Advertisement

ತಿಂಗಳೊಳಗೆ ಉದ್ದಿಮೆ ಪರವಾನಿಗೆ ನವೀಕರಿಸದಿದ್ದರೆ ಬೀಗ

10:13 AM Sep 30, 2017 | |

ಮಹಾನಗರ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ಪರವಾನಿಗೆ ನವೀಕರಣ ನಡೆಸಲು ಬಾಕಿ ಇರುವ 8,627 ಉದ್ದಿಮೆಗಳಿಗೆ ಒಂದು ವಾರದೊಳಗೆ ಆರೋಗ್ಯ ಇಲಾಖೆಯಿಂದ ನೋಟಿಸ್‌ ಕಳುಹಿಸಲಾಗುವುದು ಹಾಗೂ ಅವರು ತಿಂಗಳೊಳಗೆ  ನವೀಕರಣ ನಡೆಸಬೇಕು. ತಪ್ಪಿದಲ್ಲಿ ಅಂತಹ ಉದ್ದಿಮೆಗಳಿಗೆ ಬೀಗ ಹಾಕಲಾಗುವುದು. ಅಧಿಕಾರಿಗಳ ನೇತೃತ್ವದ ವಿಶೇಷ ತಂಡ ರಚಿಸಿ ಅನಧಿಕೃತ ಗೂಡಂ ಗಡಿಗಳನ್ನು ಒಂದು ತಿಂಗಳೊಳಗೆ ತೆರವು ಮಾಡಬೇಕು ಎಂದು ಮೇಯರ್‌ ಕವಿತಾ ಸನಿಲ್‌ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಗುರುವಾರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ  ಅವರು ಮಾತನಾಡಿದರು.

Advertisement

ಉದ್ದಿಮೆ ಪರವಾನಿಗೆ ನವೀಕರಣ ಕುರಿತಂತೆ ಸದಸ್ಯ ಎ.ಸಿ. ವಿನಯ್‌ರಾಜ್‌ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಅಧಿಕಾರಿ, ‘ಈಗಾಗಲೇ ಪರವಾನಿಗೆ ನವೀಕರಿಸದವರಿಗೆ ನೋಟಿಸ್‌ ನೀಡಲಾಗುತ್ತಿದೆ. ಮುಂದಿನ 1 ತಿಂಗಳೊಳಗೆ ನೋಟಿಸ್‌ ನೀಡಲಾಗುವುದು’ ಎಂದರು. ಇದಕ್ಕೆ ಆಕ್ಷೇಪಿಸಿದ ಮೇಯರ್‌   ವಾರದೊಳಗೆ ನೋಟಿಸ್‌ ಕಳುಹಿಸಿ, ತಿಂಗಳೊಳಗೆ ನವೀಕರಿಸಬೇಕು ಎಂದು ಸೂಚಿಸಿದರು. 

ಸದಸ್ಯೆ ಅಪ್ಪಿ ಮಾತನಾಡಿ, ಗೂಡಂಗಡಿ ತೆರವು ಕಾರ್ಯಾಚರಣೆ ಸರಿಯಾಗಿ ನಡೆಯುತ್ತಿಲ್ಲ. ಒಂದು ಬದಿಯಲ್ಲಿ ತೆರವು ಮಾಡುವಾಗ ಇನ್ನೊಂದು ಬದಿಯಲ್ಲಿ  ಅವುಗಳು ತಲೆಯೆತ್ತುತ್ತಿವೆ. ಇದಕ್ಕಾಗಿ ನಾಲ್ಕೂ ಕಡೆಗಳಿಂದ ಏಕಕಾಲಕ್ಕೆ  ಕಾರ್ಯಾ ಚರಣೆ ನಡೆಯಬೇಕು ಎಂದರು.

ಸ್ಮಾರ್ಟ್‌ಸಿಟಿ; ಕಾರ್ಪೊರೇಟರ್‌ಗಳ ಗಮನಕ್ಕೆ ಬರುತ್ತಿಲ್ಲ !
ದೀಪಕ್‌ ಪೂಜಾರಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯನ್ನು ಕೇವಲ 6 ವಾರ್ಡ್‌ಗಳಿಗೆ ಮಾತ್ರ ಸೀಮಿತ ಗೊಳಿಸಲಾಗಿದೆ. ಸಾವಿರಾರು ಕೋ.ರೂ.ಗಳ ಈ ಯೋಜನೆಯನ್ನು ಅಭಿವೃದ್ಧಿ ಹೊಂದಿದ ಸ್ಥಳಗಳಿಗೇ ಸೀಮಿತಗೊಳಿ ಸುವುದು ಸರಿಯಲ್ಲ ಹಾಗೂ  ಈ ವಿಷಯದಲ್ಲಿ ಕಾರ್ಪೊರೇಟರ್‌ಗಳನ್ನು ಕತ್ತಲಲ್ಲಿಟ್ಟಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿ ಕಾರ್ಪೊರೇಟರ್‌ ವಿಜಯ್‌ ಕುಮಾರ್‌ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ನಗರದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕಿತ್ತು. ಅಭಿವೃದ್ಧಿ ಆಗಿರುವ ಜಾಗವನ್ನು ಆಯ್ಕೆ ಮಾಡಿದ್ದು ಸರಿಯಲ್ಲ ಎಂದರು.

ಎ.ಸಿ.ವಿನಯ್‌ರಾಜ್‌ ಮಾತನಾಡಿ, ಸ್ಮಾರ್ಟ್‌ಸಿಟಿ ಏರಿಯಾ ಬೇಸ್ಡ್ ಆಗಿ ಆಯ್ಕೆಯಾಗಿರುವುದರಿಂದ ಹಾಗೂ ಮೀನುಗಾರಿಕ ಬಂದರನ್ನು ಜೋಡಿಸಿ ಮಾಡಿರುವುದರಿಂದ ಕೈಗೊಳ್ಳಲಾಗಿದೆ. ಆದರೆ, ಈ ಯೋಜನೆಯ ನೆಪದಲ್ಲಿ ಪಾಲಿಕೆಯ ಇತರ ವಾರ್ಡ್‌ಗಳ ಅಭಿವೃದ್ಧಿ ಕುಂಠಿತವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. 

Advertisement

ಕಾರ್ಪೊರೇಟರ್‌ಗಳನ್ನು ಕತ್ತಲಲ್ಲಿಟ್ಟು ಈ ಯೋಜನೆಯ ರೂಪುರೇಷೆ ಮಾಡಿ ರುವುದು ಸರಿಯಲ್ಲ ಎಂದು ರಾಧಾಕೃಷ್ಣ  ಹೇಳಿದರು. ಸ್ಮಾರ್ಟ್‌ಸಿಟಿ ಸಭೆಗೆ ಪಾಲಿಕೆ ಸದಸ್ಯರಿಗೂ ಅವಕಾಶ  ಅಗತ್ಯ ಎಂಬ ಆಗ್ರಹ ಬಿಜೆಪಿಯ ರಾಜೇಂದ್ರ  ಅವರಿಂದ ಕೇಳಿ ಬಂತು.

ಸ್ಮಾರ್ಟ್‌ಸಿಟಿ; ಮುಂದಿನ ವಾರ ವಿಶೇಷ ಸಭೆ 
ಆಯುಕ್ತರು ಉತ್ತರಿಸಿ, ಇದು ಏರಿಯಾ ಬೇಸ್ಡ್ ಆಗಿ ಕೈಗೊಂಡ ಪ್ರಸ್ತಾವನೆಗೆ ಕೇಂದ್ರದ ಒಪ್ಪಿಗೆ ದೊರೆತಿರುವುದರಿಂದ ಅದೇ ರೀತಿ ಯಲ್ಲಿ  ಕೆಲಸ ನಿರ್ವಹಿಸಬೇಕಿದೆ. ಒಟ್ಟು 65 ಯೋಜನೆಗಳು  ಇದರಲ್ಲಿ ಬರಲಿದ್ದು, 27 ಯೋಜನೆಗಳಿಗೆ ತಾಂತ್ರಿಕ ಒಪ್ಪಿಗೆ ದೊರೆ ತಿವೆ. ಜತೆಗೆ ಸ್ಮಾರ್ಟ್‌ ರಸ್ತೆ, ಕಮಾಂಡ್‌ ಸೆಂಟ್ರಲ್‌ ಸ್ಕೀಂ ಹಾಗೂ ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌ ಯೋಜನೆಗೆ ಡಿಪಿಆರ್‌ ಕೂಡ ಸಿದ್ಧವಾಗಿದೆ. ಉಳಿದಂತೆ ಪಾನ್‌ಸಿಟಿ ಯೋಜನೆ ಕೈಗೊಳ್ಳುವಾಗ ಪಾಲಿಕೆಯ ಎಲ್ಲ ವಾರ್ಡ್‌ಗಳನ್ನು ಪರಿಗಣಿಸಲಾಗುತ್ತದೆ ಎಂದರು. ಮಾಜಿ ಮೇಯರ್‌ ಹರಿನಾಥ್‌ ಮಾತನಾಡಿ, ಈ ಬಗ್ಗೆ ವಿಶೇಷ ಸಭೆ ನಡೆಸಿ ಮಾಹಿತಿ ನೀಡುವಂತೆ ಆಗ್ರಹಿಸಿದಾಗ, ಮುಂದಿನ ತಿಂಗಳು ಪ್ರತ್ಯೇಕ ಸಭೆ ನಡೆಸ ಲಾಗುವುದು ಎಂದು ಮೇಯರ್‌ ಹೇಳಿದರು. 

ಟೆಂಡರ್‌ ಆಗದೆ ನಡೆದ ಕಾಮಗಾರಿ; ವಾಗ್ವಾದ
ಪಾಲಿಕೆಯಲ್ಲಿ ಬೃಹತ್‌ ಚರಂಡಿ ಕಾಮಗಾರಿ ಕುರಿತಂತೆ ಬಿಜೆಪಿ ಸದಸ್ಯರು ಆಕ್ಷೇಪಿಸಿ, ಬಹುತೇಕ ಚರಂಡಿ ಕಾಮ ಗಾರಿಗಳು ಈ ಬಾರಿ ನಡೆಯಲೇ ಇಲ್ಲ. ಆದರೆ, ಮಾಧ್ಯಮಗಳಲ್ಲಿ ಟೆಂಡರ್‌ ಆಗಿದೆ ಎಂದು ಬರುತ್ತಲೇ ಇದ್ದು, ಕೆಲವೆಡೆ ಸಮಸ್ಯೆಗಳು ಕಾಣಿಸಿಕೊಂಡಿವೆ. ಬೃಹತ್‌ ಚರಂಡಿ ಹೂಳೆತ್ತುವುದು ಆಗಲೇ ಇಲ್ಲ ಎಂದು ವಿಪಕ್ಷ ನಾಯಕ ಗಣೇಶ್‌ ಹೊಸಬೆಟ್ಟು, ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ರೂಪಾ ಡಿ. ಬಂಗೇರ, ಹರೀಶ್‌ ಕುಮಾರ್‌ ಮುಂತಾದವರು  ಹೇಳಿದರು. ಮುಖ್ಯಸಚೇತಕ ಶಶಿಧರ ಹೆಗ್ಡೆ ಮಾತನಾಡಿ, ಬೃಹತ್‌ ಚರಂಡಿ ಕೆಲಸ ಬಹುತೇಕ  ಆಗಿದೆ. ಎಲ್ಲಿ ಆಗಿಲ್ಲ ಎಂಬುದರ ಬಗ್ಗೆ ಸದಸ್ಯರು ವರದಿ ನೀಡಲಿ ಎಂದರು. ಪ್ರೇಮಾನಂದ ಶೆಟ್ಟಿ ಮಾತನಾಡಿ, ಟೆಂಡರ್‌ ಪ್ರಕ್ರಿಯೆ ಆಗದೆ, ಚರಂಡಿ ಕೆಲಸ ಹಾಗಾದರೆ ಮಾಡಿದ್ದಾರೆಯೇ? ಈ ಬಗ್ಗೆ ವಿವರ ಕೊಡಿ ಎಂದರು. 

ಟೆಂಡರ್‌ ಬಗ್ಗೆ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತದೆ. ನಮಗೆ ತುರ್ತಾಗಿ ಹಾಗೂ ಮಳೆಗಾಲ ಎದುರಿಸಲು ಕೆಲಸ ನಡೆಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯರ ಆಗ್ರಹದ ಮೇರೆಗೆ ಕೆಲಸ ಮಾಡುವುದು ಕಾರ್ಪೊರೇಟರ್‌ ಕೆಲಸ ಎಂದು ಶಶಿಧರ ಹೆಗ್ಡೆ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಟೆಂಡರ್‌ ಆಗದೆ ಕೆಲಸ ನಿರ್ವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದಾಗ, ದಸರಾ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ ಅಥವಾ ತುರ್ತಾಗಿ ಆಗಬೇಕಾದ ಕೆಲಸ ಗಳಿದ್ದಾಗ ಟೆಂಡರ್‌ ಕರೆಯದೆ ತತ್‌ಕ್ಷಣಕ್ಕೆ ಕೆಲಸ ಮಾಡಬೇಕಾಗುತ್ತದೆ ಎಂದು ಮೇಯರ್‌ ಹೇಳಿದರು. 

ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ರವೂಫ್‌ ಮಾತನಾಡಿ, ಮಳೆಗಾಲದಲ್ಲಿ ಗ್ಯಾಂಗ್‌ ರಚಿಸಿ ಎಲ್ಲ ಕೆಲಸ ಮಾಡಲಾಗಿದೆ. ಟೆಂಡರ್‌ ಸ್ವಲ್ಪ ತಡವಾಗಿರಬಹುದು. ಆದರೆ ಎಲ್ಲಿ ಕಾಮಗಾರಿ ಆಗಿಲ್ಲ ಎಂದು ಸದಸ್ಯರು ತಿಳಿಸಿದರೆ, ಅಲ್ಲಿಗೆ ಟೆಂಡರ್‌ ಅನ್ನೇ ರದ್ದುಗೊಳಿಸಲಾಗುವುದು ಎಂದರು. 

ಶಾಸಕ ಮೊದಿನ್‌ ಬಾವಾ, ವಿಧಾನ ಪರಿಷತ್‌ ಮುಖ್ಯಸಚೇತಕ ಐವನ್‌ ಡಿ’ಸೋಜಾ, ಉಪಮೇಯರ್‌ ರಜನೀಶ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಅಬ್ದುಲ್‌ ರವೂಫ್‌, ನಾಗವೇಣಿ, ಸಬಿತಾ ಮಿಸ್ಕಿತ್‌, ಪ್ರತಿಭಾ ಕುಳಾಯಿ ಉಪಸ್ಥಿತರಿದ್ದರು.

ಅಭಿವೃದ್ಧಿಕೋಶ ಅಧಿಕೃತವಲ್ಲ; ಹಾಗಾದರೆ…!?
ಬಿಜೆಪಿ ಸದಸ್ಯ ಪ್ರೇಮಾನಂದ ಶೆಟ್ಟಿ ಮಾತನಾಡಿ,  ಪಾಲಿಕೆಯಲ್ಲಿ ಆಡಳಿತ ಪಕ್ಷದೊಳಗೆ ರಾಜಕೀಯ ಲೆಕ್ಕಾಚಾರವೇ ನಡೆಯುತ್ತಿದೆ. ಹೀಗಾಗಿ ಮೇಯರ್‌ ತಮ್ಮ ಸದಸ್ಯರ ಮೂಲಕ ಪ್ರಶ್ನೆ ಕೇಳಿಸುತ್ತಿರುವಂತೆ ಕಾಣುತ್ತಿದೆ. ಅಭಿವೃದ್ಧಿ ಚಟುವಟಿಕೆ ಕ್ಷೀಣವಾಗಿದೆ. ಅಭಿವೃದ್ಧಿ ಕೋಶದ ಸಭೆಗೆ ಮೇಯರ್‌ ಗೈರಾಗುತ್ತಿದ್ದಾರೆ. ಒಂದು ಸಭೆಗೆ ಬಂದು ಆಯುಕ್ತರ ವಿರುದ್ಧ ಗರಂ ಆಗಿ, ಸಭಾತ್ಯಾಗ ಮಾಡಿದ್ದರು ಎಂದರು. ಮೇಯರ್‌ ಮಾತನಾಡಿ, ಅಭಿವೃದ್ಧಿ ಕೋಶದ ಸಭೆ ಅಧಿಕೃತವೇನಲ್ಲ. ಹೀಗಾಗಿ ಅದಕ್ಕೆ ಹೋಗಲೇಬೇಕೆಂದಿಲ್ಲ ಎಂದರು. ಪ್ರೇಮಾನಂದ ಶೆಟ್ಟಿ ಮಾತನಾಡಿ, ಅದು ಅಧಿಕೃತವಲ್ಲ ಎಂದಾದರೆ, ಪಾಲಿಕೆಯ ಅಜೆಂಡಾ ಪುಸ್ತಕದಲ್ಲಿ ಅಭಿವೃದ್ಧಿ ಕೋಶದ ಸಭೆಯ ಉಲ್ಲೇಖ ಮಾಡುವುದು ಯಾಕೆ ಹಾಗೂ ಅದರ ವಿಷಯಗಳು ಇಲ್ಲಿಗೆ ಬಂದದ್ದು ಯಾಕೆ ಎಂದು ಪ್ರಶ್ನಿಸಿದರು.

ಅಕ್ರಮ ಮಸಾಜ್‌ ಪಾರ್ಲರ್‌ಗಳ ವಿರುದ್ಧ  ಕ್ರಮ
ಮಸಾಜ್‌ ಪಾರ್ಲರ್‌ಗೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ಹೈಕೋರ್ಟ್‌ ತೀರ್ಪಿನ ಪ್ರತಿ ಪಾಲಿಕೆಗೆ ದೊರೆತಿದೆ. ಅದರಂತೆ ಮೇಯರ್‌ ಹಾಗೂ ಆಯುಕ್ತರು ದಂಡ ಕಟ್ಟಬೇಕು ಎಂಬುದನ್ನು ನ್ಯಾಯಾಲಯ ಕೈಬಿಟ್ಟಿದೆ ಹಾಗೂ ಅಕ್ರಮ ಮಸಾಜ್‌ ಪಾರ್ಲರ್‌ಗಳು ಇದ್ದರೆ ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದನ್ನು ತಿಳಿಸಿದೆ. ಹೀಗಾಗಿ ಅಕ್ರಮ ಮಸಾಜ್‌ ಪಾರ್ಲರ್‌ಗಳ ವಿರುದ್ಧದ ಕಾನೂನು ಕ್ರಮ ಮುಂದಿನ ತಿಂಗಳಿನಿಂದ ಮತ್ತೆ ನಡೆಯಲಿದೆ ಎಂದು ಮೇಯರ್‌   ಹೇಳಿದರು.

ಪಾಲಿಕೆ ಆರ್ಥಿಕ ಪರಿಸ್ಥಿತಿಯೂ; ದೇಶದ ಅರ್ಥವ್ಯವಸ್ಥೆಯೂ
ಕಾಮಗಾರಿಗೆ ಹಣ ಮಂಜೂರು ಕುರಿತಂತೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುತ್ತಿರುವ ಸಮಯದಲ್ಲಿ ಮಾತನಾಡಿದ ಬಿಜೆಪಿಯ ರೂಪಾ ಡಿ. ಬಂಗೇರ, ಪಾಲಿಕೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಸ್ಥಿತಿಯಲ್ಲಿದೆ. ಕಾಮಗಾರಿಗಳಿಗೆ ಸರಿಯಾಗಿ ಹಣ ಮಂಜೂರಾಗುತ್ತಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ  ಅಪ್ಪಿ ಅವರು,  ಪಾಲಿಕೆ ಆರ್ಥಿಕ ಪರಿಸ್ಥಿತಿ ಸರಿಯಾಗಿಯೇ ಇದೆ. ಆದರೆ  ದೇಶದ ಆರ್ಥಿಕ ಪರಿಸ್ಥಿತಿಯೇ ಹದಗೆಟ್ಟಿದೆ ಎಂಬ ಆತಂಕ ನಮ್ಮಲ್ಲಿದೆ ಎಂದರು!

Advertisement

Udayavani is now on Telegram. Click here to join our channel and stay updated with the latest news.

Next