ವಿಧಾನಪರಿಷತ್ತು: ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡದೇ ಸರ್ಕಾರಕ್ಕೆ ಬೇರೆ ವಿಧಿಯೇ ಇಲ್ಲ. ಖಜಾನೆಯಲ್ಲಿ ಹಣ ಇಲ್ಲದಿದ್ದರೆ ಸಾಲ ಮಾಡಿಯಾದರೂ ರೈತರ ಸಾಲ ಮನ್ನಾ ಮಾಡಲೇಬೇಕು. ಇಲ್ಲದಿದ್ದರೆ ರೈತರೂ ಕ್ಷಮಿಸಲ್ಲ, ಬಿಜೆಪಿಯೂ ಸುಮ್ಮನಿರಲ್ಲ ಎಂದು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಡೆ ಬೆಟ್ಟು ಮಾಡದೇ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು.
ಇಲ್ಲದಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವ ದಲ್ಲಿ ಜುಲೈ 8, 9 ಮತ್ತು 10ರಂದು ಧರಣಿ ನಡೆಸಿ, ಲಕ್ಷಾಂತರ ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಸರ್ಕಾರ ಸಾಲ ಮನ್ನಾ ಘೋಷಣೆ ಮಾಡುವವರೆಗೆ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತರ ಸಾಲ ಮನ್ನಾ ಮಾಡಿ ಇಲ್ಲ ರಾಜ್ಯ ಆರ್ಥಿಕವಾಗಿ ದಿವಾಳಿ ಆಗಿದೆ ಎಂದು ಘೋಷಿಸಿ. ಕೇಂದ್ರ ಸರ್ಕಾರ ಮಾಡಿದರೆ ನಾವು ಮಾಡಲು ಸಿದ್ಧ ಎಂದು ಹೇಳುವುದು ಭಂಡತನ ಆಗುತ್ತದೆ. ಕೇಂದ್ರ ಸರ್ಕಾರದ ಕಡೆ ಬೆಟ್ಟು ಮಾಡದೆ ಮಹಾರಾಷ್ಟ್ರ, ಉತ್ತರ ಪ್ರದೇಶ ಸರ್ಕಾರಗಳು ಸಾಲ ಮನ್ನಾ ಮಾಡಿವೆ ಎಂದು ಈಶ್ವರಪ್ಪ ಹೇಳುತ್ತಲೇ, ಪಂಚಾಬ್ ಸರ್ಕಾರವೂ ಸಾಲ ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ಸದಸ್ಯರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, 10 ಲಕ್ಷ ರೈತರ ಸಾಲಮನ್ನಾ ಮಾಡಿದ್ದಕ್ಕೆ ಪಂಜಾಬ್ ಸರ್ಕಾರಕ್ಕೆ ಶಿರಸಾಷ್ಟಾಂಗ ನಮಸ್ಕಾರ ಹಾಕುತ್ತೇನೆ. ಪಂಜಾಬ್‌ನಲ್ಲಿ ನಿಮ್ಮದೇ ಪಕ್ಷದ ಸರ್ಕಾರ ಸಾಲ ಮನ್ನಾ ಮಾಡುವಾಗ ಕೇಂದ್ರ ಸರ್ಕಾರವನ್ನು ಕೇಳಿಲ್ಲ. ಅದನ್ನೇ ಇಲ್ಲಿ ನೀವು ಮಾಡಿ ಎಂದು ಆಗ್ರಹಿಸಿದರು.
ಬಿಎಸ್‌ವೈ ಹೇಳಿದ್ದು ಒಪ್ಪುತ್ತೇನೆ: ರೈತರ ಸಾಲ ಮನ್ನಾ ಮಾಡಿ ಎಂದು ಇಂದು ಹೋರಾಟ ಮಾಡುತ್ತಿರುವ ಯಡಿಯೂರಪ್ಪ ತಾವು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನನಗೆ ನೋಟ್ ಪ್ರಿಂಟ್ ಮಾಡುವ ಅಧಿಕಾರ ಕೊಟ್ಟಿಲ್ಲ ಎಂದು ಹೇಳಿದ್ದರು.
ಈ ದ್ವಂದ್ವ ನೀತಿ ಯಾಕೆ ಎಂದು ಕಾಂಗ್ರೆಸ್‌ನ ಉಗ್ರಪ್ಪ ಪ್ರಶ್ನಿಸಿದ್ದಕ್ಕೆ, ಯಡಿಯೂರಪ್ಪ ಹಾಗೆ ಹೇಳಿರಬಹುದು. ಅದನ್ನು ನಾನು ಒಪ್ಪುತ್ತೇನೆ .
ಆದರೆ, ಮುಂದೆ ಜಗದೀಶ ಶೆಟ್ಟರ್ ಸಾಲ ಮನ್ನಾ ಮಾಡಿದರು ಎಂದು ಈಶ್ವರಪ್ಪ ಹೇಳಿದರು. ಜಗದೀಶ ಶೆಟ್ಟರ್ ಘೋಷಣೆ ಮಾಡಿದ್ದಷ್ಟೇ, ಮನ್ನಾ ಮಾಡಿದ್ದು ನಮ್ಮ ಸರ್ಕಾರ ಎಂದು ಕಾಂಗ್ರೆಸ್ ಸದಸ್ಯರು ಹೇಳಿದರು. ಈಗ ನೀವು ಘೋಷಣೆ ಮಾಡಿ, ನಾವು ಬಂದು ಮನ್ನಾ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು. ಈ ವೇಳೆ ಮುಂದೆ ಅಧಿಕಾರಕ್ಕೆ ಬರುವ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರು ಪರಸ್ಪರ ಕಾಲೆಳೆದುಕೊಂಡರು.