಿ ಹಲವರು ಆಕಾಂಕ್ಷಿಗಳಿದ್ದು ಪ್ರತಿಯೊಬ್ಬರೂ ಪಕ್ಷದ ಸಂಘಟನೆ ಮಾಡಬೇಕು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಮಾತನಾಡಿ, ಪಟ್ಟಣದ ಪುರಸಭೆಗೆ ಚುನಾವಣೆ ನಿಗದಿಯಾಗಿದ್ದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು, ಮುಖಂಡರು ಕೆಲಸ ನಿರ್ವಹಿಸಬೇಕಿದೆ. ಪಕ್ಷ ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿದ್ದು, ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಯಿಂದ ಕ್ಷೇತ್ರ ಹಿಂದುಳಿದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಕೆ.ಗಿರೀಶ್, ಜಿಪಂ ಸದಸ್ಯ ವೆಂಕಟಸ್ವಾಮಿ, ಪುರಸಭೆ ಸದಸ್ಯ ವಿವೇಕಾನಂದ, ಗ್ರಾಪಂ ಸದಸ್ಯ ವಿಶ್ವಾರಾಧ್ಯ, ಜಿಪಂ ಮಾಜಿ ಸದಸ್ಯೆ ಭಾಗ್ಯಲಕ್ಷಿ, ಮೊತ್ತ ಬಸವರಾಜಪ್ಪ, ಜೆ.ಪಿ.ಚಂದ್ರಶೇಖರ್, ಪರಿಕ್ಷೀತರಾಜೇ ಅರಸ್, ಎಂ.ಎನ್.ಜಗದೀಶ್, ಬೋರೇಗೌಡ, ಸೋಮಾಚಾರಿ,
ಚಂದ್ರಮೌಳಿ, ಬಿ.ಟಿ.ನರಸಿಂಹಮೂರ್ತಿ, ಕೆ.ಎನ್.ಮಹೇಶ್, ಡ್ರೀಪ್ ಸಿದ್ದನಾಯಕ, ಪುಟ್ಟರಾಜು, ಮಹದೇವು, ಗಣಪತಿ, ದೇವಣ್ಣ, ಸರ್ವಮಂಗಳ, ಎಂ.ಮಾದಯ್ಯ, ಗಾಯಕ ಸಿದ್ದರಾಜು, ಅಂಗಡಿ ಪುಟ್ಟೇಗೌಡ, ಸ್ವಾಮಿ, ಚಂದ್ರಶೇಖರ್, ತಾಲೂಕು ಬಿಜೆಪಿ ಕಾರ್ಯದರ್ಶಿ ಬಿಡಗಲು ರಾಜು ಇತರರಿದ್ದರು.