ಮೈಸೂರು: ಜಗತ್ತಿನ ಅತಿದೊಡ್ಡ ಸಮಸ್ಯೆ ಯಾವುದು? ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆ ಬಯಸುತ್ತೀರಾ? ನಿಮಗೆ ಮಾದರಿಯಾರು? ನೀವು ರಾಜರಾಗದಿದ್ದರೆ ಏನಾಗುತ್ತಿದ್ದೀರಿ? ನಿಮ್ಮ ಪ್ರಕಾರ ಸಾಧನೆ ಎಂದರೆ ಏನು? ಹೀಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಶಾಲಾ ಮಕ್ಕಳು ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದರು.
ಕಲಿಸು ಫೌಂಡೇಷನ್ ಗುರುವಾರ ಕುಂಬಾರ ಕೊಪ್ಪಲ್‌ನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮೈಸೂರು ಮಹಾರಾಜರಿಂದ ಕಲಿಯಿರಿ ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯದುವೀರ್ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಮೇಷ್ಟ್ರ ಕೆಲಸ ಮಾಡಿದರು. ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕಲಿಸು ಫೌಂಡೇಷನ್ ಜೊತೆಗಿರುತ್ತೇನೆ. ಚಾಮರಾಜ ಒಡೆಯರ್ ಟ್ರಸ್ಟ್ ಬಳಸಿ ತಳಮಟ್ಟದಿಂದ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿ ಪಡಿಸುವ ಧ್ಯೇಯ ಹೊಂದಿದ್ದೇನೆ ಎಂದರು.
ಭಾರತ ಮತ್ತು ವಿದೇಶದ ಶಿಕ್ಷಣ ವ್ಯವಸ್ಥೆಯಲ್ಲಿರುವ ವ್ಯತ್ಯಾಸವೆಂದರೆ ಕೇವಲ ಸಂಪನ್ಮೂಲ ಮಾತ್ರ. ವಿದೇಶದಲ್ಲಿ ಕಲಿಕೆಗೆ ಹೆಚ್ಚು ಸಂಪನ್ಮೂಲಗಳಿವೆ. ಜತೆಗೆ ಅಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಲಾಗುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ವಿದೇಶದ ಸೌಕರ್ಯ ದೊರೆತಲ್ಲಿ ಸಾಧನೆ ದ್ವಿಗುಣವಾಗಲಿದೆ. ನನಗೆ ನಮ್ಮ ಪೂರ್ವಿಕರೇ ಮಾದರಿಯಾಗಿದ್ದು, ಅವರ ಆದರ್ಶ ನಮಗೆ ಪ್ರೇರಣೆ ಮತ್ತು ಮಾರ್ಗದರ್ಶನದಂತಿದೆ ಎಂದು ತಿಳಿಸಿದರು.
ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಎಸ್ಸೆಸೆಲ್ಸಿ ಮುಗಿಸಿದ ನಂತರ, ಪಿಯುಸಿಗಾಗಿ ಕೆನಡಿಯನ್ ಇಂಟರ್‌ನ್ಯಾಷನಲ್ ಕಾಲೇಜು ಸೇರಿದೆ ನಂತರ ಅಮೇರಿಕಾದಲ್ಲಿ ಪದವಿ ಪಡೆದಿದ್ದೇನೆ ಎಂದು ಮಕ್ಕಳಿಗೆ ತಿಳಿಸಿದರು. ಒಂದು ವೇಳೆ ನಾನು ಯುವರಾಜ ಆಗದಿದ್ದರೆ ಪರಿಸರದಲ್ಲಿ ಅರ್ಥಶಾಸ್ತ್ರ ಮಾಡಿದ್ದರಿಂದ ಪರಿಸರ ಸಂರಕ್ಷಕನಾಗಿರುತ್ತಿದೆ. ಆದರೆ ಪ್ರಸ್ತುತ ಯುವ ರಾಜನಾಗಿದ್ದೇನೆ.
ಅಮೆರಿಕಾದಲ್ಲಿ ಓದಿದ್ದರಿಂದ ಅಲ್ಲಿನ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದು, ಕ್ರಿಕೆಟ್ ಮತ್ತು ಹಾಕಿಯನ್ನು ನೋಡುತ್ತೇನೆ. ಜಗತ್ತಿನ ಅತ್ಯಂತ ದೊಡ್ಡ ಸಮಸ್ಯೆ ವಾತಾವರಣದ ವೈಫರಿತ್ಯ. ಅದಕ್ಕೆ ಪರಿಸರ ಸಂರಕ್ಷಣೆಯೇ ಗುರಿಯಾಗಿಸಿಕೊಳ್ಳಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಕಲಿಸು ಫೌಂಡೇಷನ್ ಸಂಸ್ಥಾಪಕ ಎಂ.ಎಂ.ನಿಖೀಲೇಶ್ ಇತರರು ಉಪಸ್ಥಿತರಿದ್ದರು.