ಹುಬ್ಬಳ್ಳಿ: ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಿಜಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕೆಂಬ ಮನಸ್ಸಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಖರ್ಗೆ ಅವರೇ ಸಿಎಂ ಎಂದು ಘೋಷಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ 80 ಸ್ಥಾನ ಗೆದ್ದಂತಹ ಕಾಂಗ್ರೆಸ್‌ಗೆ ಜೆಡಿಎಸ್ ಸಿಎಂ ಸ್ಥಾನ ಕೊಡಬೇಕಿತ್ತು. ಖರ್ಗೆಯಂಥ ಹಿರಿಯ ನಾಯಕರು ಸಿಎಂ ಆಗಬೇಕಿತ್ತು. ಆದರೆ 37 ಸ್ಥಾನ ಪಡೆದ ಕುಮಾರಸ್ವಾಮಿಯವರೆ ಸಿಎಂ ಆದರು. ಈಗಲೂ ಕಾಲ ಮಿಂಚಿಲ್ಲ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಎಂದು ಘೋಷಣೆ ಮಾಡಲಿ ಎಂದರು. ಚುನಾವಣೆ ಬಂದಾಗ ಮಾತ್ರ ಖರ್ಗೆ ನೆನಪಾಗಿ ಸಿಎಂ ಅಂತಾರೆ. ಬಳಿಕ ಅವರನ್ನು ಮರೆತು ಬಿಡ್ತಾರೆ. ಇದನ್ನು ಸ್ವತಃ ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ ಎಂದರು.
ರಾಜ್ಯ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ವಿಶ್ವನಾಥ, ಸಿದ್ದರಾಮಯ್ಯ, ಡಾ| ಜಿ.ಪರಮೇಶ್ವರ, ಡಿ.ಕೆ. ಶಿವಕುಮಾರ ಹೇಳಿಕೆಗಳಿಂದ ಅರ್ಥ ಆಗ್ತಾ ಇದೆ. ಸಿಎಂ ಆಗುವ ಆಸೆಯಿಂದ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ. ಮುಂದಿನ ಸಲ ಚುನಾವಣೆಗೆ ಸ್ಪರ್ಧಿಸಲ್ಲ ಎನ್ನುತ್ತ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆಂದರು.
ಅರಸು ಜತೆ ಹೋಲಿಕೆಗೆ ನಾಚಿಕೆ ಆಗ್ಬೇಕು: ಸಿದ್ದರಾಮಯ್ಯ ಅವರು ದೇವರಾಜ ಅರಸು ಜತೆ ಹೋಲಿಸಿಕೊಳ್ಳಲು ನಾಚಿಕೆ ಆಗೋಲ್ವಾ?. ದೇವರಾಜ ಅರಸು ಎಲ್ಲಿ, ಸಿದ್ದರಾಮಯ್ಯ ಎಲ್ಲಿ, ಇವರಿಗೆ ನಾಚಿಕೆ ಆಗಬೇಕು. ಅರಸು ಅವರು ಇವರಂತೆ ಧರ್ಮ, ಜಾತಿ ವಿಭಜನೆ ಕೆಲಸ ಮಾಡಲಿಲ್ಲ. ಅರಸು ಜತೆ ಹೋಲಿಸಿಕೊಳ್ಳುವ ಹುಲ್ಲು ಕಡ್ಡಿಯಷ್ಟು ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. ಅವರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಬೆಂಬಲವಾಗಿ ನಿಂತಿದ್ದಾರೆ. ಅರಸು ಹೆಸರು ಹೇಳುವುದಕ್ಕೂ ಕೂಡ ಸಿದ್ದರಾಮಯ್ಯ ನಾಲಾಯಕ್ ಎಂದರು. ಅನ್ನಭಾಗ್ಯ ಅಕ್ಕಿಯಲ್ಲಿ ಹುಳ, ನುಸಿ ಇದೆ ಅಂತಾ ಅಕ್ಕಿಯನ್ನು ನಮ್ಮಲ್ಲಿ ಕೋಳಿಗಳು ತಿನ್ನಲ್ಲ. ಅದನ್ನು ಗರ್ಭಿಣಿಯರಿಗೆ ತಿನ್ನಿಸುತ್ತಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಕುಂದಗೋಳ, ಚಿಂಚೋಳಿ ಜನ ಬಿಜೆಪಿ ಗೆಲ್ಲಿಸುವ ಉತ್ಸಾಹ ತೋರುತ್ತಿದ್ದಾರೆ ಎಂದರು.