Advertisement

ಮುಳ್ಳು ಸೌತೆ ಬೆಳೆದರೆ ನಿತ್ಯವೂ ಆದಾಯ

02:56 PM Sep 16, 2018 | |

ತರಕಾರಿ ಬೆಳೆಯಿಂದ ದಿನನಿತ್ಯ ಆದಾಯ ಗಳಿಸಲು ಸಾಧ್ಯವೇ? ಈ ಪ್ರಶ್ನೆಗೆ ಹೌದು ಎಂಬ ಉತ್ತರ ನೀಡುತ್ತಿದೆ ಉಬರಡ್ಕ ಗ್ರಾಮದ ಅಮೈಯಲ್ಲಿ ಎಕರಗಟ್ಟೆಲೆ ಪ್ರದೇಶದಲ್ಲಿ ಮೈದುಂಬಿರುವ ತರಕಾರಿ ತೋಟ..!

Advertisement

ಯುವ ಕೃಷಿಕ ಬಾಲಚಂದ್ರ ಅಮೈ ಅವರು ಸುಮಾರು ಒಂದು ಎಕರೆ ಜಾಗದಲ್ಲಿ ನಿರ್ಮಿಸಿದ ಮುಳ್ಳು ಸೌತೆಯ ತೋಟ ಈಗ ಅವರ ಪಾಲಿಗೆ ದಿನ ನಿತ್ಯ ಆದಾಯ ತರುವ ಕೃಷಿ. ಬಹು ಬೆಳೆ ಪ್ರಯೋಗಶೀಲತೆಯ ಕೃಷಿಕನಾಗಿರುವ ಇವರು, ಈ ಬಾರಿ ಮುಳ್ಳು ಸೌತೆ ನಾಟಿ ಮಾಡಿ ಅದರಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ನಾಟಿ ಸಂದರ್ಭದಲ್ಲಿ ಇಬ್ಬರು ಕೂಲಿ ಕಾರ್ಮಿಕರನ್ನು ಬಳಸಿದ್ದು ಬಿಟ್ಟರೆ, ಮಿಕ್ಕ ಎಲ್ಲ ಅವಧಿಯಲ್ಲಿ ಇವರೇ ದುಡಿಯುತ್ತಿದ್ದಾರೆ. ಬಳ್ಳಿ- ಬಳ್ಳಿ ಯೋಗ ಕ್ಷೇಮ ವಿಚಾರಿಸಿ, ಚೆನ್ನಾಗಿ ಸಲಹಿ ಬದುಕಿನ ಬಂಡಿ ದೂಡುತ್ತಿದ್ದಾರೆ.

ನಾಟಿ ಮಾಡಿದ 45 ದಿನಗಳ ಬಳಿಕ ಇದು ಫಸಲು ನೀಡಲು ಆರಂಭಿಸುತ್ತದೆ. ಈಗ 15 ದಿನಗಳಿಂದ ಪ್ರತಿ ದಿನ ಕಟಾವಿಗೆ ಸಿಕ್ಕಿದೆ. 1.5 ಕ್ವಿಂಟಾಲ್‌ನಷ್ಟು ಮುಳ್ಳು ಸೌತೆ ದೊರೆಯುತ್ತಿದೆ. ಬೆಳಗ್ಗೆ ಕೊಯ್ದು ಸುಳ್ಯದ ಪೇಟೆಯಲ್ಲಿ ಮಾರಾಟ ಮಾಡುತ್ತೇನೆ ಎನ್ನುತ್ತಾರೆ ಕೃಷಿಕ ಬಾಲಚಂದ್ರ ಅವರು.

ಒಂದು ಎಕರೆಯಲ್ಲಿ ಈ ಕೃಷಿ ಇದೆ. ಮಣ್ಣು ಹದ ಮಾಡಿದ ಆರಂಭದಲ್ಲಿ ಬೀಜ ಬಿತ್ತನೆಗೆ 15 ದಿವಸಕ್ಕೆ ಮೊದಲು ಕೋಳಿ ಗೊಬ್ಬರ ಮಣ್ಣಿನ ಜತೆಗೆ ಮಿಶ್ರಣ ಮಾಡಿದ್ದಾರೆ. ಬಿತ್ತನೆಯ ಬಳಿಕ ಹೊಂಗೆ ಹಿಂಡಿ, ಸುಫಲಾ ಸಹಿತ ವಿವಿಧ ಗೊಬ್ಬರವನ್ನು ನೀಡಿದ್ದಾರೆ. ದಿನಂಪ್ರತಿ ಮೂರು ಕ್ವಿಂಟಾಲ್‌ನಷ್ಟು ಇಳುವರಿ ಸಿಗಬೇಕು. ಒಂದು ವಾರದಿಂದ ಮಳೆ ಕಡಿಮೆ ಆದ ಕಾರಣ ಇಳುವರಿ ಸ್ವಲ್ಪ ಕಡಿಮೆ ಆಗಿದೆ. ಮಳೆ ಬಂದರೆ ಫಸಲು ಹೆಚ್ಚಾಗಬಹುದು ಎನ್ನುತ್ತಾರೆ ಅವರು.

ಮೂರು ವರ್ಷದ ಹಿಂದೆ ಮನೆ ಮುಂಭಾಗದಲ್ಲಿ ಕಳೆಗಿಡಗಳು ತುಂಬಿ ಕಾಡಿನಂತಿದ್ದ ಪ್ರದೇಶವನ್ನು ಸಮತಟ್ಟು ಮಾಡಿ ಕೃಷಿ ಆರಂಭಿಸಿದ್ದಾರೆ. ತೊಂಡೆ, ಬದನೆ, ಹರಿವೆ ಹೀಗೆ ನಾನಾ ಬಗೆಯ ಕೃಷಿ ಪ್ರಯೋಗ ಮಾಡಿ ಅದರಿಂದ ಯಶಸ್ಸು ಕಂಡಿದ್ದಾರೆ. ಅಡಿಕೆ, ತೆಂಗು ಕೃಷಿಯ ಜತೆಗೆ ತರಕಾರಿ ಉಪ ಬೆಳೆಯಾಗಿ ಇವರಿಗೆ ಆದಾಯ ತಂದೊಡ್ಡುತ್ತಿದೆ.

Advertisement

ಮುಳ್ಳು ಸೌತೆ ಕೃಷಿಗೆ ನೀರು ಮುಖ್ಯ. ನೀರು ಪೋಲಾಗದಂತೆ ಹನಿ ನೀರಾವರಿ ಪದ್ಧತಿ ಮೂಲಕ ಬಳ್ಳಿಗಳಿಗೆ ನೀರೊದಗಿಸುತ್ತಿದ್ದಾರೆ. ಚಪ್ಪರದ ಬದಲು ಅಲಸಂಡೆ ನಾಟಿ ಮಾದರಿಯಂತೆ ಮುಳ್ಳು ಸೌತೆ ಬಳ್ಳಿಯನ್ನು ಬಿಟ್ಟಿದ್ದಾರೆ. ಸಾಲು ಮಾದರಿ ಈ ಕೃಷಿಯಿಂದ ಕಟಾವು, ಬಳ್ಳಿಗಳ ಆರೋಗ್ಯ ಗಮನಿಸಲು ಸುಲಭವಾಗುತ್ತದೆ

3 ತಿಂಗಳು ಫ‌ಸಲು
ಮುಳ್ಳು ಸೌತೆ ಸುಮಾರು 3 ತಿಂಗಳ ಕಾಲ ಫಸಲು ನೀಡುತ್ತದೆ. ಹೆಚ್ಚು ಬಳಿತರೆ ಅದು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗಾಗಿ ದಿನಲೂ ಬೆಳಗ್ಗೆ ಹದವಾಗಿ ಬೆಳೆತ ಸೌತೆ ಕೊಯ್ದು ಮಾರಾಟ ಮಾಡಬೇಕು. ಈಗ ಕೆ.ಜಿ.ಗೆ 30 ರೂ. ಧಾರಣೆ ಇದೆ. 
 - ಬಾಲಚಂದ್ರ, ಕೃಷಿಕರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next