ಜೈಪುರ್: ಖ್ಯಾತ ವಕೀಲರು ದುಬಾರಿ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ (ಜುಲೈ 16) ಕಳವಳ ವ್ಯಕ್ತಪಡಿಸಿದ್ದು, ಇದರಿಂದಾಗಿ ಸಮಾಜದಲ್ಲಿನ ಬಡವರು ಮತ್ತು ಬಡತನದ ಅಂಚಿನಲ್ಲಿದ್ದವರಿಗೆ ನ್ಯಾಯ ಮರೀಚಿಕೆಯಾಗಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:‘ಪೆಟ್ರೋಮ್ಯಾಕ್ಸ್’ ಚಿತ್ರ ವಿಮರ್ಶೆ: ಅನಾಥರ ಬಾಳಲ್ಲಿ ಡಬಲ್ ಧಮಾಕಾ
ಜೈಪುರದಲ್ಲಿ ನಡೆದ 18ನೇ ಆಲ್ ಇಂಡಿಯಾ ಕಾನೂನು ಸೇವೆಗಳ ಪ್ರಾಧಿಕಾರದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಿಜಿಜು, “ಶ್ರೀಮಂತರು ವಾದ ಮಂಡಿಸಲು ಖ್ಯಾತ ವಕೀಲರನ್ನು ನೇಮಕ ಮಾಡಿಕೊಳ್ಳಬಹುದು. ಒಂದು ವೇಳೆ ಪ್ರತಿ ವಿಚಾರಣೆಗೆ 10-15 ಲಕ್ಷ ರೂಪಾಯಿ ಶುಲ್ಕ ವಿಧಿಸಿದರೆ, ಜನಸಾಮಾನ್ಯರು ಇಷ್ಟೊಂದು ದುಬಾರಿ ಶುಲ್ಕವನ್ನು ಹೇಗೆ ಪಾವತಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಜುಲೈ 18ರಿಂದ ಆರಂಭಗೊಳ್ಳಲಿರುವ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಬಳಕೆಯಲ್ಲಿಲ್ಲದ 71 ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಎಂದು ಸಚಿವ ರಿಜಿಜು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡಾ ಭಾಗವಹಿಸಿದ್ದರು. ಇತ್ತೀಚೆಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಕುರಿತು ಕಟುವಾಗಿ ಟೀಕಿಸಿದ್ದ ಸುಪ್ರೀಂಕೋರ್ಟ್ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಭಿಯಾನ ನಡೆಸಿರುವ ಬಗ್ಗೆ ವಿಷಯದ ಕುರಿತು ಸಚಿವ ರಿಜಿಜು ಅಭಿಪ್ರಾಯ ವ್ಯಕ್ತಪಡಿಸಿದರು.
ನೂಪುರ್ ಶರ್ಮಾ ವಿರುದ್ಧ ದಾಖಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ನ ಇಬ್ಬರು ನ್ಯಾಯಾಧೀಶರ ಬಗ್ಗೆ ಅಭಿಯಾನ ಕೈಗೊಂಡಿರುವುದು ಕಳವಳಕಾರಿ ವಿಷಯವಾಗಿದೆ ಎಂದು ರಿಜಿಜು ಹೇಳಿದರು.