Advertisement

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

05:52 PM May 02, 2024 | Team Udayavani |

ಉದಯವಾಣಿ ಸಮಾಚಾರ
ಶಿರಸಿ: ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಡದೇ ಹೋದರೆ ಪ್ರಗತಿ ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆ ಉತ್ಪನ್ನ, ಮೌಲ್ಯ ವರ್ಧನೆ, ಮಾರುಕಟ್ಟೆಯಲ್ಲಿ ಗಣನೀಯವಾಗಿ ತೊಡಗಿಕೊಂಡರೆ ದೇಶಕ್ಕೆ ಮಾದರಿಯಾಗುವ ಸಾಧ್ಯತೆ ಇದೆ ಎಂದು ಸೆಲ್ಕೋ ಸಂಸ್ಥಾಪಕ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ ಹಂದೆ ಹೇಳಿದರು.

Advertisement

ಬುಧವಾರ ತಾಲೂಕಿನ ಮಾವಿನಕೊಪ್ಪದಲ್ಲಿ ಸೆಲ್ಕೋ ಸೋಲಾರ್‌, ಸೆಲ್ಕೋ ಫೌಂಡೇಶನ್‌ ಸಹಕಾರದಲ್ಲಿ ಸೌರ ಶಕ್ತಿಯ ಆಧರಿತ 20 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಕೋಲ್ಡ ಸ್ಟೋರೇಜ್‌ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಲಾಭವಾಗುವ ಕೆಲಸ ಎಲ್ಲೆಡೆ ಆಗಬೇಕು. ಒಂದು ಯೋಜನೆ ಇತರ ಯುವ ಶಕ್ತಿಯನ್ನೂ ಆಕರ್ಷಿಸುವಂತೆ ಆದಾಗ ಪ್ರಗತಿ ವೇಗ ಪಡೆಯಲಿದೆ. ನಮ್ಮ ಸಮಾಜ, ಮನೆಯಲ್ಲಿ ಕೂಡ ಸವಾಲು ಸ್ವೀಕರಿಸಲು ಹಿಂದೇಟು ಹಾಕಲಾಗುತ್ತದೆ. ಸಂಶೋಧನೆಗೆ ಹಣ ಬೇಕು. ಅದಕ್ಕಾಗಿ ಬ್ಯಾಂಕಿಗೆ ಹೋಗಬೇಕಾದ ಸ್ಥಿತಿ ಇದೆ ಎಂದ ಅವರು, ಉತ್ತರ ಕನ್ನಡ ಮಾದರಿ ಜಿಲ್ಲೆ ಆದರೆ ದೇಶ ಮಟ್ಟದಲ್ಲಿ ಅನುಕೂಲ ಆಗಲಿದೆ. ಹಿಂದೆ ಸಹಕಾರಿ ಆಂದೋಲನ ನಡೆದಿದ್ದರಿಂದ ಇಂದು ಸುಲಭವಾಗಿದೆ. ಈ ರೀತಿಯ ಆಂದೋಲನ ಕೂಡ ಆಗಬೇಕು ಎಂದರು.

ಮಾರುಕಟ್ಟೆ ಸಂಪರ್ಕ ಸಾಧಿಸಿ ಕೆಲಸ ಮಾಡಿದಾಗ ಭವಿಷ್ಯ ಒಳ್ಳೆಯದಾಗಲಿದೆ. ಸಣ್ಣ ರೈತರಿಗೆ ಅನುಕೂಲ ಆಗಬೇಕು. ಅದಕ್ಕೋಸ್ಕರ ಸೆಲ್ಕೋ ಕೆಲಸ ಮಾಡುತ್ತಿದೆ. ಋಣಾತ್ಮಕ ಅಂಶಗಳನ್ನು ಆಲೋಚಿಸದೇ ಕೆಲಸ ಮಾಡಬೇಕು ಎಂದರು.

ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಮೋಹನ ಭಾಸ್ಕರ್‌ ಹೆಗಡೆ ಮಾತನಾಡಿ ಸೌರ ಶಕ್ತಿ ಆಧರಿತ ಇಪ್ಪತ್ತು ಮೆಟ್ರಿಕ್‌ ಟನ್‌ ಸಾಮರ್ಥಯದ ಕೋಲ್ಡ್‌ ಸ್ಟೋರೇಜ್‌ ರಾಜ್ಯದಲ್ಲಿ ಇದು ಮೊದಲನೇಯದು. 22 ಲಕ್ಷ ರೂ. ಯೋಜನೆಯಲ್ಲಿ ಕುಟುಂಬದವರು 7 ಲ.ರೂ. ಹಾಕಿದ್ದಾರೆ.

Advertisement

ಆರ್ಥಿಕತೆಯೊಂದಿಗೆ ಇದೊಂದು ಸಾಮಾಜಿಕ ಜವಾಬ್ದಾರಿ ಕಾರ್ಯ. 78 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಲಾರ್‌ ಘಟಕ, 300 ಶಾಲೆಗಳಲ್ಲಿ ಡಿಜಿಟಲೀಕರಣಕ್ಕೆ ಸೆಲ್ಕೋ ನೆರವಾಗಿದೆ. 170 ಕ್ಕೂ ಅಧಿಕ ಜೀವನೋಪಾಯ ಉತ್ಪನ್ನಗಳಿಗೆ ನೆರವು ನೀಡಲಾಗುತ್ತಿದೆ ಎಂದರು. ಡಬ್ಲ್ಯುಎಚ್‌ಒ ಪ್ರಮುಖ ನೆದರಲ್ಯಾಂಡ್‌ನ‌ ಜಪರಿ ಪ್ರಿನ್ಸ್‌, ಸೆಲ್ಕೋ ಮೂಲಕ ಗ್ರಾಮೀಣ ಪ್ರಗತಿಗೆ ಅನುಕೂಲ ಆಗುವ ಕಾರ್ಯ ಮಾಡಲಾಗುತ್ತಿದೆ. ಅನ್ವೇಷಣೆ, ಕ್ರಾಂತಿ, ಸುಸ್ಥಿರ ಇಂಧನದ ಬಳಕೆ ಹೆಚ್ಚಲಿ ಎಂದರು.

ಭಾರತೀಯ ವಿಜ್ಞಾನ ಮಂದಿರದ ಗೋಪಾಲಕೃಷ್ಣ ಹೆಗಡೆ, ಸೆಲ್ಕೋ ಸಂಸ್ಥೆ ಸೋಲಾರ್‌ ಟು ರೂರಲ್‌ ಆಗಿ ಕೆಲಸ ಮಾಡುತ್ತಿದೆ ಎಂದರು. ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ಮಾತನಾಡಿ ಸೆಲ್ಕೋ ಸೋಲಾರ್‌ ಒಂದು ಕ್ರಾಂತಿ ಮಾಡುಡುತ್ತಿದೆ. ರಾಗಿ ಮಾಲ್ಟ್‌ ನಿಂದ ಅನೇಕ ವಸ್ತುಗಳ ಮೌಲ್ಯವರ್ಧನೆ ಆಗಬೇಕು. ಇಂದು ಹತ್ತು ಕೋಟಿ ಮೌಲ್ಯದ
ಹಲಸು ನಾಶವಾಗುತ್ತಿದೆ. ಉತ್ತರ ಕನ್ನಡದ ಋತುಮಾನ ಬೆಳೆಗಳ ಸಂರಕ್ಷಣೆ ಕಾರ್ಯ ಆಗಬೇಕು. ಕೋಲ್ಡ್‌ ಸ್ಟೋರೇಜ್‌, ಸೋಲಾರ್‌ ಡ್ರಾಯರ್‌ ಬೇಕು. ಸಣ್ಣ ಸಣ್ಣ ಘಟಕಗಳ ಬಗ್ಗೆ ಆಲೋಚಿಸಬೇಕಾಗಿದೆ ಎಂದರು.

ಮಾವಿನಕೊಪ್ಪದ ವಿಕಾಸ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ನೈಸರ್ಗಿಕ ಸಂಪತ್ತು ಹಾಳಾಗದಂತೆ ನೋಡಿಕೊಳ್ಳಲು ಶೀತಲೀಕರಣ ಘಟಕ ನೆರವಾಗುತ್ತದೆ. ಲಕ್ಷಾಂತರ ರೂ. ನಷ್ಟ ಆಗುವುದನ್ನು ತಡೆಗಟ್ಟಬಹುದು ಎಂದರು. ಮಹತೀ ಎಂಟರ್‌ಪ್ರೈಸಸ್‌ನ ನಾಗರಾಜ್‌ ಜೋಶಿ, ಚಂದ್ರಶೇಖರ ಹೆಗಡೆ, ಭುವನೇಶ್ವರಿ ಜೋಶಿ, ಮಂಜುನಾಥ ಭಾಗವತ್‌, ಸುಬ್ರಾಯ ಹೆಗಡೆ, ನಾರಾಯಣ ಹೆಗಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next