Advertisement
ಮುಂಬೈಯಿಂದ ನೂರು ಕಿಮೀ ದೂರದ ಕಾರ್-ಸೊಡ್ ಗ್ರಾಮದಲ್ಲಿ (ಪಾಲ್-ಘರ್ ಜಿಲ್ಲೆ) ಆದಿವಾಸಿ ರೈತರಿಂದ ಮಧ್ಯವರ್ತಿಯೊಬ್ಬ ಬೀನ್ಸ್ ಖರೀದಿಸುವುದು ಕಿಲೋಕ್ಕೆ ರೂ.10 ದರದಲ್ಲಿ. ಆತ ಮಂಚವೊಂದರಲ್ಲಿ ಆರಾಮವಾಗಿ ಕುಳಿತಿದ್ದರೆ, ಅವನ ಪಕ್ಕದಲ್ಲಿರುವ ಡೇರೆಯಲ್ಲಿ ಬೀನ್ಸ್ ಗುಡ್ಡವೇ ಬೆಳೆಯುತ್ತಿದೆ.
Related Articles
Advertisement
ಬವಣೆ ಮತ್ತು ಶೋಷಣೆಯಿಂದ ಪಾರಾಗಲಿಕ್ಕಾಗಿ ದಶಕಗಳ ಕಾಲ ಕಾದಿದ್ದಾರೆ ರೈತರು. ಇನ್ನು ಕಾಯಲಾಗದು ಎಂದು ಆಡಳಿತದ ಸೂತ್ರ ಹಿಡಿದವರಿಗೆ, ಅಧಿಕಾರಿಗಳಿಗೆ ಹಾಗೂ ದೇಶದ ಜನರಿಗೆ 2018ರ ಆರಂಭದಿಂದಲೇ ಸ್ಪಷ್ಟವಾಗಿ ಸೂಚಿಸಿದ್ದಾರೆ. ಮುಂಬೈ ಮತ್ತು ದೆಹಲಿಯಂಥ ಮಹಾನಗರಗಳ ರಸ್ತೆಗಳಲ್ಲಿ ಜಾಥಾ ನಡೆಸಿದ್ದಾರೆ. ದೇಶದ ಉದ್ದಗಲದಲ್ಲಿ ಪ್ರತಿಭಟನಾ ಮೆರವಣಿಗೆ, ಸಭೆಗಳನ್ನು ನಡೆಸಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಸಂಸತ್ತಿನ ಪಕ್ಕದಲ್ಲೇ ದೇಶದ ಮೂಲೆಮೂಲೆಗಳಿಂದ ಬಂದು ಜಮಾಯಿಸಿದ 50,000 ರೈತರು ಹಾಗೂ ಕೃಷಿ ಕೆಲಸಗಾರರ ಆಕ್ರೋಶ ಸಂಸತ್ತಿನಲ್ಲಿ ಪ್ರತಿಧ್ವನಿಸಿದೆ. ಅವರ ಬೇಡಿಕೆಗಳೇನು? ಕಷ್ಟಪಟ್ಟು ಬೆಳೆಸಿದ ಬೆಳೆಗಳ ಫಸಲಿಗೆ ನ್ಯಾಯಯುತ ಬೆಲೆ, ಕೃಷಿಗೆ ಹಣದ ಅಗತ್ಯವಿದ್ದಾಗ ಸಾಲ, ಕೃಷಿಜಮೀನಿನ ಹಕ್ಕು, ಸುಪ್ರೀಂ ಕೋರ್ಟ್ ಆದೇಶಿಸಿರುವ ಗೌರವದ ಬದುಕು ಬಾಳುವ ಹಕ್ಕು. ಇಷ್ಟನ್ನೇ ರೈತರು ಕೇಳುತ್ತಿದ್ದಾರೆ.
ಮಾರ್ಚ್ 2018ರಲ್ಲಿ ನಾಸಿಕ್‌ನಿಂದ ಮುಂಬಯಿಯ ಆಜಾದ್ ಮೈದಾನಕ್ಕೆ ಮತ್ತು ನವಂಬರ್ 2018ರಲ್ಲಿ ದೇಶದ ಮೂಲೆಮೂಲೆಗಳಿಂದ ದೆಹಲಿಯ ಸಂಸತ್ ರಸ್ತೆಗೆ ಸಾಗಿಬಂದ ರೈತರ, ಕೃಷಿಕೆಲಸಗಾರರ ಮತ್ತು ಬುಡಕಟ್ಟು ಜನರ ಜಾಥಾಗಳು ಮತ್ತು ಮಹಾ ಪ್ರತಿಭಟನಾ ಸಭೆಗಳ ಒಂದು ಪರಿಣಾಮ: ರೈತರ ಬದುಕು ಬವಣೆಗಳ ಬಗ್ಗೆ ತಮಗೇನೂ ಸಂಬಂಧವಿಲ್ಲ ಎಂಬಂತಿದ್ದ ನಗರವಾಸಿಗಳೊಮ್ಮೆ ಬೆಚ್ಚಿಬಿದ್ದದ್ದು. ನೂರಾರು ಕಿಲೋಮೀಟರ್ ನಡೆದು ಕಾಲುಗಳಲ್ಲಿ ಬೊಬ್ಬೆ ಬಂದಿದ್ದ, ಸುಡುಬಿಸಿಲಿಗೆ ಮುಖದ ಚರ್ಮವೇ ಸುಟ್ಟು ಹೋಗಿದ್ದ, ಹೊತ್ತುಹೊತ್ತಿಗೆ ಊಟತಿಂಡಿ ಸಿಕ್ಕದೆ ಹಸಿದಿದ್ದ, ದಣಿದು ಬಸವಳಿದಿದ್ದ ಅನ್ನದಾತರನ್ನು ಕಣ್ಣಾರೆ ಕಂಡು. ಆ ಕ್ಷಣದಲ್ಲಿ, ಇವರೆಲ್ಲ ಬೆಳೆ ಬೆಳೆಸದಿದ್ದರೆ ತಮ್ಮ ಊಟದ ತಟ್ಟೆ ಬರಿದೋ ಬರಿದು ಎಂಬ ಸತ್ಯದರ್ಶನವಾಯಿತು ನಗರವಾಸಿಗಳಿಗೆ.
ಹಸಿರು ಕ್ರಾಂತಿಯ ಜೊತೆಗೇ ನಮ್ಮ ದೇಶದಲ್ಲಿ ರೈತರ ಬವಣೆಗಳು ಶುರುವಾದವು. ದೇಸಿ ತಳಿಗಳನ್ನು ಮೂಲೆಗುಂಪು ಮಾಡಲಾಯಿತು; ಬದಲಾಗಿ ಹೈಬ್ರಿಡ್ ತಳಿಗಳನ್ನು ಬಳಕೆಗೆ ತರಲಾಯಿತು. ಸಾವಯವ ಕೃಷಿಯ ಬದಲಾಗಿ ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೀಡೆನಾಶಕ ಆಧಾರಿತ ಕೃಷಿಯನ್ನು ಪ್ರಚಾರ ಮಾಡಲಾಯಿತು. ಇದೆಲ್ಲದರ ದುಷ್ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಉಗ್ರಾಣಗಳಲ್ಲಿ ಆಹಾರಧಾನ್ಯಗಳ ದಾಸ್ತಾನಿದ್ದರೂ ಲಕ್ಷಗಟ್ಟಲೆ ಬಡವರಿಗೆ ಅವು ಸಿಗುತ್ತಿಲ್ಲ. ಪಡಿತರ ವ್ಯವಸ್ಥೆಗೆ ನೀಡಲಾಗುವ ದೊಡ್ಡಪ್ರಮಾಣದ ಆಹಾರಧಾನ್ಯಗಳು ಕಳ್ಳಸಂತೆಕೋರರ ಪಾಲಾಗುತ್ತಿವೆ. ಪಂಜಾಬ್ ಸಹಿತ ಹಲವಾರು ರಾಜ್ಯಗಳಲ್ಲಿ ಮಣ್ಣು ಫಲವತ್ತತೆ ಕಳೆದುಕೊಂಡಿದೆ; ಇದರಿಂದಾಗಿ ಎಕರೆವಾರು ಇಳುವರಿ ಕುಸಿಯುತ್ತಿದೆ. ಸಾಧಾರಣ ಮಟ್ಟದ ಫಸಲು ಪಡೆಯಬೇಕಾದರೂ ಮಣ್ಣಿಗೆ ಹೆಚ್ಚೆಚ್ಚು ರಾಸಾಯನಿಕ ಗೊಬ್ಬರ ಸುರಿಯಬೇಕಾಗಿದೆ. ದೇಸಿ ಬೀಜಗಳು ಕಣ್ಮರೆಯಾಗಿ, ರೈತರು ಬೀಜಗಳಿಗಾಗಿ ಬಹುರಾಷ್ಟ್ರೀಯ ಮತ್ತು ಸ್ಥಳೀಯ ಕಂಪೆನಿಗಳನ್ನು ಅವಲಂಬಿಸಬೇಕಾಗಿದೆ. ಇದೆಲ್ಲದರ ಪರಿಣಾಮವಾಗಿ, ವರ್ಷದಿಂದ ವರ್ಷಕ್ಕೆ ಕೃಷಿಯ ವೆಚ್ಚ ಏರುತ್ತಿದೆ. ಆದರೆ, ರೈತರ ಕೃಷಿ ಆದಾಯ ಕುಸಿಯುತ್ತಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಘಟನೆ 2015ರಲ್ಲಿ ಭಾರತದ ಪರಿಸ್ಥಿತಿ ಬಗ್ಗೆ ಹೀಗೆಂದು ವರದಿ ಮಾಡಿದೆ: ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಮತ್ತು ಕೃಷಿ ಉತ್ಪನ್ನಗಳ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದರೂ, ಭಾರತವು ಅತ್ಯಂತ ಜಾಸ್ತಿ ಪೋಷಕಾಂಶ-ಕೊರತೆಯ ಜನರು (194.6 ದಶಲಕ್ಷ$) ಇರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ.
ನಮ್ಮ ದೇಶದ ರೈತರ ಸರಾಸರಿ ಮಾಸಿಕ ಆದಾಯ ಸುಮಾರು ರೂ.6,000. ಹತ್ತು ವರ್ಷ ಮುಂಚೆ ಇದು ರೂ.2,000 ಆಗಿತ್ತು (ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಮಾಹಿತಿ). ಆದರೆ, 2003ರಲ್ಲಿ ಶೇ.48.6 ಕೃಷಿಕುಟುಂಬಗಳು ಸಾಲ ಮಾಡಿದ್ದರೆ, 2013ರಲ್ಲಿ ಶೇ.52 ಕೃಷಿಕುಟುಂಬಗಳು ಸಾಲದಲ್ಲಿವೆ. ಇದು ಕೃಷಿ ಆದಾಯದಿಂದ ಕೃಷಿವೆಚ್ಚ ಸರಿದೂಗಿಸಲು ಆಗುತ್ತಿಲ್ಲ ಎಂಬುದರ ಪ್ರಬಲ ಪುರಾವೆ. ಆದ್ದರಿಂದಲೇ, 2001-11ರ ಅವಧಿಯಲ್ಲಿ 9 ದಶಲಕ್ಷ$ ಕೃಷಿಕರು ಕೃಷಿ ತೊರೆದಿದ್ದಾರೆ (ಮಹಾ ಜನಗಣತಿಯ ಮಾಹಿತಿ).
ಇಂಥ ಸನ್ನಿವೇಶದಲ್ಲಿ, ರೈತರ ಆತ್ಮಹತ್ಯೆಗಳು ಸುದ್ದಿಯಾಗುವುದೇ ಇಲ್ಲ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (ಎನ್.ಸಿ.ಆರ್.ಬಿ.) ಪ್ರಕಟಣೆ ಪ್ರಕಾರ, 1995ರಿಂದ 2015ರ ಇಪ್ಪತ್ತು ವರುಷಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3,21,428. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡುತ್ತಿವೆ? ಗಮನಿಸಿ: 2015ರ ನಂತರ ಎನ್.ಸಿ.ಆರ್.ಬಿ. ರೈತರ ಆತ್ಮಹತ್ಯೆಗಳ ಬಗ್ಗೆ ವಾರ್ಷಿಕ ಅಂಕಿಸಂಖ್ಯೆ ಪ್ರಕಟಿಸುತ್ತಿಲ್ಲ! ಕೆಲವು ರಾಜ್ಯ ಸರಕಾರಗಳು ರೈತ ಪದದ ವಿವರಣೆಯನ್ನೇ ತಿರುಚಿ, ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಯಾವನೇ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಘೋಷಿಸುತ್ತಿವೆ!
ಇದೆಲ್ಲದರ ಬದಲಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಡಾ.ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ಕೃಷಿಕರ ಕಮಿಷನಿನ ಶಿಫಾರಸುಗಳನ್ನು ಜಾರಿ ಮಾಡಬೇಕಾಗಿತ್ತು. ಮುಖ್ಯವಾಗಿ, ಬೆಳೆ ಬೆಳೆಯುವ ವೆಚ್ಚದ ಶೇ.150ಅನ್ನು ಕನಿಷ್ಠ ಬೆಂಬಲ ಬೆಲೆಯಾಗಿ ರೈತರಿಗೆ ಪಾವತಿಸ ಬೇಕಾಗಿತ್ತು. ಕೇವಲ ಸಾಲಮನ್ನಾ ಮಾಡಿ, ರೈತರನ್ನು ಸಾಲ ಮತ್ತು ಸಾವಿನ ಸುಳಿಯಿಂದ ಪಾರು ಮಾಡಲು ಸಾಧ್ಯವಿಲ್ಲ ಎಂಬುದು ಮತ್ತೆಮತ್ತೆ ಸಾಬೀತಾಗಿದೆ.
ಅದಲ್ಲದೆ, ಗ್ರಾಹಕರೂ ತಮ್ಮ ಧೋರಣೆ ಬದಲಾಯಿಸಿಕೊಳ್ಳಬೇಕಾಗಿದೆ. ರೈತರಿಂದಲೇ ನೇರವಾಗಿ ಖರೀದಿಸುವ ವ್ಯವಸ್ಥೆಗಳನ್ನು ಹೆಚ್ಚಿಸಿಕೊಳ್ಳಬೇಕು. ಈಗ ಮಧ್ಯವರ್ತಿಗಳ ಜೇಬು ಸೇರುತ್ತಿರುವ (ಗ್ರಾಹಕ ಪಾವತಿಸುವ) ಖರೀದಿ ಬೆಲೆಯ ಪಾಲು ಶೇ.40ರಿಂದ ಶೇ.60. ಇದು ರೈತರ ಕೈಸೇರಿದರೆ, ಅವರ ಆದಾಯ ಖಂಡಿತ ಹೆಚ್ಚುತ್ತದೆ. ಮಂಗಳೂರಿನಲ್ಲಿ 2013ರಿಂದ ನಮ್ಮ ಸಾವಯವ ಕೃಷಿಕ ಗ್ರಾಹಕ ಬಳಗ ಇಂಥ ವ್ಯವಸ್ಥೆ ನಡೆಸಿಕೊಂಡು ಬಂದಿದೆ. ಪ್ರತಿ ಭಾನುವಾರ ಬೆಳಗ್ಗೆ 7ರಿಂದ 10.30 ಗಂಟೆ ತನಕ ನಾವು ಜರುಗಿಸುವ ಸಾವಯವ ಹಣ್ಣು ತರಕಾರಿ ಧಾನ್ಯ ಸಂತೆಯಲ್ಲಿ ಸುಮಾರು 1,000 ಗ್ರಾಹಕರು ರೈತರಿಂದಲೇ ನೇರವಾಗಿ ಖರೀದಿಸುತ್ತಿ¨ªಾರೆ. ನಮ್ಮಲ್ಲಿ ಇಂಥ ವ್ಯವಸ್ಥೆಗಳು ಹೆಚ್ಚೆಚ್ಚು ಆಗಬೇಕು. ಎಲ್ಲರನ್ನೂ ತಲುಪಬೇಕು.
-ಅಡ್ಡೂರು ಕೃಷ್ಣ ರಾವ್