ವಾಷಿಂಗ್ಟನ್: ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ಜಗತ್ತಿನ ನಂ. ವನ್ ಶ್ರೀಮಂತ ಎಲಾನ್ ಮಸ್ಕ್ ತೆಕ್ಕೆಗೆ ಹೋದ ಬಳಿಕ ಹಲವಾರು ಬದಲಾಣೆಗೆ ಕಾರಣವಾಗಿದೆ. ಆರಂಭದಲ್ಲೇ ಟ್ವಿಟರ್ ಸಿಇಒ ಪರಾಗ್ ಸೇರಿದಂತೆ ಹಲವು ಉನ್ನತ ಹುದ್ದೆಯಲ್ಲಿದ್ದವರನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಇದೀಗ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪೋಷಕಾಂಶಗಳ ಉಗ್ರಾಣ…ಉತ್ತಮ ಆರೋಗ್ಯಕ್ಕೆ ಹರಿವೆ ಸೊಪ್ಪು ಬಳಸಿ
“ಟ್ವಿಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಶುಕ್ರವಾರ (ನವೆಂಬರ್ 04) ಇ-ಮೇಲ್ ರವಾನಿಸಲಾಗಿದ್ದು, ಕೆಲಸದಿಂದ ವಜಾಗೊಳಿಸುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಉದ್ಯೋಗಿಗಳು ಕಚೇರಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ನೂತನ ಮಾಲೀಕ ಮಸ್ಕ್ ಆಡಳಿತದಲ್ಲಿ ಕಂಪನಿಯ ಭವಿಷ್ಯ ತೂಗುಯ್ಯಾಲೆಯಂತಾಗಿದೆ ಎಂದು ವರದಿ ವಿವರಿಸಿದೆ.
“ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ” ಶುಕ್ರವಾರ ಮಧ್ಯಾಹ್ನದಿಂದ ಆರಂಭವಾಗಲಿದೆ ಎಂದು ಟ್ವಿಟರ್ ಸಂಸ್ಥೆ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಕಂಪನಿಯ ಉದ್ಯೋಗಿಗಳನ್ನು ಕಡಿತಗೊಳಿಸುವ ಕಠಿಣ ಪ್ರಕ್ರಿಯೆ ನಡೆಸುತ್ತಿರುವುದಾಗಿ ತಿಳಿಸಿದೆ.
ಯಾರು ಕೆಲಸ ಕಳೆದುಕೊಳ್ಳಲಿದ್ದಾರೆ, ಯಾರು ಉದ್ಯೋಗದಲ್ಲಿ ಮುಂದುವರಿಯಲಿದ್ದಾರೆ ಎಂಬುದನ್ನು ವೈಯಕ್ತಿಕವಾಗಿ ಇ-ಮೇಲ್ ಮೂಲಕ ಮಾಹಿತಿ ರವಾನಿಸಲಾಗುವುದು ಎಂದು ತಿಳಿಸಿದೆ. ವರದಿಯ ಪ್ರಕಾರ ಸುಮಾರು 4,000ಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
“ಒಂದು ವೇಳೆ ನೀವು ಕಚೇರಿಯಲ್ಲಿದ್ದರೆ…ಅಥವಾ ಕಚೇರಿಗೆ ಬರುವ ಮಾರ್ಗದಲ್ಲಿದ್ದರೆ…ದಯವಿಟ್ಟು ಮನೆಗೆ ವಾಪಸ್ ತೆರಳಿ”. ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ನಿಮಗೆ ನಿಮ್ಮ ಉದ್ಯೋಗದ ಬಗ್ಗೆ ಮುಂದಿನ ಇ-ಮೇಲ್ ನಲ್ಲಿ ಸಂದೇಶ ರವಾನಿಸಲಾಗುವುದು” ಎಂದು ಇ-ಮೇಲ್ ನಲ್ಲಿ ತಿಳಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.