ಗುವಾಹಟಿ: ನ್ಯಾಯಾಲಯಕ್ಕೆ ಜೀನ್ಸ್‌ಪ್ಯಾಂಟ್ ಧರಿಸಿ ಬಂದಿದ್ದರ ಬಗ್ಗೆ ಸಮರ್ಥನೆ ನೀಡುತ್ತಿದ್ದ ವಕೀಲರೊಬ್ಬರನ್ನು ಗುವಾಹಟಿ ಹೈ ಕೋರ್ಟ್ ಶುಕ್ರವಾರ ತರಾಟೆ ತೆಗೆದುಕೊಂಡಿದ್ದು, ಇಂದು ಜೀನ್ಸ್ ಪ್ಯಾಂಟ್ ಅನುಮತಿಸಿದರೆ ನಾಳೆ ಹರಿದ)ಜೀನ್ಸ್ ಅನುಮತಿಸಲು ಬೇಡಿಕೆ ಇಡುತ್ತೀರಿ ಈ ಮೂಲಕ ಸಮಸ್ಯೆಗಳ ಆಗರವನ್ನೇ ಸೃಷ್ಟಿಸುತ್ತೀರಿ ಎಂದು ಚಾಟಿ ಬೀಸಿದೆ. ಅಲ್ಲದೇ, ಇದೇ ಪ್ರಕರಣ ಸಂಬಂಧಿಸಿದಂತೆ 2023ರಲ್ಲಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಮರುಪರಿಶೀಲಿಸಲು ಕೋರಿದ್ದ ಅರ್ಜಿಯನ್ನೂ ವಜಾಗೊಳಿಸಿದೆ.
2023ರ ಜನವರಿ 27ರಂದು ಬಿಜೋನ್ ಕುಮಾರ್ ಮಹಾಜನ್ ಎಂಬ ವಕೀಲರು ಜೀನ್ಸ್ ಪ್ಯಾಂಟ್ ಧರಿಸಿಯೇ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಕೀಲರನ್ನು ನ್ಯಾಯಾಲಯದ ಆವರಣದಿಂದಲೇ ಹೊರ ಕಳಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.
ಇದೀಗ ನ್ಯಾಯಾಲಯ ಅಂದು ನೀಡಿದ್ದ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಅರ್ಜಿ ಸಲಿಸಲಾಗಿತ್ತು. ಅದರಲ್ಲಿ ಭಾರತದ ಬಾರ್ ಕೌನ್ಸಿಲ್ ನಿಯಮ 49ರಲ್ಲಿ ಜೀನ್ಸ್ ಧರಿಸಬಾರದೆಂದು ಉಲ್ಲೇಖೀಸಿದೆ. ಆದರೆ, ಗುವಾಹಟಿ ಹೈ ಕೋರ್ಟ್ ನಿಯಮ-2010ರಲ್ಲಿ ಜೀನ್ಸ್ ಧರಿಸಬಾರದೆಂದು ಉಲ್ಲೇಖೀಸಲಾಗಿಲ್ಲ ಹೀಗಾಗಿ ಅರ್ಜಿದಾರರನ್ನು ಡೀ-ಕೋರ್ಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.
ಆ ಅರ್ಜಿಯನ್ನು ನ್ಯಾಯಮೂರ್ತಿ ಕಲ್ಯಾಣ್ ರಾಯ್ ಸುರಾನಾ ಅವರು ವಜಾಗೊಳಿಸಿದ್ದು, ನಿಯಮದಲ್ಲಿ ಜೀನ್ಸ್ ಬಗ್ಗೆ ಉಲ್ಲೇಖೀಸಿಲ್ಲ ಎನ್ನುವ ಕಾರಣಕ್ಕೆ ಇಂದು ಜೀನ್ಸ್ ಧರಿಸಲು ಅನುಮತಿಸಿದರೆ ನಾಳೆ ಟೋರ್ ಜೀನ್ಸ್, ಬಳಿಕ ಫೇಡೆಡ್ ಜೀನ್ಸ್ ನಂತರ ಪ್ರಿಂಟೆಡ್, ಪ್ಯಾಚಸ್ ಪ್ಯಾಂಟ್, ಟ್ರ್ಯಾಕ್ ಪ್ಯಾಂಟ್, ಪೈಜಾಮಕ್ಕೂ ಅನುಮತಿ ಕೇಳುತ್ತೀರಿ ಅದು ಸಾಧ್ಯವಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದ್ದಾರೆ.