ಕೆಂಗೇರಿ: “ಯಾವುದೆ ಕಾರಣಕ್ಕೂ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬಾರದು. ಒಂದು ವೇಳೆ ಮಂಡಳಿ ರಚನೆಯಾದರೆ ರಾಜ್ಯಕ್ಕೆ ಅನ್ಯಾಯವಾಗಲಿದೆ,’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಮಾಗಡಿ ಮುಖ್ಯ ರಸ್ತೆಯ ಸೀಗೇಹಳ್ಳಿಯಲ್ಲಿ ಆಯೋಜಿಸಿದ್ದ ಮಾಗಡಿ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ನಗರ ನಿವಾಸಿಗಳ ಸಭೆಯಲ್ಲಿ ಮಾತನಾಡಿದ ಅವರು, “ರಾಷ್ಟ್ರೀಯ ಪಕ್ಷಗಳು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವೆಸಗುತ್ತಾ ಬಂದಿವೆ. ಈ ಬಾರಿ ಜೆಡಿಎಸ್ ಪಕ್ಷವನ್ನು ಬಹುಮತದ ಮೂಲಕ ಬೆಂಬಲಿಸಿದರೆ ಕಾವೇರಿ ನದಿ ನೀರು ಹಂಚಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಮಾಗಡಿ ಕ್ಷೇತ್ರದ ಅಭಿವೃದ್ಧಿಗೆ ಜೆಡಿಎಸ್ ಅಪಾರ ಕೊಡುಗೆ ನೀಡಿದ ಪರಿಣಾಮ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಪಕ್ಷಕ್ಕೆ ದ್ರೋಹವೆಸಗಿ ಅನ್ಯ ಪಕ್ಷದತ್ತ ಮುಖ ಮಾಡಿರುವ ಶಾಸಕ ಎಚ್.ಸಿ.ಬಾಲಕೃಷ್ಣರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಗೆ ತಕ್ಕ ಉತ್ತರ ನೀಡಿ. ಜತೆಗೆ ಮಾಗಡಿ ಜನತೆಯ ಬೆಂಬಲ ಎಂದೆಂದಿಗೂ ಜೆಡಿಎಸ್‌ಗೆ ಎಂಬುದನ್ನು ಮತ್ತೂಮ್ಮೆ ಖಾತ್ರಿಪಡಿಸಿ ಎಂದು ಕರೆ ನೀಡಿದರು.
ಒಂದೆಡೆ ಪ್ರಧಾನಿ ಮೋದಿ, ಅಮಿತ್ ಶಾ ಅಬ್ಬರದ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆ “ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಸಿಎಂ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕಕ್ಕೆ ನೀಡಿರುವ ಕೊಡುಗೆಯೇನು ಎಂಬುದು ಜನರಿಗೆ ಗೊತ್ತು ಎಂದರು.
ಪುತ್ರ ವ್ಯಾಮೋಹವಿಲ್ಲ: “ನನ್ನ ಮಗನನ್ನು ಮುಖ್ಯಮಂತ್ರಿ ಮಾಡಬೇಕೆಂಬ ಪುತ್ರ ವ್ಯಾಮೋಹ ನನಗಿಲ್ಲ. ಜನರ ಸೇವೆಗಾಗಿಯೇ ನಾವು ನಮ್ಮ ಇಡೀ ಜೀವನವನ್ನು ಮೀಸಲಿಟ್ಟಿದ್ದೇವೆ. ಅದೇ ರೀತಿ ಜನಹಿತಕ್ಕಾಗಿ, ಅಭಿವೃದ್ಧಿಯ ಚಿಂತನೆಗಾಗಿ, ಬಡವರ ಅಭ್ಯುದಯಕ್ಕಾಗಿ ಎಚ್.ಡಿ.ಕುಮಾರ ಸ್ವಾಮಿ ಅಧಿಕಾರಕ್ಕೆ ಬರಬೇಕೆಂಬ ಹಂಬಲ ನಮ್ಮದಾಗಿದೆ. ಈ ನಿಟ್ಟಿನಲ್ಲಿ ನಾವು ಹಗಲಿರುಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಈ ಬಾರಿ ರಾಜ್ಯದ ಮತದಾರರು ಜೆಡಿಎಸ್‌ಗೆ ಅವಕಾಶ ನೀಡಲಿದ್ದಾರೆ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಮಾತನಾಡಿದರು. ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಬೆಂಗಳೂರು ನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಕಾಸಿಯಾ ಅಧ್ಯಕ್ಷ ಹನುಮಂತೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಡಿ.ನಾಗರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಜಿ.ಪಂ ಸದಸ್ಯೆ ಚಂದ್ರಮ್ಮ ನಂಜಯ್ಯ, ಪುರಸಭಾ ಸದಸ್ಯರಾದ ಬಿ.ರಮೇಶ್‌ಕುಮಾರ್, ದೇವರಾಜ್ ಭಾಗವಹಿಸಿದ್ದರು.