ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಕಟ್ಟೆಕೆರೆ ಬಳಿ ಹೆದ್ದಾರಿಯ ಪೂರ್ವ ಪಾರ್ಶ್ವದಲ್ಲಿ ದೊಡ್ಡ ಗಾತ್ರದ ಗುಂಡಿ ಬಾಯ್ದೆರೆದುಕೊಂಡಿದೆ.
ಈ ಭಾಗದಲ್ಲಿ ಶಾಲೆ, ಹೂವಿನ ಮಾರಾಟದ ಕಟ್ಟೆಯೂ ಕಾರ್ಯಾ ಚರಿಸುತ್ತಿದೆ. ಹೆಚ್ಚಿನ ಜನಸಂಚಾರ ಈ ಭಾಗದಲ್ಲಿದ್ದು, ಶಾಲಾ ಮಕ್ಕಳು ಇದೇ ದಾರಿಯಾಗಿ ಸಾಗುತ್ತಿದ್ದಾರೆ. ಇದರೊಂದಿಗೆ ಹೆದ್ದಾರಿ ವಾಹನಗಳ
ಸಂಚಾರ ಭರಾಟೆ ಇಲ್ಲಿ ಸ್ವಲ್ಪ ಹೆಚ್ಚಾಗಿದ್ದು, ಹೆದ್ದಾರಿಯಲ್ಲೂ ಈ ಭಾಗದಲ್ಲಿ ಹೊಂಡ ನಿರ್ಮಾಣಗೊಂಡಿದೆ.
ಹಾಗಾಗಿ ಈ ಸ್ಥಳ ಅತ್ಯಂತ ಅಪಾಯಕಾರಿಯಾಗಿ ಕಂಡು ಬರುತ್ತಿದ್ದು, ಯಾವುದೇ ಕ್ಷಣದಲ್ಲಿ ಈ ಗುಂಡಿಯು ಮೃತ್ಯು ಕೂಪವಾಗಿ ಪರಿವರ್ತನೆಯಾಗಬಲ್ಲುದು ಎಂದು ನಿತ್ಯ ಸಂಚಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.
ಹೆದ್ದಾರಿ ಪಕ್ಕದಲ್ಲಿ ಮಣ್ಣು ಕುಸಿದು ಈ ಗುಂಡಿ ಬಾಯ್ದೆರೆದು ನಿಂತಿದ್ದು, ಇನ್ನೂ ಮುಂದುವರಿಯಬಹುದಾದ ಮಳೆಯ ತೀವ್ರತೆಗೆ ಹೆದ್ದಾರಿಯೂ ಇದರೊಂದಿಗೆ ಕುಸಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇಲ್ಲಿ ಜೋರಾಗಿ ಮಳೆ ಬಂದಾಗ ನಿಲ್ಲುವ ನೀರಿನಿಂದಾಗಿ ಈ ಗುಂಡಿಯು ಗೋಚರಕ್ಕೆ ಬರುವು ದಿಲ್ಲ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಿತ ಇಲಾಖೆ ಇದನ್ನು ದುರಸ್ತಿಗೊಳಿಸಿ ಸಂಭಾವ್ಯ ಅನಾಹುತವನ್ನು ತಡೆಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.