Advertisement

Modi ಹೇಳದಿದ್ದರೆ ಸ್ವಚ್ಛತೆ, ದೇವಸ್ಥಾನ ಬಿಜೆಪಿಗರಿಗೆ ನೆನಪಾಗುವುದಿಲ್ಲವೇ; ಬೇಳೂರು

09:21 PM Jan 17, 2024 | Shreeram Nayak |

ಸಾಗರ: ಮೋದಿಜಿ ಹೇಳಿದಾಗ ಮಾತ್ರ ಸ್ವಚ್ಛ ಭಾರತದ ಹೆಸರಿನಲ್ಲಿ ಪೊರಕೆ ಹಿಡಿದವರು, ಈಗ ಪ್ರಧಾನಿಗಳ ಮಾತಿನಂತೆ ದೇವಸ್ಥಾನಗಳತ್ತ ಮುಖ ಮಾಡಿದ್ದಾರೆ. ಹಾಗಿದ್ದರೆ ಉಳಿದ ದಿನ ಸ್ವಚ್ಛತೆ, ದೇವಸ್ಥಾನ ಬಿಜೆಪಿಗರಿಗೆ ನೆನಪಾಗುವುದಿಲ್ಲವೇ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದರು.

Advertisement

ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಮೋದಿಯವರು ಸ್ವಚ್ಛ ಭಾರತ ಎಂದು ಹೇಳುತ್ತಿದ್ದಂತೆ ಬಿಜೆಪಿಗರು ದೇಶಾದ್ಯಂತ ಕಸಪೊರಕೆ ಹಿಡಿದು ಹೊರಟರು. ಈಗ ಮೋದಿಜಿ ದೇವಸ್ಥಾನದ ಜಪ ಮಾಡುತ್ತಿದ್ದಂತೆ ಬಿಜೆಪಿಯವರಿಗೆ ನಾಡಿನ ದೇವಸ್ಥಾನಗಳು ನೆನಪಾಗುತ್ತವೆ. ಅವರು ಊಟ ಮಾಡಬೇಡಿ ಎಂದರೆ ಮಾತ್ರ ಇವರು ಊಟ ಬಿಡುತ್ತಾರೆ. ಇಲ್ಲದಿದ್ದರೆ ಇಲ್ಲವಾ? ಹಾಗಿದ್ದರೆ ಮೋದಿಜಿ ಹೇಳಿದಂತೆ ಮಾತ್ರ ಇವರು ಮಾಡುತ್ತಾರೆ. ಅದಿಲ್ಲದಿದ್ದರೆ ಬೇರೇನೂ ಮಾಡುವುದಿಲ್ಲ. ದೇಶದಲ್ಲಿ ಮೋದಿಜಿ ಬಿಟ್ಟರೆ ಬಿಜೆಪಿಯವರಿಗೆ ಬೇರೆ ನಾಯಕ ಕಾಣಿಸುತ್ತಿಲ್ಲ, ಸಿಗುತ್ತಿಲ್ಲ. ಹಿಂದುತ್ವದ ಜಪ ಮಾಡುವವರು ಇಷ್ಟು ದಿನ ಯಾಕೆ ಸುಮ್ಮನಿದ್ದಿದ್ದು? ಇಲ್ಲೀವರೆಗೆ ದೇವಸ್ಥಾನದ ಸ್ವಚ್ಛತೆ ಇವರಿಗೆ ನೆನಪಾಗಲಿಲ್ಲವೇ? ಎಂದು ಕುಟುಕಿದರು.

ಕೆಲವೊಮ್ಮೆ ಧರ್ಮಸ್ಥಳಕ್ಕೆ ಹೋಗಲು ಆಗದಿದ್ದರೆ ಇಲ್ಲಿಂದಲೇ ಕೈಮುಗಿದಂತೆ, ಶ್ರದ್ಧೆಯಿಂದ ದೇವರ ಜಪ ಮಾಡುತ್ತೇವೆ. ಶಬರೀಮಲೆಗೆ ಹೋಗುವ ಅಭಿಲಾಷೆಯಿದ್ದರೂ ಇನ್ನೂವರೆಗೂ ಹೋಗಲು ಆಗಿಲ್ಲ. ಹಾಗೆಯೇ ದೇವರು ಯಾವಾಗ ಕರೆಸಿಕೊಳ್ಳುತ್ತಾನೋ ಆಗ ಖಂಡಿತ ಹೋಗುತ್ತೇವೆ. ನಮ್ಮ ಹಿಂದೂ ದೇವಸ್ಥಾನ ಎಲ್ಲೇ ಇದ್ದರೂ, ಯಾವತ್ತಿಗಾದರೂ ಹೋಗುತ್ತೇವೆ. ಅದರಲ್ಲಿ ಯಾವುದೇ ಭೇದ ಭಾವವಿಲ್ಲ. ಉತ್ತರ ಪ್ರದೇಶಕ್ಕೆ ಹೋದಾಗ ಅಯೋಧ್ಯೆ, ಕಾಶಿ, ಮಥುರಾ ಮೊದಲಾದ ಎಲ್ಲ ದೇವಸ್ಥಾನಗಳಿಗೂ ಭೇಟಿ ಕೊಡುತ್ತೇನೆ. ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದು ತಪ್ಪು ಎಂದು ಅವರು ಅಭಿಪ್ರಾಯ ಪಟ್ಟರು.

ಶ್ರೀರಾಮ ಕೇವಲ ತಮಗೆ ಮಾತ್ರ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿಗರ ವ್ಯವಸ್ಥಿತ ಷಡ್ಯಂತ್ರಗಳ ಕುರಿತು ಮಾತನಾಡಿದ ಅವರು, ಹಿಂದೂಗಳಾದ ನಮಗೂ ರಾಮ ದೇವರು. ನಾವೂ ರಾಮನ ಭಕ್ತರು. ಕಾಂಗ್ರೆಸಿಗರ ಮನೆಯಲ್ಲೂ ರಾಮನ ಪೂಜೆ ನಡೆಯುತ್ತದೆ. ಬಿಜೆಪಿಯವರಿಗೆ ಬೇರೆ. ಕಾಂಗ್ರೆಸಿಗರಿಗೆ ಬೇರೆ ರಾಮ ಇಲ್ಲ. ದೇವರು ಎಲ್ಲರಿಗೂ ಒಂದೇ. ನಾವು ಅವರಿಗಿಂತಲೂ ಶ್ರದ್ಧಾ ಭಕ್ತಿಯಿಂದ ರಾಮ, ಹನುಮಂತನನ್ನೂ ಪೂಜಿಸುತ್ತೇವೆ. ಆದರೆ ಅದನ್ನು ಧರ್ಮದ ಹೆಸರಿನಲ್ಲಿ ದೇವರನ್ನು ವೈಭವೀಕರಿಸುವುದು ತಪ್ಪು. ನಾವು ಸಮಯ ಸಿಕ್ಕಾಗ ಅಯೋಧ್ಯೆಗೆ ಹೋಗಿ ಬರುತ್ತೇವೆ. ಈಗ ಇಲ್ಲಿಂದಲೇ ಕೈ ಮುಗಿಯುತ್ತೇವೆ ಎಂದು ಖಡಕ್ ಉತ್ತರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next