Advertisement
ಶಾಂತಿಯವರ ಮೊದಲ ಕಥಾಸಂಕಲನವಾದ ಮನಸ್ಸು ಅಭಿಸಾರಿಕೆ ಗೆ ಮೊದಲು ಛಂದ ಸಾಹಿತ್ಯ ಪ್ರಶಸ್ತಿ ಲಭಿಸಿತು. ನಂತರ ಕೊಡಗಿನ ಗೌರಮ್ಮ ಪ್ರಶಸ್ತಿಯು ಲಭಿಸಿತು. ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
Related Articles
2017ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದ ಕೃತಿ ಶಾಂತಿ ಕೆ. ಅಪ್ಪಣ್ಣರ ಚೊಚ್ಚಲ ಕಥಾಸಂಕಲನ ಮನಸು ಅಭಿಸಾರಿಕೆ. ಹಾಗೆ ನೋಡಿದರೆ, ಈ ಮೊದಲೇ ತಮ್ಮ ಕೃತಿಯನ್ನು ಲೋಕಾರ್ಪಣೆ ಮಾಡುವಂಥ ಪ್ರತಿಭೆ ಮತ್ತು ಛಲ ಇವರಿಗಿತ್ತು. ಆದರೆ, ದೂರದ ಚೆನ್ನೈ ಇದಕ್ಕೆ ಅನುಕೂಲ ಮಾಡಿಕೊಡಲಿಲ್ಲವೆನ್ನಿ ! ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂಬಂತೆ ಇಲ್ಲಿಯವರೆಗೆ ಕಾದದ್ದು ವ್ಯರ್ಥವಾಗಲಿಲ್ಲ. ಚೊಚ್ಚಲ ಕಥಾಸಂಕಲನಕ್ಕೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯೇ ಇವರಿಗೆ ದೊರಕಿತು. ಕಥೆಗಳ ಸುಪರ್ದಿಗೆ ಕಟ್ಟಿ ಹಾಕಿದ ಮನಸ್ಸು ಮತ್ತೆ ವಿಚಲಿತಗೊಳ್ಳಲು ಸಾಧ್ಯವಿಲ್ಲ. ವಿಚಲಿತಗೊಳ್ಳೋಣವೆಂದರೆ ಕತೆಗಳೇ ನಮ್ಮನ್ನು ಕಟ್ಟಿಹಾಕಿಬಿಡುತ್ತವೆ. ಇವರ ಕಥಾಕುಸುರಿಯನ್ನು ಅವಲೋಕಿಸಿದರೆ ಕತೆಗಳೇ ಇವರನ್ನು ಕಟ್ಟಿಹಾಕಿವೆೆ ಎಂಬುದಾಗಿ ಭಾಸವಾಗುತ್ತದೆ. ಇವರು ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಿಂದಲೂ ಕತೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಾರೆ.
Advertisement
ಮನಸ್ಸು ನಿಜಕ್ಕೂ ಅಭಿಸಾರಿಕೆ ಹೌದೋ ಅಲ್ಲವೋ ಅದು ಅವರವರ ಭಾವಕ್ಕೆ ಅವರವರ ಮನಸ್ಸಿಗೆ ಬಿಟ್ಟ ವಿಷಯ. ಆದರೆ ಇಲ್ಲಿರುವ ಕಥೆಗಳ ಎಳೆ ಎಳೆಯನ್ನು ಭೇದಿಸಿಕೊಂಡು ಓದಿದಾಗ ಮನಸ್ಸು ಅಭಿಸಾರಿಕೆ ಹೌದು ಎಂಬುದು ನಮಗನಿಸಿಬಿಡುತ್ತದೆ. ಈ ನಿಟ್ಟಿನಲ್ಲಿ ಇವರ ಎಲ್ಲ ಕಥೆಗಳಿಗೆ ಈ ಹೆಸರು ಸೂಕ್ತ ವೆಂದೆನಿಸಿಬಿಡುತ್ತದೆ. ಮನಸ್ಸಿನ ಬಗ್ಗೆ ಬರೆಯುವುದು ಎಲ್ಲರಿಂದ ಸಾಧ್ಯವಿಲ್ಲದ ಮಾತು. ಮನಸ್ಸಿನ ಬಗ್ಗೆ ಬರೆಯಬೇಕೆಂದರೆ ಅತ್ಯಂತ ಸೂಕ್ಷ್ಮ ಸಂವೇದನೆ ಇರುವವರಿಂದ ಮಾತ್ರ ಸಾಧ್ಯ ಎಂಬುದನ್ನು ಲೇಖಕಿಯವರು ಸಾಬೀತುಮಾಡಿದ್ದಾರೆ. ಮನಸ್ಸು ಅಭಿಸಾರಿಕೆ ಹೌದು ಎಂಬ ಲೇಖಕಿಯ ಭಾವವನ್ನು ನಮ್ಮೊಳಗೂ ಹರಿಸಿದ್ದಾರೆ. ಇದೇ ಬರಹದ ಶಕ್ತಿ, ಬರೆಯುವವರ ಶಕ್ತಿ.
ಲೇಖಕಿಗೆ ಬದುಕಿನ ಬಗೆಗೆ ಅಪಾರ ಅಚ್ಚರಿಯಿ ದ್ದಂತೆ ಅನಿಸುತ್ತದೆ. ಪಯಣ ಕಥೆಯಲ್ಲಿ ಅವರೇ ಹೇಳುವಂತೆ, “ನಡೆದಷ್ಟು ಬೆಳೆಯುತ್ತಿರುವ ಬದುಕು ಎಂದಾದರೊಮ್ಮೆ ನಿಲುಗಡೆಗೆ ಬರುವುದೇ… ಅಲ್ಲಿಯ ತನಕ ಹೀಗೆ ನಡೆಯುವುದು ಯಾರಿಗೆ ಗೊತ್ತು ಯಾವ ತಿರುವಿನಲ್ಲಿ ಯಾವ ಸೋಜಿಗ ಅಡಗಿದೆಯೋ… ಹಾಗಂದುಕೊಂಡೇ ನಡೆದುಬಿಟ್ಟಿದ್ದೇನೆ’ ಹೀಗೆ ಬದುಕಿನ ಸಾಗಿಬಂದ ದಿನಗಳ ದಾರಿಗುಂಟ ನೆನಪುಗಳ, ಅದರೊಂದಿಗೆ ನಾವೀನ್ಯ, ಕಲ್ಪನೆಗಳ ತೊಯ್ದಾಟವೇ ಇವರ ಚಂದನೆಯ ಕಥೆಗಳ ದಿಕ್ಕು.
ಸುಳಿ ಕಥೆಯ ಈ ಸಾಲುಗಳು ಎಷ್ಟು ಮಾರ್ಮಿಕವಾಗಿ ನಮ್ಮನ್ನು ತಟ್ಟುತ್ತವೆ ! ಇಲ್ಲಿನ ಕಥೆಗಳ ವಸ್ತು, ಪರಿಕಲ್ಪನೆ, ಉದ್ದೇಶ ಹೀಗೆ ಯಾವ ಕೇಂದ್ರವನ್ನಿಟ್ಟು ನೋಡಿದರೂ ಅದು ಗಂಡು-ಹೆಣ್ಣಿನ ಸಂಬಂಧದ ತೆಕ್ಕೆಗೆ ಬಂದು ನಿಲ್ಲುತ್ತದೆ. ಇದು ಜೀವನದ ಪರಮಸತ್ಯವೂ ಹೌದು. ಯಾವುದೇ ಪರಮ ಸತ್ಯದ ಅವಲೋಕನ ಮಾಡಿ ಬರೆಯುವುದು ಸಾಮಾಜಿಕ ಕಳಕಳಿಯು ಹೌದು. ಅದನ್ನು ಕಥೆಗಳ ಮೂಲಕ ಹೊರಹಾಕುವುದು ದಿಟ್ಟತನದ ವಿಚಾರ. ಈ ದಿಟ್ಟತನ ಇಲ್ಲಿನ ಕಥೆಗಳ ಹೆಗ್ಗಳಿಕೆಯೆ ಸರಿ.
ಶಾಂತಿಯವರ ಬರಹಗಳು ದೈನಂದಿನ ಬದುಕಿನ ಆಗುಹೋಗುಗಳ ಕಾಲು ಹಾದಿಯ ಮೂಲಕ ಸಾಗಿ, ವಿಶಾಲವಾದ ಹಾದಿಯಲ್ಲಿ ನೆರಳು ಬಯಸಿ ವಿಶ್ರಮಿಸುತ್ತವೆ. ದಾರಿ ಕಥೆಯಲ್ಲಿರುವ ಮನೆಕೆಲಸದ ಚಂದ್ರ, ವಾರಿಜಾ ಇರಬಹುದು, ಮುಳ್ಳುಗಳು ಕತೆಯ ಗಾರೆ ಕೆಲಸದ ಟಿಪ್ಪು , ಪರಿಹಾರ ಕತೆಯ ಮುತ್ತಾ ಇರಬಹುದು, ಪರಶುವಿನ ದೇವರು ಕತೆಯ ಪರಶು ಇರಬಹುದು- ಈ ಪಾತ್ರಗಳೆಲ್ಲ ತಮ್ಮ ಜೀವಂತಿಕೆಯನ್ನು , ದಶಕಗಳು ಕಳೆದರೂ ಹಾಗೆಯೇ ಇರಿಸಿಕೊಳ್ಳುತ್ತವೆ, ಏಕೆಂದರೆ, ಇವರ ಸೃಜನಶೀಲ ಯೋಚನಕ್ರಮದಲ್ಲಿ ಈ ಪಾತ್ರಗಳು ಲೋಕದ ಚಿತ್ರಣ ಇನ್ನೂ ಬದಲಾದರೂ ಬದಲಾವಣೆಯಾಗದೇ ಉಳಿಯುತ್ತವೆ. ಭಿನ್ನಕೋನಗಳಿಂದ ಆಲೋಚಿಸಿದರೆ ನಾವು ಇತರರಿಗಿಂತ ಭಿನ್ನವಾಗಿರುತ್ತೇವೆ ಅಲ್ಲವೆ? ಇದನ್ನು ಶಾಂತಿಯವರು ತಮ್ಮ ಕಥೆಗಳಲ್ಲಿ ತೋರ್ಪಡಿಸಿದ್ದಾರೆ.
– ಸಂಗೀತ ರವಿರಾಜ್