Advertisement

ಕ್ಯಾರೆಟ್‌ ಬೆಳೆದರೆ ಕೈ ತುಂಬಾ ಕಾಸು

06:00 AM Oct 08, 2018 | |

ಕ್ಯಾರೆಟ್‌ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು, ಫ‌ಲವತ್ತಾದ, ನೀರು ಬಸಿದು ಹೋಗುವಂಥ ಮಣ್ಣು.  ಭೂಮಿ ಎಷ್ಟು ಮೃದುವಾಗಿರುತ್ತದೆಯೋ, ಎಷ್ಟು ಸಾವಯವ ಅಂಶಗಳಿಂದ ಕೂಡಿದೆಯೋ ಇಳುವರಿಯೂ ಅಷ್ಟೇ ಹೆಚ್ಚಾಗುತ್ತದೆ.

Advertisement

ಕ್ಯಾರೆಟ್‌ ಹಲ್ವಾ, ಕ್ಯಾರೆಟ್‌ ಸಲಾಡ್‌, ಕ್ಯಾರೆಟ್‌ ಜ್ಯೂಸ್‌ ಸೇರಿದಂತೆ ಪಲಾವ್‌, ಸಾಂಬಾರ್‌ ತಯಾರಿಕೆಯಲ್ಲಿ ಮಾತ್ರವಲ್ಲದೇ, ಸೌಂಧರ್ಯವರ್ಧಕವಾಗಿಯೂ ಬಳಕೆಯಾಗುವ ಕ್ಯಾರಟ್‌ಗೆ, ತರಕಾರಿ ಬೆಳೆಗಳಲ್ಲಿ ಪ್ರಮುಖ ಸ್ಥಾನವಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ವಿಟಾಮಿನ್‌ ಎ ಜೀವಸತ್ವ ಹೊಂದಿರುವ, ದೃಷ್ಟಿ ದೋಷ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಕ್ಯಾರೆಟನ್ನು ಬೇಯಿಸುವುದಕ್ಕಿಂತ ಹಸಿಯಾಗಿಯೇ ಬಳಸುವುದು ಹೆಚ್ಚು.

ಇದೇನು ಅಂಥ ಕ್ಲಿಷ್ಟಕರ ಬೆಳೆಯಲ್ಲ. ಕಳೆ ಇಲ್ಲದಂತೆ ನೋಡಿಕೊಳ್ಳುವುದು ಹಾಗೂ ಬೆಳೆದಾದ ಮೇಲೆ ಬೇಗ ಸ್ವತ್ಛಗೊಳಿಸಿ ಮಾರ್ಕೆಟಿಗೆ ಕಳಿಸುವುದು ಮುಖ್ಯ. ಕ್ಯಾರೆಟ್‌ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು, ಫ‌ಲವತ್ತಾದ, ನೀರು ಬಸಿದು ಹೋಗುವಂಥ ಮಣ್ಣು.  ಭೂಮಿ ಎಷ್ಟು ಮೃದುವಾಗಿರುತ್ತದೆಯೋ, ಎಷ್ಟು ಸಾವಯವ ಅಂಶಗಳಿಂದ ಕೂಡಿದೆಯೋ ಇಳುವರಿಯೂ ಅಷ್ಟೇ ಹೆಚ್ಚಾಗುತ್ತದೆ.

ಮಾಮೂಲಾಗಿ ಈ ಬೆಳೆಯನ್ನು ಸೆಪ್ಟೆಂಬರ್‌ ನಿಂದ ಮಾರ್ಚ್‌ವರೆಗೆ ಬೆಳೆಯಬಹುದು. ಭರ್ತಿ ಮಳೆಗಾಲದಲ್ಲಿ ಬೆಳೆದರೆ ಅತಿಯಾದ ತೇವಾಂಶದ ಕಾರಣಕ್ಕೆ ಗಿಡ ಸತ್ತು ಹೋಗಿ, ನಷ್ಟ ಅನುಭವಿಸುವ ಸಾಧ್ಯತೆಯೂ ಇದೆ.  ಮೊದಲು ಹೊಲವನ್ನು ಚೆನ್ನಾಗಿ ಉಳುಮೆ ಮಾಡಿ , ನಂತರ ಕನಿಷ್ಠ ಎಂಟರಿಂದ ಹತ್ತು ಟನ್‌ ನಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಲ್ಲಿ ಮುಚ್ಚಿ. ಕೊಟ್ಟಿಗೆ ಗೊಬ್ಬರ ಲಭ್ಯವಿಲ್ಲದಿದ್ದರೆ ಸಾಕಷ್ಟು ಎರೆಹುಳು ಗೊಬ್ಬರವನ್ನು ಹಾಕಬೇಕು.

ಜೊತೆಗೆ ಬೇವಿನಹಿಂಡಿ ಬಳಸಿದರೆ ಇನ್ನೂ ಒಳ್ಳೆಯದು. ಈ ವಿಷಯದಲ್ಲಿ ದುಡ್ಡಿನ ಲೆಕ್ಕ ಹಾಕಬಾರದು. ಸಾವಯವ ಗೊಬ್ಬರವನ್ನು ಎಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತೀರೋ ಇಳುವರಿ ಅಷ್ಟೇ ಹೆಚ್ಚಾಗಿ ಮಾಡಿದ ಖರ್ಚಿಗೆ ತಕ್ಕ ಪ್ರತಿಫ‌ಲ ಬರುವುದು.

Advertisement

ಈಗಾಗಲೇ ರಾಸಾಯನಿಕ ಕೃಷಿಗೆ ಒಗ್ಗಿಕೊಂಡಿರುವವರು, ತಮ್ಮ ಸಮಾಧಾನಕ್ಕೋಸ್ಕರ ಎಕರೆಗೆ 20 ಕೆ.ಜಿ ಯೂರಿಯಾ, 25 ಕೆ.ಜಿ ಡಿ.ಎ.ಪಿ, 20 ಕೆ.ಜಿ ಪೊಟ್ಯಾಷ್‌ ಗೊಬ್ಬರವನ್ನು ತೆಳುವಾಗಿ ಹೊಲದ ತುಂಬ ಹರಡಿ. ಒಂದು ಎಕರೆಗೆ ಎರಡರಿಂದ ಮೂರು ಕೆ.ಜಿ ಬೀಜ ಬೇಕಾಗುವುದು. ಮೂರು ಅಡಿಗೊಂದು ಸಾಲು ಬಿಟ್ಟು, ಸಾಲಿನ ಎರಡೂ ಕಡೆ, (ಅಂದರೆ ಒಂದು ಅಡಿ ಅಗಲ) ಹತ್ತು ಸೆಂ.ಮೀ ಗೆ ಒಂದು ಬೀಜ ಹಾಕಬೇಕು.

ಹೀಗಿರಲಿ ಬೇಸಾಯ: ಬೀಜ ಹಾಕಿದ ಮೇಲೆ ತೆಳುವಾಗಿ ನೀರು ಹಾಯಿಸಬೇಕು, ಬೀಜ ಸುಮಾರು 12-15 ದಿನದಲ್ಲಿ ಮೊಳಕೆಯೊಡೆಯುವುದು, ಆಗ ಕಳೆ ತಗೆಸಿ ಮತ್ತೂಮ್ಮೆ 10 ಕೆ.ಜಿ ಯೂರಿಯಾವನ್ನು (ಹೌದು ಹತ್ತು ಕೆ.ಜಿ ಮಾತ್ರ) ವನ್ನು ಕೊಟ್ಟು ನೀರು ಹಾಯಿಸಿ. ಮತ್ತೆ 20 ದಿನ ಬಿಟ್ಟು ಇದನ್ನೇ ಪುನರಾವರ್ತಿಸಿ. ನಾಲ್ಕರಿಂದ ಐದು ದಿನಕ್ಕೊಮ್ಮೆ ನೀರು ಕೊಡುತ್ತಿರಿ.

ಹೇನು, ಜಿಗಿಹುಳು, ಮೂತಿಹುಳು ಕಾಡತೊಡಗಿದರೆ ಡೈಮಿಥೊಯೇಟ್‌ ಕ್ರಿಮಿನಾಶಕವನ್ನು ಒಂದು ಲೀಟರ್‌ ನೀರಿಗೆ ಒಂದೂವರೆ ಎಮ್.ಎಲ್ ಹಾಕಿ ಸ್ಪ್ರೆ  ಮಾಡಿ. ಸುಮಾರು 100 ದಿನಗಳಿಗೆ ಕ್ಯಾರೆಟ್‌ ಕೊಯ್ಲಿಗೆ ಸಿದ್ಧವಾಗುತ್ತದೆ. ಸಾಧ್ಯವಾದಷ್ಟು ಹೆಚ್ಚು ಕೂಲಿಯಾಳು ಬಳಸಿ ಬೇಗ ಬೇಗ ಕಿತ್ತು ಸಮಯ ವ್ಯರ್ಥ ಮಾಡದೇ ಮೇಲಿನ ಸೊಪ್ಪು ಕತ್ತರಿಸಿ. ನಂತರ ಕ್ಯಾರೆಟ್ಟನ್ನು ತೊಳೆದು ಸ್ವತ್ಛಗೊಳಿಸಿ ಮಾರ್ಕೆಟ್‌ಗೆ ಕಳಿಸಬೇಕು. ತಡ ಮಾಡಿದಷ್ಟೂ ತೂಕದಲ್ಲಿ ವ್ಯತ್ಯಾಸವಾಗುತ್ತದೆ.

ಎಕರೆಗೆ ಸುಮಾರು ಮೂರು ಟನ್ ನಿಂದ ಹದಿನೈದು ಟನ್ ವರೆಗೆ ಇಳುವರಿ ವ್ಯತ್ಯಾಸ ಆಗುವುದುಂಟು. ನಾವು ಆ್ಯವರೇಜ್ ಎಂಟು ಟನ್ ಲೆಕ್ಕ ಹಾಕಿದರೆ, ಕ್ವಿಂಟಲ್ ಗೆ ಎರಡೂವರೆ ಸಾವಿರ ಅಂತ ಹಿಡಿದರೆ ಎರಡು ಲಕ್ಷ ಕೈಗೆ ಸಿಗುತ್ತದೆ. ಇದರಲ್ಲಿ ಗೊಬ್ಬರದಿಂದ ಹಿಡಿದು ಕೂಲಿ ಕಟಾವಿನವರೆಗೆ ಮಾಡಿದ ಖರ್ಚು ಅಂತ ಐವತ್ತು ಸಾವಿರ ತಗೆದರೂ, ಒಂದು ಎಕರೆಯಲ್ಲಿ ಕ್ಯಾರೆಟ್‌ ಬೆಳೆಯುವುದರಿಂದ ಒಂದೂವರೆ ಲಕ್ಷ ಆದಾಯ ನಿಶ್ಚಿತ.

* ಎಸ್‌.ಕೆ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next