ಮನುಷ್ಯ ಜಾಸ್ತಿ ಖರ್ಚು ಮಾಡುವುದು ಬಟ್ಟೆಗೆ. ಬೇಕಾದರೆ ಚೆಕ್ ಮಾಡಿ ನೋಡಿ, ಕೆಲಸಕ್ಕೆ ಸೇರಿದ ನಂತರ, ಎಲ್ಲರೂ ಆಗಿಂದಾಗ್ಗೆ ಬಟ್ಟೆ ಖರೀದಿಸುತ್ತಾರೆ. ಈಗಾಗಲೇ 20 ಶರ್ಟ್ ಇದ್ದರೂ, ಇನ್ನೊಂದೆರಡು ಜೊತೆಗಿರಲಿ, ಅನ್ನುತ್ತಾರೆ. ಹೆಣ್ಣುಮಕ್ಕಳ ವಿಷಯವನ್ನಂತೂ ಹೇಳುವುದೇ ಬೇಡ. ಮೂರು ಕಪಾಟಿನ ತುಂಬಾ ಸೀರೆ, ಡ್ರೆಸ್‌ಗಳು ಇದ್ದರೂ, ನನ್ನ ಹತ್ರ ಬಟ್ಟೆಗಳೇ ಇಲ್ಲ ಎಂಬ ಮಾತು, ಪ್ರತೀ ಮನೆಯ ಹೆಣ್ಣುಮಕ್ಕಳಿಂದಲೂ ಕೇಳಿಬರುತ್ತದೆ.
ಇದನ್ನು ಗಮನಿಸಿಯೇ ಹಲವರು ಹೇಳುತ್ತಾರೆ: ಬಟ್ಟೆ ಅಂಗಡಿ ತೆಗೆದ್ರೆ, ಬೇಗ ಕಾಸು ಮಾಡಬಹುದು! ಹೌದಾ? ಈ ಮಾತು ನಿಜವಾ? ಬಟ್ಟೆ ಅಂಗಡಿಯ ಬ್ಯುಸಿನೆಸ್ ಮಾಡಿದವರೆಲ್ಲಾ ಚೆನ್ನಾಗಿ ಕಾಸು ಮಾಡಿದ್ದಾರಾ? ಎಂದು ಚೆಕ್ ಮಾಡಿದರೆ, ಶೇ.40ರಷ್ಟು ಜನ ಮಾತ್ರ ಗೆದ್ದು, ಉಳಿದವರು ಸೋತುಹೋಗಿರುವುದು ಲೆಕ್ಕಕ್ಕೆ ಸಿಗುತ್ತದೆ. ಯಾಕೆ ಹೀಗಾಯಿತು ಎಂದು ಕಾರಣ ಹುಡುಕುತ್ತಾ ಹೋದರೆ, ವ್ಯಾಪಾರದ ತಂತ್ರಗಾರಿಕೆ ಗೊತ್ತಿಲ್ಲದೇ ಹೆಚ್ಚಿನವರು ಸೋತಿರುವುದು ಗೊತ್ತಾಗುತ್ತದೆ.
ಬಹುಶಃ ನೀವೂ ನೀವಿರುವ ಏರಿಯಾದಲ್ಲಿ ಹೊಸ ಬಟ್ಟೆ ಮಾರಾಟದ ಮಳಿಗೆ ಶುರುವಾಯಿತು ಅಂದುಕೊಳ್ಳಿ. ಜನ, ತಮ್ಮ ಮಳಿಗೆಯಲ್ಲಿರುವ ಬಟ್ಟೆಗಳನ್ನು ನೋಡಲೆಂದು, ಮಾಲೀಕರು ಹತ್ತಾರು ಬಗೆಯ ಸೀರೆ, ಪ್ಯಾಂಟ್, ಶರ್ಟ್, ಸೂಟ್ ಗಳನ್ನೂ ತೂಗುಹಾಕಿರುತ್ತಾರೆ. ಹೆಚ್ಚು ಲಾಭ ಮಾಡಬೇಕು ಎಂಬ ಉದ್ದೇಶದಿಂದ ಒಮ್ಮೆಗೇ 100ರ ಲೆಕ್ಕದಲ್ಲಿ ಪ್ಯಾಂಟ್- ಶರ್ಟ್, ಸೀರೆಗಳನ್ನು ತಂದುಬಿಡುತ್ತಾರೆ. ಅನುಮಾನವೇ ಬೇಡ. ಆನಂತರದಲ್ಲಿ, ಸೋಲು ಎಂಬುದು ಅವರ ಸಂಗಾತಿ ಆಗುತ್ತದೆ. ಯಾಕೆ ಗೊತ್ತೇ?
ಉಡುಪಿಗೆ ಸಂಬಂಧಿಸಿದಂತೆ, ಪ್ರತಿ 3-4 ತಿಂಗಳಿಗೆ ಒಮ್ಮೆ ಫ್ಯಾಷನ್ ಬದಲಾಗುತ್ತಾ ಇರುತ್ತದೆ. ಶರ್ಟ್‌ಗೆ, ಕಾಲರ್ ಬಳಿ ಬೇರೆ ಬಣ್ಣದ ಬಟ್ಟೆ ಹಾಕುವುದು, ಜೇಬಿನ ಬಳಿ ಇಂಗ್ಲಿಷ್ ಅಕ್ಷರದ ಸ್ಟಿಕ್ಕರ್ ಸೇರಿಸುವುದು, ಪ್ಯಾಂಟ್‌ಗೆ ಎರಡು ಎಕ್ಸ್ಟ್ರಾ ಜೇಬು ಇಡುವುದು, ಸೀರೆಗೆ ಬಾರ್ಡರ್‌ನಲ್ಲಿ ಡಿಸೈನ್ ಹೆಚ್ಚು ಮಾಡುವುದು… ಇವೆಲ್ಲಾ ಫ್ಯಾಷನ್‌ನ ವಿಧಗಳು. ಪದೇಪದೆ ನಾವು ಸ್ಟೈಲ್ ಮಾಡಬೇಕು. ಆದಷ್ಟೂ ಚೆನ್ನಾಗಿ ಕಾಣಬೇಕು ಎಂದು ಎಲ್ಲರೂ ಬಯಸುತ್ತಾರೆ.
ಹೊಸ ಫ್ಯಾಷನ್ ಬಂದಂತೆಲ್ಲಾ, ಹೊಸ ಹೊಸ ಬಟ್ಟೆಗಳೂ ಅಂಗಡಿಗೆ ಬರಬೇಕು. ಆಗ, ಜನರೂ ಅಂಗಡಿಗೆ ಬರುತ್ತಾರೆ. ವ್ಯಾಪಾರವೂ ಚೆನ್ನಾಗಿ ಆಗುತ್ತದೆ. ಇಲ್ಲಿ ಇನ್ನೊಂದು ಬ್ಯುಸಿನೆಸ್ ಸೀಕ್ರೆಟ್ ಹೇಳಿಬಿಡಬೇಕು. ಕಾಸು ಮಾಡಬೇಕು, ವ್ಯಾಪಾರದಲ್ಲಿ ಗೆಲ್ಲಬೇಕು ಎಂದು ಆಸೆಪಟ್ಟವರು, ಬೇಡಿಕೆಗಿಂತ ಕಡಿಮೆ ಪ್ರಮಾಣದ ಉತ್ಪನ್ನ ತರಿಸಬೇಕು. ಅಕಸ್ಮಾತ್, ಮೊದಲೇ ಆರ್ಡರ್ ಮಾಡಿದ್ದವರು ಬರದೇ ಹೋದರೆ, ಅದನ್ನು ಇನ್ನೊಬ್ಬರಿಗೆ ಮಾರಿ, ಸ್ಟಾಕ್ ಖಾಲಿ ಮಾಡಬಹುದು.
ಅಥವಾ, ಸ್ಟಾಕ್ ಖಾಲಿ ಆಗಿದೆ, ಹೊಸದು ಬಂದಾಗ ಬೇಗ ಬನ್ನಿ ಅಂತ ಮನವಿ ಮಾಡಿದರೆ, ಅಂಗಡಿಯ ಬಗ್ಗೆ ಗ್ರಾಹಕರಿಗೂ ನಂಬಿಕೆ ಮತ್ತು ಸದಭಿಪ್ರಾಯ ಬರುತ್ತದೆ. ಹೀಗೆ ಮಾಡುವ ಬದಲು, 100 ಪ್ಯಾಂಟ್‌ಗೆ ಬೇಡಿಕೆ ಇರುವಾಗ ಒಂದಿಪ್ಪತ್ತು ಜಾಸ್ತಿ ಇರಲಿ ಎಂದು ಆರ್ಡರ್ ಮಾಡಿದರೆ, ಒಟ್ಟು ನಲವತ್ತು ಪ್ಯಾಂಟ್‌ಗಳು ಮಾರಾಟ ಆಗದೇ ಉಳಿದು, ನಷ್ಟ ಕೈ ಕಚ್ಚುತ್ತದೆ. ಪಾಪ ಕಣ್ರೀ, ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಸ್ ಆಯ್ತಂತೆ ಎಂಬ ಮಾತು ಅವರಿವರಿಂದ ಕೇಳಿಬರುವುದೇ ಆಗ…
ಸ್ಟಾಂಡರ್ಡ್ ವಸ್ತ್ರ ಅಳತೆ: ಭಾರತೀಯ ವಸ್ತ್ರ ತಯಾರಕರ ಸಂಘ, ಭಾರತೀಯ ಗ್ರಾಹಕರ ಸ್ಟಾಂಡರ್ಡ್ ಸೈಝ್ ಗಳನ್ನು ಪಟ್ಟಿ ಮಾಡುವ ನಿಟ್ಟಿನಲ್ಲಿ, ಸರಕಾರದ ಜೊತೆ ಮಾತುಕತೆ ನಡೆಸುತ್ತಿದೆ. ಈ ಪ್ರಾಜೆಕ್ಟ್ ಏನಾದರೂ ಯಶಸ್ವಿಯಾದರೆ, ಬಟ್ಟೆಗಳನ್ನು ಆನ್‌ಲೈನಿನಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಖರೀದಿಸಬಹುದು. ಈಗಿರುವ ಮಾನದಂಡ ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುವುದರಿಂದ, ಗ್ರಾಹಕರಿಗೆ ಸೈಝ್ನ ಆಯ್ಕೆ ವಿಚಾರ, ತಲೆನೋವಾಗಿಯೇ ಉಳಿದಿದೆ.