ಇಸ್ಲಾಮಾಬಾದ್ : “ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಾಫೀಜ್ ಸಯೀದ್ ಜೈಲಿನಲ್ಲಿ ಇರಬೇಕೆಂದು ಬಯಸುವಿರಾ ? ಆತನ ಉಗ್ರ ಕೃತ್ಯಗಳ ಬಗ್ಗೆ ನಿಮ್ಮಲ್ಲಿ ಸಾಕ್ಷ್ಯ ಇದೆಯಾ ? ಹಾಗಿದ್ದರೆ ನೀವು ಅಂತಾರಾಷ್ಟ್ರೀಯ ಕೋರ್ಟಿಗೆ (ICJ) ಹೋಗಿ” ಎಂದು ಪಾಕ್ ಪ್ರಧಾನಿ ಶಾಹಿದ್ ಕಖಾನ್ ಅಬ್ಟಾಸಿ ಭಾರತಕ್ಕೆ ಅಪ್ಪಣೆ ಕೊಡಿಸಿದ್ದಾರೆ.
ಹಾಫೀಜ್ ಸಯೀದ್ ನನ್ನು ಲಾಹೋರ್ ಹೈಕೋರ್ಟ್ ಗೃಹ ಬಂಧನದಿಂದ ಬಿಡುಗಡೆಗೊಳಿಸಿರುವುದನ್ನು ಸಮರ್ಥಿಸಿಕೊಂಡ ಪಾಕ್ ಪ್ರಧಾನಿ, “ಸಯೀದ್ ಉಗ್ರನೆಂದು ಭಾರತ ಬರೀ ಆರೋಪಗಳನ್ನು ಮಾಡುತ್ತಿದೆಯೇ ಹೊರತು ಯಾವುದೇ ಸಾಕ್ಷ್ಯಗಳನ್ನು ಈ ತನಕ ನೀಡಲು ಅದಕ್ಕೆ ಸಾಧ್ಯವಾಗಿಲ್ಲ’ ಎಂದು ಹೇಳಿದರು.
“ನಿಮ್ಮ ಬಳಿ (ಭಾರತ) ಸಯೀದ್ ವಿರುದ್ಧ ನಿರ್ಣಾಯಕ ಮತ್ತು ಪರ್ಯಾಪ್ತ ಸಾಕ್ಷ್ಯಗಳಿದ್ದರೆ ನೀವು ಆತನ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ದಾವೆ ದಾಖಲಿಸಿ; ಬರೀ ಆರೋಪಗಳಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಪಾಕ್ ಪ್ರಧಾನಿ ಖಡಾಖಂಡಿತವಾಗಿ ಹೇಳಿದರು.
ಹಾಫೀಜ್ ಸಯೀದ್ 200ಕ್ಕೂ ಅಧಿಕ ಅಮಾಯಕರನ್ನು ಬಲಿ ಪಡೆದ 2008ರ ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಿಕೊಂಡು ಬಂದಿದೆ.
ಅಂದು ಮುಂಬಯಿಯನ್ನು ಪಾಕ್ ಉಗ್ರರಿಂದ ವಿಮೋಚನೆ ಮಾಡಲು ಭಾರತೀಯ ಭದ್ರತಾ ಪಡೆಗಳು ಪಾಕ್ ಭಯೋತ್ಪಾದಕರ ವಿರುದ್ಧ ಮೂರು ದಿನಗಳ ಕಾಲ ಗುಂಡಿನ ಕಾಳಗ ನಡೆಸಿದ್ದವು.