ವಿಶೇಷ ವರದಿ-ಮಹಾನಗರ: ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ಆರಂಭವಾದ ಸಿಟಿ ಮತ್ತು ಖಾಸಗಿ ಬಸ್ ಸಂಚಾರಕ್ಕೆ ಜನಸ್ಪಂದನೆ ಸಿಗುತ್ತಿಲ್ಲ. ಹೀಗಿದ್ದಾಗ, ರಾಜ್ಯ ಸರಕಾರ ಬಸ್ ಮಾಲಕರ ಬೇಡಿಕೆ ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಖಾಸಗಿ, ಸಿಟಿ ಬಸ್ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಸ್ ಮಾಲಕರು ಮುಂದಾಗಿದ್ದಾರೆ.
ಒಂದೆಡೆ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿದೆ. ಕೋವಿಡ್-19 ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಳಗ್ಗೆ, ಸಂಜೆ ಹೊರತುಪಡಿಸಿ ಹೆಚ್ಚಿನ ಬಸ್‌ಗಳು ಖಾಲಿಯಾಗಿ ಸಂಚರಿಸುತ್ತಿವೆ. ಆದಾಯಕ್ಕಿಂತ ಹೆಚ್ಚು ನಷ್ಟ ಉಂಟಾಗುತ್ತಿದೆ.
ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ಸುಮಾರು 360 ಸಿಟಿ ಬಸ್‌ಗಳು, 700 ಸರ್ವಿಸ್ ಬಸ್‌ಗಳು, 70ರಷ್ಟು ಒಪ್ಪಂದದ ಮೇರೆಗಿನ ಸಾರಿಗೆ ಮತ್ತು 150ಕ್ಕೂ ಮಿಕ್ಕಿ ಟೂರಿಸ್ಟ್ ಬಸ್‌ಗಳು ಸಂಚರಿಸುತ್ತವೆ. ಆದರೆ ಪ್ರಸ್ತುತ ಶೇ. 50ರಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿವೆ.
ಬಸ್ ಮಾಲಕರ ಸಂಘದ ಪ್ರಮುಖ ಬೇಡಿಕೆಯಂತೆ ಖಾಸಗಿ ಬಸ್‌ಗಳಿಗೆ ಮುಂದಿನ ಆರು ತಿಂಗಳವರೆಗೆ ರಸ್ತೆ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಸದ್ಯ ಸಿಟಿ ಬಸ್‌ಗಳಿಗೆ 23,000 ರೂ. ರಸ್ತೆ ತೆರಿಗೆ, ಗ್ರಾಮಾಂತರ ಸಂಚರಿಸುವ ಬಸ್‌ಗಳಿಗೆ 42,000 ರೂ., ಸರ್ವಿಸ್ ಬಸ್‌ಗಳಿಗೆ 52,000 ರೂ., ಒಪ್ಪಂದದ ಮೇರೆಗಿನ ಬಸ್‌ಗಳಿಗೆ 80,000 ರೂ., ಅದೇ ರೀತಿ ಬೆಂಗಳೂರು ಸಹಿತ ಇತರ ಪ್ರದೇಶಗಳಿಗೆ ತೆರಳುವ ಬಸ್‌ಗಳಿಗೆ ಸುಮಾರು 1 ಲಕ್ಷ ರೂ.ಗೂ ಮಿಕ್ಕಿ ಮೂರು ತಿಂಗಳುಗಳ ರಸ್ತೆ ತೆರಿಗೆಯನ್ನು ಒಮ್ಮೆಲೇ ಕಟ್ಟಬೇಕಾಗುತ್ತದೆ. ತಿಂಗಳಿನಿಂದ ಶೇ. 50ರಷ್ಟು ಬಸ್‌ಗಳು ಕಾರ್ಯಾಚರಿಸುತ್ತಿದ್ದು, ಸರಕಾರವು ರಸ್ತೆ ತೆರಿಗೆಯಲ್ಲಿ ವಿನಾಯಿತಿ ಮತ್ತು ರಿಯಾಯಿತಿಯನ್ನು ನೀಡಲಿಲ್ಲ. ಹೀಗಿದ್ದಾಗ ಬಸ್‌ಗಳ ನಿರ್ವಹಣೆ ಕಷ್ಟಸಾಧ್ಯ ಎನ್ನುತ್ತಾರೆ ಮಾಲಕರು.
ನಷ್ಟದಲ್ಲಿ ಕಾರ್ಯಾಚರಣೆ
ನಗರದಲ್ಲಿ ಶೇ.50ರಷ್ಟು ಸಿಟಿ ಬಸ್‌ಗಳು ಸಂಚರಿಸುತ್ತಿವೆ. ಬಹುತೇಕ ಬಸ್‌ಗಳು ನಷ್ಟ ದಲ್ಲೇ ಕಾರ್ಯಾಚರಿಸುತ್ತಿವೆ. ಕೆಲವೊಂದು ರೂಟ್‌ಗಳಲ್ಲಿ ಖರ್ಚಾದಷ್ಟು ಹಣವೂ ಸಿಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸದ್ಯ 12 ರೂ. ತೈಲ ಬೆಲೆಯಲ್ಲಿ ಏರಿಕೆಯಾಗಿದೆ.
- ದಿಲ್‌ರಾಜ್ ಆಳ್ವ,
ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
ಬೇಡಿಕೆ ಈಡೇರಿಕೆಗೆ ಮನವಿ
ರಾಜ್ಯ ಸರಕಾರದ ನಿಯಮದಂತೆ ಸರಕಾರಿ ಬಸ್‌ಗಳನ್ನು ಕಾರ್ಯಾಚರಣೆ ನಡೆಸ ಲಾಗುತ್ತಿದೆ. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದು, ಬಸ್ ದರ ಏರಿಕೆ, ರಸ್ತೆ ತೆರಿಗೆ ವಿನಾಯಿತಿ ಸಹಿತ ಹಲವು ಬೇಡಿಕೆಗಳನ್ನು ಸ್ಥಳೀಯ ಶಾಸಕರ ಮುಖೇನ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇವೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಬಸ್ ಕಾರ್ಯಾಚರಣೆ ಸ್ಥಗಿತಗೊಳಿ ಸಲಾಗುವುದು.
–
ರಾಜವರ್ಮ ಬಲ್ಲಾಳ್,
ರಾಜ್ಯ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ