ರಬಕವಿ-ಬನಹಟ್ಟಿ : ಕಾಂಗ್ರೆಸ್ ಹೈಕಮಾಂಡ್ ಡಾ.ಪದ್ಮಜೀತ ನಾಡ ಗೌಡ ಪಾಟೀಲರಿಗೆ ತೇರದಾಳ ವಿಧಾನ ಸಭಾ ಕ್ಷೇತ್ರದ ಟಿಕೆಟ್ ನೀಡದೆ ಇದ್ದರೆ, ಇದೇ 13 ರಂದು ಪಕ್ಷೇತರ ಅಭ್ಯರ್ಥಿಯಾಗಿ ಡಾ. ನಾಡಗೌಡಪಾಟೀಲರು ನಾಮಪತ್ರ ಸಲ್ಲಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ(ಶಂಕರ) ಸೋರಗಾವಿ ತಿಳಿಸಿದರು.
ಶುಕ್ರವಾರ ಇಲ್ಲಿನ ಪತ್ರಿಕಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕೈಗೊಂಡ ಮೂರು ಸರ್ವೆಗಳಲ್ಲಿ ಡಾ.ಪದ್ಮಜೀತ ನಾಡಗೌಡ ಪಾಟೀಲರ ಹೆಸರು ಮುಂಚೂಣಿಯಲ್ಲಿದೆ. ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ ಸಂಪೂರ್ಣವಾಗಿ ನೆಲೆ ಕಳೆದುಕೊಂಡಿತ್ತು. ಅಂಥ ಸಂದರ್ಭದಲ್ಲಿ ಕಾಂಗ್ರೆಸ ಪಕ್ಷಕ್ಕ ಜೀವ ತುಂಬಿದವರು ಡಾ.ನಾಡಗೌಡಪಾಟೀಲರು. ಕೋವಿಡ್, ಕೃಷ್ಣೆ ಮತ್ತು ಘಟಪ್ರಭಾ ನದಿಗಳ ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದ ಸಂತ್ರಸ್ತರ ನೆರವಿಗೆ ನಿಂತವರು ಡಾ.ನಾಡಗೌಡಪಾಟೀಲರು. ನಾಲ್ಕು ವರ್ಷಗಳಿಂದ ನಿರಂತರವಾಗಿ ಈ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಾವಿರಾರು ಬಡ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ, ಮತಕ್ಷೇತ್ರದ ವ್ಯಾಪ್ತಿಯಲ್ಲಿ ಎರಡೆರಡು ಬಾರಿ ಕಣ್ಣಿನ ಆರೊಗ್ಯ ಶಿಬಿರಗಳನ್ನು ಹಮ್ಮಿಕೊಂಡು ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಗೊಳ್ಳಲು ಶ್ರಮಿಸಿದ್ದಾರೆ. ಬಿಜೆಪಿ ಶಾಸಕ ಸಿದ್ದು ಸವದಿ ಭ್ರಷ್ಟಾಚಾರದಲ್ಲಿ ಮುಳಗಿದ್ದು, ಎಲ್ಲ ಸಮುದಾಯ ಬಾಂಧವರು ನಾಡಗೌಡ ಪಾಟೀಲರತ್ತ ಮುಖ ಮಾಡಿದ್ದಾರೆ ಎಂದು ರಾಜಶೇಖರ ಸೋರಗಾವಿ ತಿಳಿಸಿದರು.
ರವಿ ಬಾಡಗಿ ಮಾತನಾಡಿ, ಈಗಾಗಲೇ ಡಾ.ನಾಡಗೌಡಪಾಟೀಲರು ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಕೇಂದ್ರದ ವರಿಷ್ಠರಿಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಸತೀಷ ಜಾರಕಿಹೊಳಿಯವರ ಗಮನಕ್ಕೆ ತರಲಾಗಿದೆ. ಆದ್ದರಿಂದ ಪಕ್ಷ ಡಾ.ನಾಡಗೌಡಪಾಟೀಲರಿಗೆ ಟಿಕೆಟ್ ನೀಡಿದ್ದೆ ಆದರೆ ಸಾಕಷ್ಟು ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ ಎಂದು ತಿಳಿಸಿದರು.
ನಿಲೇಶ ದೇಸಾಯಿ ಮತ್ತು ರಾಜು ನಂದೆಪ್ಪನವರ ಮಾತನಾಡಿ, ಕಾಂಗ್ರಸ್ ಪಕ್ಷ ಜೈನ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕದಲ್ಲಿ ಜೈನ್ ಸಮುದಾಯದ ಡಾ.ನಾಡಗೌಡಪಾಟೀಲರು ಮಾತ್ರ ಏಕೈಕ ಅಭ್ಯರ್ಥಿಯಾಗಿದ್ದಾರೆ ಎಂದರು.
ಸಭೆಯಲ್ಲಿ ಬುಡನ್ ಜಮಾದಾರ, ಮಾಳು ಹಿಪ್ಪರಗಿ ಸೇರಿದಂತೆ ಅನೇಕರು ಮಾತನಾಡಿದರು. ಚಿದಾನಂದ ಮಟ್ಟಿಕಲ್ಲಿ, ಚನಮಲ್ಲಪ್ಪ ಮೂಲಿಮನಿ, ಹುಮಾಯೂನ್ ಮುಲ್ಲಾ, ಮಹಾದೇವ ಕೋಪರ್ಡೆ, ರಾಜಸಾಬ್ ನದಾಫ್,ಕುಮಾರ ಬಿಳ್ಳೂರ, ಬಸವರಾಜ ಕೊಪ್ಪದ, ಮಹೇಶ ಮಲಾಬದಿ, ಕರಬಸು ಆರಗಿ, ರಾಜು ಕಡ್ಲಿ ಸೇರಿದಂತೆ ಅನೇಕರು ಇದ್ದರು.