ನವದೆಹಲಿ: ಒಂದು ವೇಳೆ ದೇಶದ ಜನರು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಸಂತ ಶ್ರೀ ನಾರಾಯಣ ಗುರುಗಳ ಉಪದೇಶವನ್ನು ಪಾಲಿಸಿದ್ದರೆ ಜಗತ್ತಿನ ಯಾವ ಶಕ್ತಿಯಿಂದಲೂ ದೇಶವನ್ನು ಒಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ಲಂಚಬಾಕ ಚಾಲಕ: ಮಗನ ಶವವನ್ನು ತೊಡೆ ಮೇಲೆ ಇಟ್ಟು 90 ಕಿ.ಮೀ ಬೈಕ್ ನಲ್ಲೇ ಸಾಗಿದ ತಂದೆ
ಅವರು ಮಂಗಳವಾರ (ಏಪ್ರಿಲ್ 26) ಶಿವಗಿರಿ ಕ್ಷೇತ್ರದ 90ನೇ ವರ್ಷದ ಯಾತ್ರಾ ಸಂಭ್ರಮ ಮತ್ತು ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಪ್ರಧಾನಿ ಮೋದಿ ಮಾತನಾಡಿದರು.
ಸಮಾಜ ಸುಧಾರಕ, ಕೇರಳದ ಸಂತ ನಾರಾಯಣ ಗುರು ಅವರು ಜಾತಿ ತಾರತಮ್ಯದ ವಿರುದ್ಧ ಹೋರಾಡಿದ್ದರು. ಅವರ ಹೋರಾಟದ ಫಲವಾಗಿ ಸಮಾಜದಲ್ಲಿ ಸುಧಾರಣೆಯ ಕ್ರಾಂತಿಗೆ ಮುನ್ನುಡಿ ಬರೆಯಿತು ಎಂದು ಪ್ರಧಾನಿ ಹೇಳಿದರು.
ಒಂದು ವೇಳೆ ಜನರು ಶ್ರೀ ನಾರಾಯಣ ಗುರುಗಳ ಸಂದೇಶವಾದ ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ ಎಂಬುದನ್ನು ಪಾಲಿಸಿದ್ದರೆ ಜಗತ್ತಿನ ಯಾವ ಶಕ್ತಿಯಿಂದಲೂ ಭಾರತವನ್ನು ಇಬ್ಭಾಗವಾಗಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ ಪ್ರಧಾನಿ ಮೋದಿ, ನಾರಾಯಣ ಗುರುಗಳ ಸಂದೇಶ ಆತ್ಮ ನಿರ್ಭರ್ ಭಾರತದ ಹಾದಿಯಲ್ಲಿ ಮುನ್ನಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದರು.
ನವದೆಹಲಿಯಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ಶ್ರೀ ನಾರಾಯಣ ಧರ್ಮ ಸಂಗಮಂ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಶಿವಗಿರಿಯಲ್ಲಿ ನಡೆಯಲಿರುವ ವರ್ಷಾವಧಿ ಕಾರ್ಯಕ್ರಮದ ಲಾಂಛನವನ್ನು ಪ್ರಧಾನಿ ಮೋದಿ ಅವರು ಬಿಡುಗಡೆಗೊಳಿಸಿದ್ದರು.