ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಂಜೂರಾದ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಆರಂಭಿಸದಿದ್ದಲ್ಲಿ ಅಂಥ ಕಾಮಗಾರಿಗಳನ್ನೇ ರದ್ದು ಮಾಡಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಆರ್.ವೆಂಕಟೇಶ ಕುಮಾರ್ ಎಚ್ಚರಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತು ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ವಿಳಂಬ ಮಾಡದೆ ತ್ವರಿತಗತಿಯಲ್ಲಿ ಮುಗಿಸಬೇಕು. ಪ್ರಸಕ್ತ ವರ್ಷದ ಕಾಮಗಾರಿಗಳು, ಅನುಷ್ಠಾನ ಅಧಿಕಾರಿಗಳ ಬದಲಾವಣೆ ಮಾಡಬೇಕಿದ್ದರೆ ಕ್ರಿಯಾ ಯೋಜನೆ ಅನುಮೋದನೆಯಾದ 15 ದಿನದೊಳಗೆ ಪ್ರಸ್ತಾವನೆ ಸಲ್ಲಿಸಬೇಕು. ಒಂದು ವೇಳೆ ವಿಳಂಬವಾದರೆ ಅನುಷ್ಠಾನ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರಸಕ್ತ ಸಾಲಿಗೆ ಅನುಮೋದನೆಗೊಂಡ ಕಾಮಗಾರಿಗಳನ್ನು ಕೂಡ ಸಕಾಲದಲ್ಲೇ ಮುಗಿಸಬೇಕು. ಇನ್ನೂ ಆರಂಭಿಸದಿರುವ ಕಾಮಗಾರಿಗಳನ್ನು ವಿಳಂಬ ಮಾಡದೆ ಪ್ರಾರಂಭಿಸಬೇಕು. ಒಂದು ವೇಳೆ ವಿಳಂಬ ಮಾಡಿದರೆ ಅಂಥ ಕಾಮಗಾರಿಗಳನ್ನು ರದ್ದುಗೊಳಿಸಲಾಗುವುದು. ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಕ್ರಿಯಾ ಯೋಜನೆ ಅನ್ವಯ ಹಂಚಿಕೆ ಮಾಡಲಾಗುತ್ತದೆ. ಹಂಚಿಕೆಯಾದ ಅನುದಾನವನ್ನು ಶೇ.100ರಷ್ಟು ಬಳಸಬೇಕು ಎಂದು ಸೂಚಿಸಿದರು.
ಸರ್ಕಾರ ಒದಗಿಸುವ ಅನುದಾನದಲ್ಲಿ ಸಾಮಾಜಿಕ ಕಲ್ಯಾಣದ ಜೊತೆಗೆ ಮೂಲ ಸೌಲಭ್ಯ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಬೇಕು. ಕಾಮಗಾರಿಗಳು ಮುಗಿಸಿ ಜಿಲ್ಲೆಯಲ್ಲಿ ಕೈಗೆತ್ತಿಕೊಂಡ ಶಾಲಾ-ಕಾಲೇಜುಗಳ ಕಟ್ಟಡಗಳು, ಆರ್.ಓ. ಪ್ಲಾಂಟ್, ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಕಾಮಗಾರಿ ಕುರಿತು ಕಾಲಕಾಲಕ್ಕೆ ಮೇಲಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಎಡಿಸಿ ಡಾ| ಕೆ.ಆರ್. ದುರುಗೇಶ್, ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಮೇನಕಾ ಪಟೇಲ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಸುರೇಂದ್ರಬಾಬು ಸೇರಿ ಇತರರಿದ್ದರು.