ಕಲಬುರಗಿ: ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಶುರುವಾಗಿದೆ. ಇದರಿಂದ ಬಿಜೆಪಿಗೆ ನಷ್ಟ. ಮುಂದಿನ ದಿನಗಳಲ್ಲಿ ಇದು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ. ರಾಜಕೀಯ ಜೀವನದಲ್ಲಿ ನಾನು ಅ ಧಿಕಾರದ ಹಿಂದೆ ಹೋದವನಲ್ಲ. ಬಿಜೆಪಿಯ ಅನೇಕರು ಅವರ ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ. ಕಚ್ಚಾಟ ವ್ಯಾಪಕಗೊಂಡು ಸರ್ಕಾರ ಬಿದ್ದರೆ ಮತ್ತೆ ಅಧಿಕಾರ ಹಿಡಿಯುವ ಯೋಚನೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದೆ. ಈ ವರ್ಷ 9 ಸಾವಿರ ಕೋಟಿ ಕಡಿಮೆಯಾಗಿದೆ. ಮುಂದಿನ ವರ್ಷ 11,258 ಕೋಟಿ ಕಡಿಮೆಯಾಗಲಿದೆ. ಯಡಿಯೂರಪ್ಪ ಮತ್ತು ಇಪ್ಪತ್ತೆ$çದು ಜನ ಎಂಪಿಗಳು ಏನು ಮಾಡ್ತಿದ್ದಾರೆ? ಇದರ ಬಗ್ಗೆ ಯಾರದ್ರು ಧ್ವನಿ ಎತ್ತುತ್ತಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.
ಅನ್ಯಾಯದ ಬಗ್ಗೆ ಧ್ವನಿ ಎತ್ತದಿರಲು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಂಡರೆ ಇವರಿಗೆ ಭಯ. ಹೀಗಾಗಿಯೇ ಕೇಂದ್ರದೊಂದಿಗೆ ಯಾವುದೇ ಹಂತದಲ್ಲಿ ಮಾತುಕತೆ ನಡೆಸಿಲ್ಲ. ಕೊನೇ ಪಕ್ಷ ಸರ್ವಪಕ್ಷ ನಿಯೋಗ ಸಹ ಕರೆದುಕೊಂಡು ಹೋಗಿಲ್ಲ. ಅನುದಾನ ಅನ್ಯಾಯ ವಿರುದ್ಧ ಹಾಗೂ ಕಡಿಮೆ ಮೊತ್ತದ ಪರಿಹಾರ ನೀಡಿರುವುದರ ವಿರುದ್ಧ ಚಕಾರ ಎತ್ತದಿರುವ ಹಿನ್ನೆಲೆಯಲ್ಲೇ ಯಡಿಯೂರಪ್ಪ ವೀಕೆಸ್ಟ್ ಮುಖ್ಯಮಂತ್ರಿ ಆಗಿದ್ದಾರೆಂದು ಮತ್ತೆ ಎಚ್ಚರಿಸುತ್ತೇನೆ ಎಂದರು.
ಹಣಕಾಸು ಆಯೋಗದ ಮಾನದಂಡಗಳಿಂದಾಗಿ ಅನುದಾನ ಹಂಚಿಕೆಯಲ್ಲಿ ಏರುಪೇರಾಗಿದೆ. ತೆರಿಗೆ ಬಿಡುಗಡೆಯಲ್ಲಿಯೂ ಸಮಸ್ಯೆಯಾಗಿದೆ. ಇದರಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಕಡಿತವಾಗಿದೆ. ಈ ಸಂಬಂಧ ಕೇಂದ್ರದ ಜತೆ ಚರ್ಚಿಸಲಾಗಿದೆ. ರಾಜ್ಯಕ್ಕೆ ಆಗುತ್ತಿರುವ ತೊಂದರೆ ಕುರಿತು ಮನವರಿಕೆ ಮಾಡಿಕೊಡಲಾಗುವುದು.
-ಅಶ್ವತ್ಥ ನಾರಾಯಣ, ಡಿಸಿಎಂ