ಬೆಂಗಳೂರು: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ರವಿವಾರ ನಡೆಯುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ್ ನಲ್ಲಿ ಬಿಜೆಪಿ ಅಧಿಕಾರದತ್ತ ನಡೆದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
“ಸನಾತನ ಧರ್ಮದ ನಿಂದನೆಯು ಅದರ ಪರಿಣಾಮಗಳನ್ನು ಉಂಟುಮಾಡುತ್ತದೆ” ಎಂದು ವೆಂಕಟೇಶ್ ಪ್ರಸಾದ್ ಅವರು ಎಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿ ದೊಡ್ಡ ರಾಜಕೀಯ ವಿವಾದವನ್ನು ಎಬ್ಬಿಸಿದ್ದರು. ಮಿತ್ರಪಕ್ಷ ಕಾಂಗ್ರೆಸ್, “ಸರ್ವಧರ್ಮ ಸಂಭವ” (ಎಲ್ಲಾ ಧರ್ಮಗಳಿಗೆ ಸಮಾನ ಗೌರವ) ಅನ್ನು ನಂಬುತ್ತದೆ ಎಂದು ಹೇಳಿತ್ತು.
ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅವರು ರಾಜಸ್ಥಾ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ್ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಶುಭ ಹಾರೈಸಿದ್ದಾರೆ.
“ಪ್ರಚಂಡ ವಿಜಯಕ್ಕಾಗಿ ಬಿಜೆಪಿಗೆ ಹಲವು ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿ ಜಿ ಮತ್ತು ಅಮಿತ್ ಶಾ ಅವರ ಅದ್ಭುತ ನಾಯಕತ್ವ ಮತ್ತು ತಳಮಟ್ಟದ ಪಕ್ಷದ ಕಾರ್ಯಕರ್ತರ ಮಹತ್ತರ ಕಾರ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ” ಎಂದು ಅವರು ಬರೆದಿದ್ದಾರೆ.