ಬೆಂಗಳೂರು: ಪೋಕ್ಸೋ ಕಾಯ್ದೆಯಡಿ ಒಬ್ಬ ವ್ಯಕ್ತಿಯು ತನ್ನ ದೇಹವನ್ನು ಅಥವಾ ಅವನ ಅಥವಾ ಅವಳ ದೇಹದ ಯಾವುದೇ ಭಾಗವನ್ನು ಇತರ ವ್ಯಕ್ತಿಗಳು ನೋಡುವಂತೆ ಮತ್ತು ಪ್ರದರ್ಶಿಸುವಂತೆ ಹೇಳಿದರೆ ಅದು ಲೈಂಗಿಕ ದೌರ್ಜನ್ಯ ಹಾಗೂ ಅಪರಾಧವಾಗುತ್ತದೆ ಎಂದು ಹೇಳಿರುವ ಹೈಕೋರ್ಟ್, ನಗರದ ಖಾಸಗಿ ಶಾಲೆಯ ಐದು ವರ್ಷದ ಮಗುವನ್ನು ಅವಮಾನ ಮಾಡಿದ್ದ ಶಿಕ್ಷಕಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಈ ವಿಚಾರವಾಗಿ ಸಂತ್ರಸ್ತ ಮಗುವಿನ ತಾಯಿ 2017ರಲ್ಲಿ ಹಲಸೂರು ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ತನ್ನ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿ ರದ್ದು ಕೋರಿ 41 ವರ್ಷದ ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣ ವಜಾಗೊಳಿಸಲು ನಿರಾಕರಿಸಿ ಆದೇಶಿಸಿದೆ.
ಶಿಕ್ಷಕಿಯು ಬಾಲಕಿಯ ಪ್ಯಾಂಟ್ ಅನ್ನು ಇತರ ಮಕ್ಕಳ ಮುಂದೆ ಎಳೆದು ಆ ಮಗು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಶಿಕ್ಷಕರಾಗಿ ಮಕ್ಕಳು ತಪ್ಪು ಮಾಡಿದಾಗ ತಿದ್ದುವ ಬದಲು, ಎಳೆಯ ವಯಸ್ಸಿನಲ್ಲಿಯೇ ಮಕ್ಕಳನ್ನು ಈ ರೀತಿ ನಡೆಸಿಕೊಳ್ಳುವ ಆಘಾತ ಉಂಟು ಮಾಡಿದರೆ ಅದು ಮಗುವಿನ ಮನಸ್ಥಿತಿ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂದು ನ್ಯಾಯಪೀಠ ಎಂದು ಹೇಳಿದೆ.
ಶಿಕ್ಷೆಯಾಗಿ ತನ್ನ ಮಗಳನ್ನು ಸುಮಾರು ಎರಡು ನಿಮಿಷಗಳ ಕಾಲ ಕತ್ತಲೆಯ ಕೋಣೆಯಲ್ಲಿ ಲಾಕ್ ಮಾಡಲಾಗಿದೆಯೆಂದು ದೂರುದಾರರು ಆರೋಪಿಸಿದ್ದರು. ವಿಚಾರಣಾ ನ್ಯಾಯಾಲಯ ಮಗುವಿನ ಹೇಳಿಕೆ ದಾಖಲಿಸಿದ್ದು, ದೂರಿನಲ್ಲಿ ಮಾಡಿರುವ ಆರೋಪಗಳಿಗೂ ಹೇಳಿಕೆಗೂ ಸಾಮ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಗುವಿನ ತಾಯಿ 2017ರಲ್ಲಿ ಹಲಸೂರು ಠಾಣೆಯಲ್ಲಿ ಶಿಕ್ಷಕಿ ವಿರುದ್ಧ ದೂರು ನೀಡಿದ್ದರು. ಆರೋಪಿ ಶಿಕ್ಷಕಿ ಆರಂಭದಲ್ಲಿ ಮಗುವಿಗೆ ಥಳಿಸುತ್ತಿದ್ದರು ಎಂದು ದೂರಿದ್ದರು. ಆ ನಡವಳಿಕೆಯನ್ನು ಪೋಷಕರು ವಿರೋಧಿಸಿದ ನಂತರ, ಶಿಕ್ಷಕರು ಶಿಕ್ಷೆಯಾಗಿ ಮಕ್ಕಳ ಪ್ಯಾಂಟ್ ಅನ್ನು ಕೆಳಕ್ಕೆ ಎಳೆಯಲು ಪ್ರಾರಂಭಿಸಿದರು ಮತ್ತು ತರಗತಿಯ ಇತರ ಮಕ್ಕಳನ್ನು ಮಗುವನ್ನು ನಿಂದಿಸುವಂತೆ ಮಾಡಿದ್ದರಲ್ಲದೆ, ನಾಯಿಯನ್ನು ಸಾಕಿರುವ ಕತ್ತಲ ಕೋಣೆಯಲ್ಲಿ ಕೂಡಿ ಹಾಕುವುದಾಗಿ ಹೇಳಿ ಮಕ್ಕಳನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ್ದರು. ಅದರಂತೆ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.