Advertisement

ಪಂಚಮಸಾಲಿ ಬೇಡಿಕೆ ಈಡೇರದಿದ್ದರೆ ಮತ್ತೆ ಚಳವಳಿ

07:36 PM Apr 05, 2021 | Team Udayavani |

ಸೇಡಂ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಆರು ತಿಂಗಳ ಸಮಯಾವಕಾಶ ಪಡೆದಿರುವ ಸರ್ಕಾರ, ನಂತರವೂ ಈಡೇರಿಸದೇ ಇದ್ದರೆ ಚಳವಳಿ ಇನ್ನಷ್ಟು ಶಕ್ತಿವಂತವಾಗಿ ರೂಪುಗೊಳ್ಳಲಿದೆ ಎಂದು ಕೂಡಲ ಸಂಗಮ, ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Advertisement

ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ನಡೆಸಿದ ಪಾದಯಾತ್ರೆಗೆ ಸಹಕರಿಸಿದ ಶರಣರಿಗೆ ಕೃತಜ್ಞತೆ ಸಲ್ಲಿಸಲು ಶರಣು ಶರಣಾರ್ಥ ಕೃತಜ್ಞತಾ ಯಾತ್ರೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಲಿಂಗಾಯತ ಸಮಾಜ ಧಾರ್ಮಿಕ, ದಾಸೋಹದ ಮೂಲಕ ಲಿಂಗಾಯತ ಸಮಾಜ ಶ್ರೀಮಂತವಾಗಿದೆ. ಆದರೆ ಶೈಕ್ಷಣಿಕವಾಗಿ, ಐದ್ಯೋಗಿಕವಾಗಿ ಸಮಾಜ ಹಿಂದುಳಿದಿದೆ. ಅಖಂಡ ಲಿಂಗಾಯತರ ಶ್ರೇಯಸ್ಸಿಗಾಗಿ ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ಮಾಡಲಾಗಿತ್ತು. ಈ ಮೂಲಕ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಲಾಗಿತ್ತು. ಆದರೂ ಬೇಡಿಕೆ ಈಡೇರಿರಲಿಲ್ಲ. ನಂತರ 20 ದಿನ ಧರಣಿ ಸತ್ಯಾಗ್ರಹ ಮಾಡಲಾಯಿತು. ಈ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಧಾನಸೌಧದಲ್ಲಿ ಸುದೀರ್ಘ‌ ಹೋರಾಟ ಮಾಡಿದ್ದರು ಎಂದರು. ಇದಾದ ನಂತರ ಮುಖ್ಯಮಂತ್ರಿಗಳು ಆರು ತಿಂಗಳಲ್ಲಿ ತಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲೂ ಭರವಸೆ ಈಡೇರದೇ ಇದ್ದಲ್ಲಿ ದೊಡ್ಡ ಮಟ್ಟದ ಹೋರಾಟ ಮತ್ತೆ ರೂಪುಗೊಳ್ಳಲಿದೆ ಎಂದರು.

ಹೋರಾಟಕ್ಕೆ ಬೆಂಬಲಿಸಿದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜನತೆಗೆ ಶರಣು ಶರಣಾರ್ಥಿ ಜಾಥಾ ಮೂಲಕ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಮುಂದೆ ಅಫಜಲಪುರ, ಆಳಂದ, ಕಲಬುರಗಿ, ಬಸವಕಲ್ಯಾಣಕ್ಕೂ ತೆರಳಲಿದ್ದೇನೆ ಎಂದರು. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಶಿವಶಂಕರೇಶ್ವರ ಮಠದ ಶಿವಶಂಕರ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್‌, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಸಂತೋಷಿರಾಣಿ ಪಾಟೀಲ ತೇಲ್ಕೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next