ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಜಾತ್ಯಾತೀತ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಿದರೆ ಮೋದಿಗೆ ಸೋಲು ಖಚಿತ ಎಂದು ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಂದೂ ಪಕ್ಷದಲ್ಲಿ ಟಿಕೆಟ್ ಕೇಳಿದವನಲ್ಲ. ಪಕ್ಷವೇ ನನಗೆ ಕರೆದು ಟಿಕೆಟ್ ಕೊಟ್ಟಿದೆ ಎಂದರು.
ಪಾಟ್ನಾದಲ್ಲಿ ನಡೆದ ಬಿಜೆಪಿಯೇತರ 19 ಕ್ಕೂ ಹೆಚ್ವು ಜಾತ್ಯಾತೀತ ಪಕ್ಷಗಳು ಸೇರಿ ಮುಂದಿನ ಲೋಕಸಭಾ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು. ಕರ್ನಾಟಕದಲ್ಲಿ ಯಾವುದೇ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪಾಟ್ನಾದಲ್ಲಿ ನಡೆದ ಸಭೆಗೆ ಜೆಡಿಎಸ್ ಭಾಗವಹಿಸಿಲ್ಲ ಆಗಾಗಿ ಆ ಪಕ್ಷದ ಬಗ್ಗೆ ಏನು ಮಾತನಾಡಲ್ಲ ಎಂದು ಮೊಯ್ಲಿ ಹೇಳಿದರು.
ಇದನ್ನೂ ಓದಿ:ಮೋದಿ ವಿರುದ್ಧ ಪಾಟ್ನಾದಲ್ಲಿ ‘ವ್ಯಾಗ್ನರ್’ ಪಡೆ ಒಂದಾಗಿದೆ: ಸಾಮ್ನಾ ಸಂಪಾದಕೀಯದಲ್ಲಿ ಶಿವಸೇನೆ
ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ ಸಾಕಷ್ಟು ನದಿಗಳು ಬಂದು ಸೇರುತ್ತವೆ. ಮುಂದಿನ ಜಿಪಂ, ತಾಪಂ ಚುನಾವಣೆಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಾನು ಕೂಡ ಪ್ರತಿ ಗ್ರಾಮ ಪಂಚಾಯತವಾರು ಪ್ರವಾಸ ಮಾಡುವೆ ಎಂದ ಅವರು, ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ನೂರಾರು ಮಂದಿ ಟಿಕೆಟ್ ಆಕಾಂಕ್ಷಿಗಳು ಇರಲಿ. ಅದು ಪಕ್ಷದ ಬಲ ತೋರಿಸುತ್ತದೆ ಎಂದರು.
ಕಾಂಗ್ರೆಸ್ ದಮ್ಮು ತಾಕತ್ತು ತೋರಿಸಿ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆಂದು ವೀರಪ್ಪ ಮೊಯ್ಲಿ, ಬಿಜೆಪಿಯದು ಬರೀ ದರ್ಪ, ದೌರ್ಜನ್ಯದ ಸರ್ಕಾರ. ಮುಂದೆ ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.