ತೋಕೂರು: ಗ್ರಾಮ ಪಂಚಾಯತ್ ವಿಶೇಷ ಆಸಕ್ತಿಯಿಂದ ಮಕ್ಕಳ ಗ್ರಾಮ ಸಭೆಯನ್ನು ನಡೆಸುತ್ತಿರುವಾಗ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸರಕಾರಿ ಇಲಾಖೆಯ ಅಧಿ ಕಾರಿಗಳು ಗೈರಾಗುವುದು ಯಾಕೆ ಎಂದು ಪಡು ಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳ ಗ್ರಾಮ ಸಭೆಯಲ್ಲಿ
ಮಕ್ಕಳೇ ಪ್ರಶ್ನಿಸಿದರು.
ತೋಕೂರು ಹಿಂದೂಸ್ಥಾನಿ ಸರಕಾರಿ ಶಾಲೆಯಲ್ಲಿ ನ. 28ರಂದು ಜರಗಿದ ಮಕ್ಕಳ ಗ್ರಾಮ ಸಭೆಯಲ್ಲಿ ಡಾ| ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಪ್ರಶ್ನಿಸಿ, ಇಲಾಖೆಯ ಬಗ್ಗೆ ಮಾಹಿತಿ ಪಡೆಯುವುದು ಮಕ್ಕಳ ಹಕ್ಕಾಗಿದ್ದು, ಅದರ ಮಾಹಿತಿ ನೀಡಬೇಕಾದವರೇ ಸಭೆಯಲ್ಲಿ ಇಲ್ಲದಿರುವುದು ಸರಿಯೇ ಎಂದರು. ಇದಕ್ಕೆ ಶಿಕ್ಷಕಿ ರತಿ ಎಕ್ಕಾರು ಧ್ವನಿಗೂಡಿಸಿ, ಶಿಕ್ಷಣ ಇಲಾಖೆಗೆ ಚಾಯತ್ ಅ ಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಆಗ ಪ್ರತಿಕ್ರಿಯಿಸಿದ ಪಿಡಿಒ, ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಯವರು ತಾಲೂಕಿನಲ್ಲಿ ಸಭೆ ಇದೆ ಎಂದು ತಿಳಿಸಿದ್ದಾರೆ. ಪಂಚಾಯತ್‌ನಿಂದ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೆ ಸಮನ್ವಯತೆ ಕೊರತೆ ಇದ್ದು, ಇದನ್ನು ಮುಂದಿನ ದಿನದಲ್ಲಿ ಸರಿಪಡಿಸುತ್ತೇವೆ. ಮಕ್ಕಳು ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದರು.
ತೋಕೂರು ಡಾ| ರಾಮಣ್ಣ ಶೆಟ್ಟಿ ಶಾಲೆಯ ಬಳಿ ಬಸ್ ನಿಲ್ದಾಣ ಹಾಗೂ ಹಂಪ್ಸ್ ಅಗತ್ಯವಿದೆ ಎಂದು ಧನ್ಯಾ ಮತ್ತು ಪಲ್ಲವಿ ಅಗ್ರಹಿಸಿದರು. ಪಡು ಪಣಂಬೂರು ಶಾಲೆಯ ಮೆಟ್ಟಿಲುಗಳಲ್ಲಿ ಶೌಚ ಮಾಡಲಾಗುತ್ತಿದೆ, ಹೆದ್ದಾರಿಯಲ್ಲಿ ಮೀನಿನ ಲಾರಿಗಳಿಂದ ವಾಸನೆ, ಮೂಡುತೋಟದಲ್ಲಿ ಹೆದ್ದಾರಿ ದಾಟಲು ಕಷ್ಟವಾಗುತ್ತಿದೆ, ಮಳೆನೀರು ರಸ್ತೆಯಲ್ಲಿ ಹರಿಯುತ್ತದೆ, ಚರಂಡಿಯಲ್ಲಿ ಮಣ್ಣು ತುಂಬಿದೆ ಎಂದು ಶಾಲೆಯ ದೀಕ್ಷಿತಾ, ಗ್ರೀಷ್ಮಾ, ಆಕರ್ಷ್, ಆಕಾಶ್ ಮುಂತಾದವರು ದೂರಿದರು.
ತೋಕೂರು ಸುಬ್ರಹ್ಮಣ್ಯ ಶಾಲೆಯ ಪರಿಸರದಲ್ಲಿ ಕಸದ ವಿಲೇವಾರಿ ಸರಿಯಿಲ್ಲ, ಹುಲ್ಲುಗಳು ಬೆಳೆದಿವೆ, ಹಂಪ್ಸ್ ಬೇಕು ಎಂದು ಮಾನ್ಯಶ್ರೀ, ವರುಣ್ ಆಗ್ರಹಿಸಿದರು. ಕೆರೆಕಾಡಿನ ಶಾಲಾ ವಠಾರದಲ್ಲಿ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಿ, ಆವರಣ ಗೋಡೆ ನಿರ್ಮಿಸಿ ಎಂದು ರಶ್ಮಿ, ಶಿಲ್ಪಾ, ಅವಿನಾಶ್ ಆಗ್ರಹಿಸಿದರು. ಶಾಲಾ ವಿದ್ಯಾರ್ಥಿ ದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಯಶ್, ವರುಣ್, ಸಾಕ್ಷಿ, ಹರ್ಷಿತಾ, ತಾ.ಪಂ. ಸದಸ್ಯ ಜೀವನ್‌ಪ್ರಕಾಶ್, ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಸದಸ್ಯರಾದ ಹೇಮಂತ್ ಅಮಿನ್, ಲೀಲಾ ಬಂಜನ್, ಕುಸುಮಾವತಿ, ಸಂಪಾವತಿ, ಉಮೇಶ್ ಪೂಜಾರಿ, ಪುಷ್ಪಾವತಿ, ವನಜಾ, ಪಿಡಿಒ ಅರುಣ್ ಪ್ರದೀಪ್ ಡಿ’ಸೋಜಾ, ಮಕ್ಕಳ ಕಲ್ಯಾಣ ಸಮಿತಿ ಸಮನ್ವಯಕಾರರಾದ ಪ್ರತಿಮಾ ಕೆ.ಎಲ್. ಉಪಸ್ಥಿತರಿದ್ದರು. ಶಾಲೆಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ಶ್ರಾವರಿ ಸ್ವಾಗತಿಸಿ, ಜಯಲಕ್ಷ್ಮೀ ವಂದಿಸಿದರು. ಅವಿನಾಶ್ ನಿರೂಪಿಸಿದರು.
ಗೌರವ ಧನದ ಸಹಕಾರ
ಎಚ್‌ಐವಿ ಬಾಧಿತ ಹಾಗೂ ಜೈಲು ಶಿಕ್ಷೆ ಅನುಭವಿಸುವ ಪೋಷಕರ ಮಕ್ಕಳಿಗೆ ಸರಕಾರವು ವಿಶೇಷವಾಗಿ ಮಾಸಿಕ ಒಂದು ಸಾವಿರ ರೂಪಾಯಿಯನ್ನು ಗೌರವಧನವಾಗಿ ನೀಡುತ್ತಿದೆ. ತಪ್ಪು ಮಾಡಿದರೆ ಬಾಲ ನ್ಯಾಯ ಮಂಡಳಿ ಮನಸ್ಸನ್ನು ಪರಿವರ್ತಿಸಲು ಪುನರ್ವಸತಿಗೆ ಸೇರಿಸಲಾಗುತ್ತಿದೆ.
–
ಪ್ರತಿಮಾ ಕೆ.ಎಲ್., ಸಂಯೋಜಕರು,
ಮಕ್ಕಳ ಕಲ್ಯಾಣ ಸಮಿತಿ, ಮಂಗಳೂರು.
ಕೃತಜ್ಞತೆಗಳು…
ಕಳೆದ ಬಾರಿ ಕೆರೆಕಾಡಿನಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಸಂತೆಕಟ್ಟೆಯಿಂದ ಕೊಳುವೈಲು ರಸ್ತೆಯನ್ನು ಕಾಂಕ್ರೀಟೀಕೃತಗೊಳಿಸಲು ಆಗ್ರಹಿಸಲಾಗಿತ್ತು. ಅದನ್ನು ಪ್ರಸ್ತುತ ವರ್ಷದಲ್ಲಿಯೇ ಮಾಡಿಸಿಕೊಟ್ಟ ಜನಪ್ರತಿನಿಧಿಗಳಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
–
ಯಶ್, ತೋಕೂರಿನ ಡಾ|ರಾಮಣ್ಣ ಶೆಟ್ಟಿ ಶಾಲೆ ವಿದ್ಯಾರ್ಥಿ
ಪ್ರೋತ್ಸಾಹ ಧನ ಬಂದಿಲ್ಲ
ಸರಕಾರವು ನೀಡುವ 2016ನೇ ಸಾಲಿನ ಹೆಣ್ಣು ಮಕ್ಕಳ ಪ್ರೋತ್ಸಾಹ ಧನವು ಬಂದಿಲ್ಲ. ಈ ಬಗ್ಗೆ ಮಾಹಿತಿ ನೀಡಲು ಸಭೆಯಲ್ಲಿ ಅಧಿಕಾರಿಗಳೇ ಇಲ್ಲ. ಸರಕಾರ ಕೊಡುವ ಹಣ ಎಲ್ಲಿ ಹೋಗಿದೆ?
–
ಸುರಯ್ಯ, ಪಡುಪಣಂಬೂರು
ಸರಕಾರಿ ಶಾಲೆಯ ವಿದ್ಯಾರ್ಥಿನಿ
ಹೆದ್ದಾರಿಯಲ್ಲಿ ವಾಸನೆ
ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಕಡೆಗಳಲ್ಲಿ ಕಸ ತುಂಬಿದ್ದರೂ ಪಂಚಾಯತ್ ಮೌನವಾಗಿದೆ. ಹೆದ್ದಾರಿ ಸ್ಥಿತಿಯೇ ಹೀಗಾದರೆ ಸ್ವಚ್ಛ ಭಾರತ ಯಾವಾಗ?
–
ಪಲ್ಲವಿ, ತೋಕೂರಿನ ಡಾ| ರಾಮಣ್ಣ ಶೆಟ್ಟಿ ಶಾಲೆ ವಿದ್ಯಾರ್ಥಿನಿ