ವಿಧಾನಪರಿಷತ್ತು: ಶೈಕ್ಷಣಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸರ್ಕಾರದ ಜಮೀನುಗಳನ್ನು ಭೋಗ್ಯಕ್ಕೆ ಪಡೆದು ಅದನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಲ್ಲಿ ಕಾನೂನು ರೀತಿ ಜಮೀನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿ, ಭೋಗ್ಯದ ಜಮೀನನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ ಜಮೀನು ವಾಪಸ್ ಪಡೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಅಂತಹ ಪ್ರಕರಣಗಳಲ್ಲಿ ನೋಟಿಸ್ ಕೊಟ್ಟು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶೈಕ್ಷಣಿಕ, ಕೈಗಾರಿಕೆ, ದತ್ತಿ, ಕೆಲಸಗಳಿಗೆ ವಿವಿಧ ಸಂಘ-ಸಂಸ್ಥೆಗಳಿಗೆ ಲಯನ್ಸ್ ಮತ್ತು ರೋಟರಿ ಕ್ಲಬ್‌ಗಳಿಗೆ ಸ್ವಾತಂತ್ರ್ಯಕ್ಕಿಂತ ಮುಂಚಿತವಾಗಿ ಬ್ರಿಟಿಷರು ಜಮೀನು ಭೋಗ್ಯಕ್ಕೆ ನೀಡಿದ್ದಾರೆ. ನಂತರದ ಕಾಲದಲ್ಲೂ ಆಯಾ ಸರ್ಕಾರಗಳು ಇದನ್ನು ಮುಂದುವರಿಸಿಕೊಂಡು ಹೋಗಿದೆ. ಗುತ್ತಿಗೆ ಅವಧಿ ಮುಗಿದ ಹಲವು ಜಮೀನುಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ:ನಿಯಮ ಉಲ್ಲಂಘಿಸಿ ಕ್ರೂಜ್ ಬೋಟ್ ನತ್ತ ಪ್ರವಾಸಿಗರ ದಂಡು
ಗುತ್ತಿಗೆ ಮುಂದುವರಿಸಿಕೊಂಡು ಹೋಗುವುದರಿಂದ ಸರ್ಕಾರಕ್ಕೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ, ಭೋಗ್ಯ ಪಡೆದುಕೊಂಡವರು ಮಾರುಕಟ್ಟೆ ದರದಲ್ಲಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಉದ್ದೇಶ ಬದಲಾದರೆ ಮಾರುಕಟ್ಟೆ ದರಕ್ಕೆ ದ್ವಿಗುಣ ನೀಡಬೇಕು. ಹೊಸ ಭೋಗ್ಯಕ್ಕೆ ನೀಡುವಾಗ ಮಾರುಕಟ್ಟೆ ದರಕ್ಕೆ ವಾರ್ಷಿಕ ಶೇ.2.5ರಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದು ಸಚಿವರು ಉತ್ತರಿಸಿದರು.