Advertisement
ಇತ್ತೀಚೆಗೆ ಸೂಪರ್ ಮಾರ್ಕೆಟ್‌ನಲ್ಲಿ ಚೈತನ್ಯದ ಚಿಲುಮೆಯಂತೆ ಓಡಾಡಿಕೊಂಡು ದಿನಸಿಗಳನ್ನು ಆಯ್ದುಕೊಳ್ಳುತ್ತಿದ್ದ ನನ್ನ ಬಾಲ್ಯದ ಸಹಪಾಠಿಯಾಗಿದ್ದ ಸ್ನೇಹಾಳನ್ನು ಕಂಡು ಆಶ್ಚರ್ಯ ಹಾಗೂ ಸಂತೋಷದಿಂದ “ಹಾಯ್’ ಎಂದಾಗ ಮುಗುಳ್ನಗುತ್ತ ಪ್ರತಿಸ್ಪಂದಿಸಿದ ಸ್ನೇಹಾ ವಯಸ್ಸಿಗಿಂತ ಹತ್ತು ವರ್ಷ ಚಿಕ್ಕವಳಂತೆ ಕಂಡುಬಂದಳು. ಅವಳ ಮುಖದಲ್ಲಿ ಆತ್ಮವಿಶ್ವಾಸ, ಸಂತೋಷ ಕಂಡ ನಾನು, “ಆವತ್ತು ನೋಡಿದ ಸ್ನೇಹ ಇವಳೇನಾ?’ ಎಂದು ಅಚ್ಚರಿಯಿಂದ, “ಹೇ ನೀನಾ, ನಂಬೋಕೆ ಆಗ್ತಾ ಇಲ್ಲ, ಹೇಗಾಯಿತೆ ಇದೆಲ್ಲಾ?’ ಎಂದಾಗ ಆಕೆ, “ನಾನೆ ಅದೇ ಸ್ನೇಹಾ, ಯಾಕೆ ಆಶ್ಚರ್ಯವಾಗುತ್ತಿದೆಯಾ? ಬದಲಾಯಿಸಿಕೊಂಡೆ ನನ್ನನ್ನೇ, ಈದಿನ ಬಹಳ ತರಾತುರಿಯಲ್ಲಿರುವೆ, ಇನ್ನೊಮ್ಮೆ ಸಿಗೋಣ’ ಎಂದು ಫೋನ್ ನಂಬರ್ ಕೊಟ್ಟಿದ್ದಳು.
Related Articles
Advertisement
ನಂತರ, ಅದೇ ಸ್ನೇಹಾ ಈಗ ಡ್ರೆಸ್, ವ್ಯಕ್ತಿತ್ವದಲ್ಲಿ ಬಹಳ ಸ್ಮಾರ್ಟ್ ಆಗಿದ್ದಳು ಹಾಗೂ ಅವಳಲ್ಲಿ ಜೀವನೋತ್ಸಾಹದ ಸ್ಫೂರ್ತಿ ತುಂಬಿ ತುಳುಕುತ್ತಿತ್ತು. ಅವಳ ಮಾತುಗಳಲ್ಲಿ ಆತ್ಮವಿಶ್ವಾಸ, ಆಶಾಭಾವನೆ ಎದ್ದುಕಾಣುತ್ತಿತ್ತು. ಇದು ಹೇಗೆ ಸಾಧ್ಯವಾಯಿತು ಎನ್ನುವ ಕುತೂಹಲದಿಂದ ಫೋನ್ ಮಾಡಿ ಪೂರ್ವನಿಗದಿಯಂತೆ ಪಾರ್ಕ್ ಒಂದರಲ್ಲಿ ಭೇಟಿಯಾದೆವು. “”ನಿನ್ನಲ್ಲಿನ ಈ ಬದಲಾವಣೆ ನನಗೆ ಬಹಳ ಸಂತೋಷ ಹಾಗೂ ಕುತೂಹಲವನ್ನೂ ಕೆರಳಿಸಿದೆ. ಅಲ್ಲ! ಆವತ್ತು ನಾನು ಭೇಟಿಯಾದಾಗ ಹೇಗಿದ್ದೆ ನೀನು? ಈಗ ಹೇಗಾದೆ ? ಸೂಪರ್! ಐ ಲೈಕ್ ಇಟ್” ಎಂದೆ. “”ನಿನ್ನ ಮಾವ ಹುಷಾರಾದರಾ? ಮಗು ಆರೋಗ್ಯನಾ? ಹೇಗಿದೆ ಜೀವನ?” ಎಂದು ಕೇಳಿದೆ. ಅದಕ್ಕವಳು ಮುಗುಳುನಗುತ್ತ, “”ಪರವಾಗಿಲ್ಲ, ಜೀವನ ಸುಮಾರಾಗಿದೆ. ಜೀವನ ಹೆಚ್ಚು ಬದಲಾಗಿಲ್ಲ. ಆದರೆ, ನಾನು ಬದಲಾದೆ. ಇದಕ್ಕೆ ನನ್ನ ಪತಿ ಹಾಗೂ ಮನೆಯವರ ಸಹಕಾರವನ್ನು ನಾನೆಂದಿಗೂ ಮರೆಯಲಾರೆ” ಎಂದಳು.
“”ಮಾವನಿಗೆ ಮಸಾಜ್, ಔಷಧಿ ಇತ್ಯಾದಿ ಉಪಚಾರಗಳಿಂದ ಈಗ ಎದ್ದು ಕುಳಿತುಕೊಳ್ಳುವಂತಾಗಿರುವರು. ಮಗನೂ ಸ್ವಲ್ಪ ಸುಧಾರಿಸಿರುವನು. ಆದರೆ ಇತ್ತೀಚೆಗೆ ನನ್ನನ್ನು ಕಾಡಿದ ಸಯಾಟಿಕ್ ನೋವಿನಿಂದ ಸುಮಾರು ಮೂರು ತಿಂಗಳು ಬೆಡ್‌ರೆಸ್ಟ್ ತೆಗೆದುಕೊಳ್ಳುವಂತಾಯಿತು. ಪತಿಯಂತೂ ತೀರಾ ಹತಾಶರಾಗಿದ್ದರು. ನಾನು ಮಸಾಜ್, ಯೋಗ, ಇತ್ಯಾದಿಗಳಿಂದ ಗುಣಮುಖಳಾಗುತ್ತಿದ್ದೆ. ಆದರೆ ಈ ಸಮಯ ನನ್ನ ಜೀವನದ ಅತ್ಯಮೂಲ್ಯ ಸಮಯ ಎನ್ನುವಂತಾಗಿದೆ ನನಗೆ. ಈ ಸಮಯದಲ್ಲಿ ಬೇರೇನು ಕೆಲಸ ಮಾಡಲಾಗದ ನಾನು ಮಲಗಿಕೊಂಡೇ ಮನಸ್ಸಿಗೆ ಧೈರ್ಯ ತುಂಬುವಂತಹ ಬದುಕಲು ಕಲಿಯಿರಿ, ರಾಬಿನ್ ಶರ್ಮರ ಬೇರೆಬೇರೆ ಕೃತಿಗಳನ್ನು, ಹಾಗೆಯೇ ಅನೇಕ ಆತ್ಮಸ್ಥೈರ್ಯ ವೃದ್ಧಿಸುವ ಲೇಖನಗಳನ್ನು ಓದತೊಡಗಿದೆ. ಸದಾ ಓದುತ್ತ ಇದ್ದ ನನ್ನಲ್ಲಿ ಹಲವಾರು ಉತ್ತಮ ಆಲೋಚನೆಗಳು ಮೂಡುತ್ತಿದ್ದವು. ಇದನ್ನು ಬರೆದಿಟ್ಟುಕೊಳ್ಳುತ್ತ¤ ಪತಿಯೊಡನೆ ಚರ್ಚಿಸುತ್ತಿದ್ದೆ. ಇದರಿಂದ ನನ್ನಲ್ಲಿ ಬದುಕಿನ ಬಗ್ಗೆ ದೃಷ್ಟಿಕೋನವೇ ಬದಲಾಯಿತು. ಕಷ್ಟಗಳು, ಸಮಸ್ಯೆಗಳು ನಾವಿರುವ ತನಕ ನಮ್ಮ ಹಿಂದೆ ಬರುತ್ತದೆ ಹೋಗುತ್ತದೆ. ಇದಕ್ಕೆ ಕೊನೆಯಿಲ್ಲ ಎಂದು ಅರಿತ ನಾನು ನನ್ನನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದೆ.
ಸಮಸ್ಯೆಯನ್ನು ನೆನೆದು ಕೊರಗುತ್ತ, ನೋಯುತ್ತ ಕುಳಿತರೆ ನನ್ನ ಬದುಕು ಇದರಲ್ಲಿಯೇ ಕೊನೆಗೊಳ್ಳಬಹುದು. ಮತ್ತೆ ನಾನು ಯಾವಾಗ ಸಂತೋಷ, ಖುಶಿಯಿಂದ ಬಾಳುವುದು ಎಂದು ಯೋಚಿಸತೊಡಗಿ ನನ್ನನ್ನೇ ನಾನು ಬದಲಾಯಿಸಿಕೊಳ್ಳಲು ನಿರ್ಧರಿಸಿದೆ. ಬದುಕು ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಅವಕಾಶ ಎಂದು ಅರಿತು ಬದುಕನ್ನೇ ಪ್ರೀತಿಸತೊಡಗಿದೆ. ಹೀಗೆ ನನ್ನಲ್ಲಿ ಅನೇಕ ಬದಲಾವಣೆಗಳು ಕಂಡುಬಂದವು. ವೈದ್ಯರ ಸಂಪೂರ್ಣ ಸಹಕಾರದೊಂದಿಗೆ ನಾನು ದೈಹಿಕ ಹಾಗೂ ಮಾನಸಿಕವಾಗಿಯೂ ಬಹಳಷ್ಟು ಸುಧಾರಿಸಿದೆ.ಕೆಲವೇ ದಿನಗಳಲ್ಲಿ ನಾನು ತರಗತಿಗೆ ಸೇರಿ ಯೋಗ ಹಾಗೂ ಫಿಸಿಯೋಥೆರಪಿ ಕಲಿಯತೊಡಗಿದೆ. ಇದರಿಂದ ನನ್ನಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತಿತ್ತು. ಗೆಳೆಯನಂತಿದ್ದ ಪತಿಯಲ್ಲಿ ಹೇಳಿದೆ- “”ಬದುಕೆಂದರೆ ನೋವು-ನಲಿವುಗಳ ಸಂಗಮ. ಇಲ್ಲಿ ಸಮಸ್ಯೆಗಳು ಸಹಜ. ಇವುಗಳೆಲ್ಲವೂ ನಮ್ಮ ಧೈರ್ಯ, ಸಂತೋಷ, ಆಸಕ್ತಿ ಇತ್ಯಾದಿಗಳನ್ನು ವೃದ್ಧಿಸಲು ಅವಕಾಶ. ಇನ್ನು ಮುಂದೆ ನಾವು ನಮ್ಮ ಜೀವನದ ಬಗ್ಗೆ ಏನೇ ಸಮಸ್ಯೆ ಬಂದರೂ ಜೊತೆಯಾಗಿ ಸಮರ್ಥವಾಗಿ ಎದುರಿಸೋಣ. ಅದು ನೋವಿರಲಿ, ನಲಿವಿರಲಿ, ಯಾವುದೇ ಚಿಂತೆಯಿರಲಿ ಎಲ್ಲವನ್ನೂ ಸಮನಾಗಿ ನಿಭಾಯಿಸಿಕೊಂಡು ಹೋಗೋಣ. ಯಾವತ್ತೂ ಜೀವನದಲ್ಲಿ ಎಂತಹ ಸಂದರ್ಭ ಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಆಶಾವಾದದಿಂದ ಬದುಕೋಣ. ಜೀವನವನ್ನು ಸಮರ್ಥವಾಗಿ ರೂಪಿಸೋಣ ಹಾಗೂ ನಮ್ಮಂತೆ ಕಷ್ಟದಲ್ಲಿರುವವರಿಗೆ ಸ್ಫೂರ್ತಿ ತುಂಬುತ್ತ ಇತರರಿಗೆ ಮಾದರಿಯಾಗಿ ಸಾರ್ಥಕ ಬದುಕನ್ನು ಬಾಳ್ಳೋಣ- ಎನ್ನುತ್ತ ಆಶಾವಾದಿಯಾಗಲು ನಿರ್ಧರಿಸಿದೆ. ಇದನ್ನೇ ಸದಾ ಮೆಲುಕು ಹಾಕುತ್ತ ಸುಪ್ತ ಮನಸ್ಸಲ್ಲಿ ತುಂಬತೊಡಗಿದೆ. ಇದೇ ನನಗೇ ನಾನು ನನ್ನನ್ನೇ ಬದಲಾಯಿಸಿಕೊಂಡೆ. ಮಾವ, ಮಗನಿಗೂ ಯೋಗ ಕಲಿಸುತ್ತ, ಬಾಲ್ಯದ ನನ್ನ ಪ್ರೀತಿಯ ಹವ್ಯಾಸವಾದ ಓದು, ಹಾಡು ಕೇಳುವುದು, ಎಂಬ್ರಾಯಿಡರಿ, ಕ್ರಾಫ್ಟ್ ಗಳನ್ನು ಮಾಡುತ್ತಾ ಮಗಳಿಗೆ ಹಾಗೂ ಆಸಕ್ತರಿಗೆ ಕಲಿಸುತ್ತ ನನ್ನ ಸಮಯವನ್ನು ಆನಂದಿಸುತ್ತೇನೆ. ಪರಿಹಾರವಿಲ್ಲದ ಮಗನ ಸಮಸ್ಯೆಯನ್ನು ಇದೇ ಜೀವನ ಎಂದು ಅರಿತು ಉಳಿದ ವಿಷಯದಲ್ಲಿ ಅವನನ್ನು ಸುಧಾರಿಸಲು ಪ್ರಯತ್ನಮಾಡುತ್ತ ಇದ್ದೇನೆ. ಈಗ ಈ ಕ್ಷಣ ನನ್ನದು ಇದನ್ನು ಆನಂದದಿಂದ ಕಳೆಯಬೇಕು. ನಾನು ಸಂತೋಷದಿಂದ ಇದ್ದು ಇತರರನ್ನು ಸಂತೋಷಪಡಿಸಬೇಕು ಎಂದು ಪ್ರಯತ್ನಿಸುತ್ತಿದ್ದೇನೆ. ಇತ್ತೀಚೆಗೆ ಪತಿಯ ಸಹಕಾರದಿಂದ ಡ್ರೆçವಿಂಗ್ ಕಲಿತು ಸ್ವಾವಲಂಬಿಯಾದೆ” ಎಂದಳು. ನಾನು ಸ್ನೇಹಾಳನ್ನು ಹೆಮ್ಮೆಯಿಂದ ಬಿಗಿದಪ್ಪಿ , “”ನಿಜಕ್ಕೂ ನೀನು ಗ್ರೇಟ್, ಖಂಡಿತಾ ನೀನು ಈವತ್ತು ಇತರರಿಗೆ ಮಾದರಿಯಾಗಿದ್ದಿಯಾ” ಎಂದು ಹೆಮ್ಮೆಯಿಂದ ಆಧರಿಸಿದೆ. ಇವತ್ತು ಜೀವನದಲ್ಲಿ ಒಂದು ಚಿಕ್ಕ ಸಮಸ್ಯೆ ಬಂದರೂ ಸಾಕು, ಆಕಾಶವೇ ತಲೆಮೇಲೆ ಬಿದ್ದಂತೆ ಇದ್ದು ಆತ್ಮಹತ್ಯೆಗೆ ಮುಂದಾಗುತ್ತಾರೆ. ಜೀವನ ಎಂದ ಮೇಲೆ ಸಮಸ್ಯೆಗಳು ಸಹಜವೇ. ಬದುಕು ಬದಲಾಗದಿದ್ದರೂ ನಾವೇ ನಮ್ಮೊಳಗಿನ ಸ್ಫೂರ್ತಿಯಿಂದ ನಮ್ಮನ್ನೇ ನಾವು ಬದಲಾಯಿಸಿಕೊಂಡರೆ ಬದುಕು ತನ್ನಿಂದ ತಾನೆ ಬದಲಾಗುತ್ತದೆ. ಇದಕ್ಕೆ ಬೇಕು ಮನಸ್ಸು ಹಾಗೂ ದೃಢ ನಿರ್ಧಾರ. ಪ್ರತಿಯೊಬ್ಬರಲ್ಲೂ ಎರಡು ಮನಸ್ಸಿದೆ. ಜಾಗೃತ ಮನಸ್ಸು ಮತ್ತು ಸುಪ್ತ ಮನಸ್ಸು. ಜಾಗೃತ ಮನಸ್ಸಿನಲ್ಲಿ ಪದೇ ಪದೇ ಒಂದು ವಿಷಯವನ್ನು ಗ್ರಹಿಸುತ್ತಿದ್ದರೆ ಅದುವೇ ಸುಪ್ತ ಮನಸ್ಸಿನಲ್ಲಿ ಬೇರೂರಿ ನಮ್ಮನ್ನು ಬದಲಾಯಿಸುತ್ತದೆ. ಜಾಗೃತ ಮನಸ್ಸು ಮತ್ತು ಸುಪ್ತ ಮನಸ್ಸು ಸೌಹಾರ್ಧದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಹೊಸ ನಿರ್ಣಯದ ಅಭ್ಯಾಸ ಸಾಧ್ಯ ಎನ್ನುತ್ತಾರೆ ವೈದ್ಯರು. ಹೊಸ ವಿಷಯವನ್ನು ಸುಪ್ತ ಮನಸ್ಸಿನಲ್ಲಿ ಅಂತರ್ಗತ ಮಾಡಿಕೊಂಡು ಪ್ರಯತ್ನಪಟ್ಟರೆ ಯಶಸ್ಸು ಸಾಧ್ಯ. ಸುಪ್ತ ಮನಸ್ಸು ಚಿತ್ರರೂಪದಲ್ಲಿ ವಿಷಯ ಸಂಗ್ರಹ ಮಾಡುತ್ತದೆ ಮತ್ತು ಭಾವನೆಗಳನ್ನು ಒಳಗೊಂಡಿರುತ್ತದೆ. ಸತ್ಯಾಸತ್ಯತೆಯನ್ನು ವಿಮರ್ಶಿಸಲು ಅದಕ್ಕೆ ಸಾಧ್ಯವಾಗದು. ನಂಬಿಕೆಯಿಟ್ಟು ಯಾವುದೇ ವಿಷಯವನ್ನು ಮತ್ತೆ ಮತ್ತೆ ಕಲ್ಪಿಸಿಕೊಂಡರೂ ಅದನ್ನು ಸತ್ಯವೆಂದೇ ನಂಬುತ್ತದೆ. ಬದಲಾಗಬೇಕಾದ ವಿಷಯವನ್ನು ಮನದಲ್ಲಿ ಆಗಾಗ ಕಲ್ಪಿಸುತ್ತಾ ಮನದಲ್ಲಿ ಬೇರೂರುವಂತೆ ಮಾಡುವುದರಿಂದ ಈ ಪ್ರಯೋಗವನ್ನು ಅರಿತು ಪ್ರಯತ್ನಿಸಿದರೆ ಪ್ರತಿಯೊಬ್ಬರೂ ತಮ್ಮನ್ನು ಬದಲಾಯಿಸಿಕೊಳ್ಳಬಹುದು.
ಬದುಕು ಬದಲಾಗದಿದ್ದರೆ ನಾವೇ ಬದಲಾಗಬೇಕು. ಈ ನಿಟ್ಟಿನಲ್ಲಿ ಯೋಚಿಸಿ, ಯೋಜನೆಗಳನ್ನು ರೂಪಿಸಿ, ಬದುಕುವ ರೀತಿಯನ್ನೇ ಬದಲಾಯಿಸಿಕೊಂಡರೆ ನೆಮ್ಮದಿ, ಶಾಂತಿ, ಸಾರ್ಥಕತೆಯಿಂದ ಕೂಡಿದ ಅರ್ಥಪೂರ್ಣ ಬದುಕನ್ನ ನಮ್ಮದಾಗಿಸಿಕೊಳ್ಳಬಹುದು. – ಸದಾರಮೆ