ಬೆಂಗಳೂರು : ರಾಜ್ಯ ಸರಕಾರದ ಬಹುನಿರೀಕ್ಷಿತ ಸಂಪುಟ ಪುನರ್ ರಚನೆ ಸರ್ಕಸ್ ಕೊನೆಗೂ ಒಂದು ಹಂತಕ್ಕೆ ಬಂದು ನಿಂತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ 8 ರಂದು ಸಂಪುಟ ಪುನರ್ ರಚನೆಗೆ ಮುಹೂರ್ತ ನಿಗದಿಯಾಗಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿ ಸಂದರ್ಭದಲ್ಲೇ ಸಂಪುಟ ಪುನರ್ ರಚನೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಸಂಪುಟ ಪುನಾರ್ರಚನೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸುತ್ತಿದ್ದಂತೆ ಕೊಕ್ ಸಿಗಲಿದೆ ಎಂಬ ಆತಂಕಕ್ಕೆ ಒಳಗಾಗಿರುವ ಕೆಲ ಸಚಿವರು ಈಗಾಗಲೇ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಆಕಾಂಕ್ಷಿಗಳು ದಿಲ್ಲಿ ಸೇರಿ ಲಾಬಿ ನಡೆಸುವುದಕ್ಕೆ ಪ್ರಾರಂಭಿಸಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣದ ಚೆಂಡು ಈಗ ದಿಲ್ಲಿ ಅಂಗಣಕ್ಕೆ ಶಿಫ್ಟ್ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ 8 ರಂದು ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಪಕ್ಕಾ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
ಚುನಾವಣಾ ಸಂಪುಟ
ಮೂಲಗಳ ಪ್ರಕಾರ ವರಿಷ್ಠರು ಈ ಬಾರಿ ಚುನಾವಣಾ ಸಂಪುಟಕ್ಕೆ ಒತ್ತು ನೀಡಲಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಹೆಚ್ಚಿನ ಮಹತ್ವ ಸಿಗಬಹುದು.ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ದಿಲ್ಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ನಾಳೆ ಸಾಯಂಕಾಲ ಇನ್ನಷ್ಟು ಜನರು ದಿಲ್ಲಿಗೆ ತೆರಳಲಿದ್ದಾರೆ.