ಹುಬ್ಬಳ್ಳಿ: ನವಲಗುಂದ ಶಾಸಕ ಎನ್. ಎಚ್. ಕೋನರಡ್ಡಿ ಅವರ ಮನೆ ನಿರ್ಮಾಣದ ಕಾಮಗಾರಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ಗಾಯಗೊಂಡಿರುವ ಹಸನಸಾಬ್ ಮಕಾಂದಾರ ಕುಟುಂಬಕ್ಕೆ ಶಾಸಕರು ಆಸ್ಪತ್ರೆಯ ಬಿಲ್ ಪಾವತಿಸದೆ ವಂಚನೆ ಮಾಡಿದ್ದಾರೆ ಎಂದು ಮಕಾಂದಾರ ಕುಟುಂಬ ಆರೋಪಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಸನಸಾಬ್ ಹಾಗೂ ಅವರ ತಾಯಿ ರಬೀಜಾ ಬೇಗಂ ಶಾಸಕರ ವಿರುದ್ಧ ಆರೋಪ ಮಾಡಿದರು. 2016 ಜುಲೈ 24ರಂದು ನವಲಗುಂದದಲ್ಲಿ ಶಾಸಕರ ಮನೆ ನಿರ್ಮಾಣದ ಸಂದರ್ಭದಲ್ಲಿ ಶಾಸಕರ ಮನೆ ಮೇಲ್ಭಾಗದಲ್ಲಿ ವಿದ್ಯುತ್ ವೈಯರ್‌ಗಳು ಹಾದು ಹೋಗಿದ್ದು ಅದಕ್ಕೆ ಪ್ಲಾಸ್ಟಿಕ್ ಪೈಪ್ ಹಾಕಿಸುವಂತೆ ಶಾಸಕ ಕೋನರಡ್ಡಿ ಹಾಗೂ ಅವರ ಅಳಿಯ ರಾಘವೇಂದ್ರ ಅವರಿಗೆ ಪದೇ-ಪದೇ ಹೇಳಲಾಗಿತ್ತು.
ಆದರೆ ಅವರು ನಿರ್ಲಕ್ಷ್ಯ ಮಾಡಿದ್ದರಿಂದ ಕಾರ್ಮಿಕರಿಗೆ ವಿದ್ಯುತ್ ಅವಘಡ ಸಂಭವಿಸಿದ್ದು ಅದರಲ್ಲಿ ಹಸನಸಾಬ್ ಮತ್ತು ನಾಶಿಪುಡಿ ಎಂಬವರು ಗಾಯಗೊಂಡಿದ್ದರು. ಅದರಲ್ಲಿ ಹಸನಸಾಬ್ ಅವರಿಗೆ ತೀವ್ರವಾದ ಗಾಯಗಳಾಗಿದ್ದವು. ಹಸನಸಾಬ್ ಮಕಾಂದಾರ(19) ಬಾರ್‌ಬೈಡಿಂಗ್ ಕಾಮಗಾರಿ ಮಾಡುವ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು ಅವರನ್ನು ಕಿಮ್ಸ್‌ಗೆ ದಾಖಲಿಸಲಾಯಿತು.
ಕಿಮ್ಸ್‌ನಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಹಸನಸಾಬ್ ಅವರ ಕಾಲನ್ನು ತೆಗೆಯಬೇಕು ಎಂದು ವೈದ್ಯರು ಹೇಳಿದಾಗ ಆತಂಕಗೊಂಡ ಕುಟುಂಬದವರು ಬೇಡ ಎಂದ ಕುಟುಂಬವರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆಗೆ ದಾಖಲಿಸಿದ ನಂತರ ಶಾಸಕ ಎನ್.ಎಚ್. ಕೋನರಡ್ಡಿ ಭೇಟಿ ನೀಡಿ ಯಾವುದಕ್ಕೂ ಭಯಪಡ ಬೇಡಿ. ಆಸ್ಪತ್ರೆಯ ಬಿಲ್ ಪಾವತಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಆಸ್ಪತ್ರೆಯ ಬಿಲ್ ನೀಡಿಲ್ಲ.
ಈ ಕುರಿತು ಶಾಸಕರನ್ನು ವಿಚಾರಿಸಲು ಕಚೇರಿಗೆ ಹೋದರೆ ಶಾಸಕರು ಸಿಗುತ್ತಿಲ್ಲ. ಇತ್ತ ಆಸ್ಪತ್ರೆಯ ಬಿಲ್ ಪಾವತಿಸದ ಕಾರಣ ಆಸ್ಪತ್ರೆಯವರು ನೋಟಿಸ್ ಜಾರಿ ಮಾಡಿದ್ದು, ಕೂಡಲೇ ಹಣ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಸನಸಾಬ್ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದು, ಅವನ ದುಡಿಮೆಯೇ ಇಲ್ಲವಾಗಿದೆ. ಇನ್ನೊಂದು ಕಡೆ ಶಾಸಕರು ನೀಡಿದ ಭರವಸೆಯನ್ನು ಈಡೇರಿಸುತ್ತಿಲ್ಲ ಎಂದು ಅವರ ತಾಯಿ ಅಳಲು ತೋಡಿಕೊಂಡರು.