ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಒಪ್ಪಂದದ ಬಗ್ಗೆ ಸಿಎಂ ಸಿದ್ದರಾಮಯ್ಯ ಧೈರ್ಯವಾಗಿ ಮಾತನಾಡಲಿ ನೋಡೋಣ ಎಂದು ಮಾಜಿ ಸಚಿವ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಅಧಿಕಾರದಲ್ಲಿರುವುದು ಎರಡು ವರ್ಷ ಮಾತ್ರ ಎಂದು ಧೈರ್ಯವಿದ್ದರೆ ಸಿದ್ದರಾಮಯ್ಯ ಹೇಳಲಿ ನೋಡೋಣ. ಆದರೆ ಅವರು ಯಾವುದೇ ಕಾರಣಕ್ಕೂ ಆ ಮಾತು ಹೇಳುವುದಿಲ್ಲ. ಅವರೊಬ್ಬ ಚಾಣಾಕ್ಷ ರಾಜಕಾರಣಿ. ರಾಜಕಾರಣದಲ್ಲಿ ದೇವೇಗೌಡರ ಬಗ್ಗೆ ಎಲ್ಲರೂ ಹೆದರುತ್ತಾರೆ. ಆದರೆ ಸಿದ್ದರಾಮಯ್ಯ ದೇವೇಗೌಡರಿಗೆ ಆಟ ಆಡಿಸಿದ್ದರು. ಸಿಎಂ ಸ್ಥಾನವನ್ನು ಅವರು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಭವಿಷ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಬೀದಿ ರಂಪಾಟ ನಿಶ್ಚಿತ ಎಂದು ಭವಿಷ್ಯ ನುಡಿದರು.
ಮುಖ್ಯಮಂತ್ರಿ ಸ್ಥಾನದ ವಿಚಾರಕ್ಕೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್ ತಿರುಕನ ಕನಸು ಕಾಣುತ್ತಿದ್ದಾರೆ. ಮಹದೇವಪ್ಪ, ಕೃಷ್ಣ ಭೈರೇಗೌಡ, ಜಮೀರ್ ಅಹ್ಮದ್ ಖಾನ್ ಎಲ್ಲರೂ ಸಿದ್ದರಾಮಯ್ಯ ಪರವೇ ಇದ್ದಾರೆ. ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬಂದಿದೆಯೋ ಅಲ್ಲೆಲ್ಲ ಗೊಂದಲ ಸೃಷ್ಟಿಯಾಗಿದೆ. ಆದರೂ ಸಿದ್ದರಾಮಯ್ಯನವರಿಗೆ ಧೈರ್ಯವಿದ್ದರೆ ನಾನೇ ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಎಂದು ಹೇಳಲಿ ಎಂದರು.
ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್ ಓವರ್‌ಟೇಕ್ ಮಾಡುತ್ತಿದ್ದಾರೆ. ಶಿವಕುಮಾರ್ ವರ್ತನೆಯಿಂದ ಬೇಸತ್ತು ಸಿದ್ದರಾಮಯ್ಯನವರ ಕೋಪ ಯಾವಾಗ ಸ್ಫೋಟಗೊಳ್ಳುತ್ತದೋ ಗೊತ್ತಿಲ್ಲ. ಹನಿಮೂನ್ ಅವಧಿ ಮುಗಿದ ಕೂಡಲೇ ಒಡಕು ಹೊರಬರುತ್ತದೆ. ಈಗ ಸಿದ್ದರಾಮಯ್ಯ ಬಣದವರು ಮಾತನಾಡಿದಂತೆ, ಮುಂದೆ ಶಿವಕುಮಾರ್ ಬಣದವರೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಇದರಿಂದ ಭವಿಷ್ಯದಲ್ಲಿ ಸರ್ಕಾರದ ಕತೆ ಏನಾಗುತ್ತದೆಯೋ ಗೊತ್ತಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಈ ಸರ್ಕಾರದ ಸ್ಥಿತಿ ಏನು ಬೇಕಾದರೂ ಆಗಬಹುದು ಎಂದು ಭವಿಷ್ಯ ನುಡಿದರು.
ಡಿ.ಕೆ.ಸುರೇಶ್ ಅವರ ರಾಜಕೀಯ ವೈರಾಗ್ಯದ ಮಾತುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸುರೇಶ್ ಅವರ ಬಗ್ಗೆ ನನಗೆ ಸಿಂಪಥಿ ಇದೆ. ಈಗಾಗಲೇ ರಾಜಸ್ಥಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅವರು ನೋಡಿದ್ದಾರೆ. ಮುಂದೆ ನಮ್ಮಣ್ಣನಿಗೆ ಅದೇ ಪರಿಸ್ಥಿತಿ ಬರಬಹುದೆಂಬ ಬೇಸರಕ್ಕೆ ಈ ಮಾತುಗಳನ್ನು ಹೇಳಿರಬಹುದು ಎಂದು ತಿಳಿಸಿದರು.
ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರಿಗೆ ಈ ಮಾತನ್ನು ಹೇಳುವ ನೈತಿಕತೆ ಇಲ್ಲ. ಇಷ್ಟು ದೊಡ್ಡ ಯೋಜನೆಯ ಬಗ್ಗೆ ತಯಾರಿಯೇ ಇಲ್ಲದೇ ಘೋಷಣೆ ಮಾಡಿದ್ದಾರೆ. ಕೇಂದ್ರದ ವಿರುದ್ಧ ಮಾತನಾಡುವುದಕ್ಕೆ ಮುನ್ನ ನೀವು 10 ಕೆಜಿ ಅಕ್ಕಿ ಕೊಡುತ್ತೋರೋ, 5 ಕೆಜಿ ಅಕ್ಕಿ ಕೊಡುತ್ತೀರೋ ಎಂಬುದನ್ನು ಮೊದಲು ಹೇಳಿ ಎಂದು ವ್ಯಂಗ್ಯವಾಡಿದರು.