ವಿಜಯಪುರ: “ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಂದಿರುವ “ತಂತಿ ಮೇಲಿನ ನಡಿಗೆ’ ಸ್ಥಿತಿ ನನಗೇನಾದರೂ ಬಂದಿದ್ದರೆ ತಕ್ಷಣವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರ ಬರುತ್ತಿದ್ದೆ’ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, “ಯಡಿಯೂರಪ್ಪಗೆ ಉತ್ತರ ಕರ್ನಾಟಕ ಬಲ ನೀಡಿದೆ. ಅವರಿಗೆ ಬೆಂಬಲ ನೀಡಿದ ಉತ್ತರ ಕರ್ನಾಟಕದ ಜನರು ನೆರೆ ಹಾವಳಿಯಿಂದ ತತ್ತರಿಸಿ ಬೀದಿಯಲ್ಲಿ ನಿಂತಿದ್ದಾರೆ. ಇಷ್ಟಾದರೂ ಬಿಜೆಪಿ ಸರ್ಕಾರದಿಂದ ಪ್ರವಾಹ ಸಂತ್ರಸ್ತರಿಗೆ ಕನಿಷ್ಠ ಸ್ಪಂದನೆಯೂ ಸಿಗುತ್ತಿಲ್ಲ. ಶಾಶ್ವತ ಸೂರು ಕಲ್ಪಿಸುವ ಮಾತಿರಲಿ, ತಾತ್ಕಾಲಿಕ ಶೆಡ್ ನಿರ್ಮಿಸಲು ಸಾಧ್ಯವಾಗದ ದುಃಸ್ಥಿತಿ ನಿರ್ಮಿಸಿದ್ದಾರೆ.
ಪ್ರಧಾನಿ ಬಳಿಗೆ ತೆರಳಿ ಪರಿಹಾರ ಕೇಳಲು ಯಡಿಯೂರಪ್ಪ ಅವರಿಗೆ ಧೈರ್ಯವಿಲ್ಲ. ಕೆಲಸ ಮಾಡಲಾಗದ ಸಿಎಂ ಸ್ಥಾನದಲ್ಲಿ ಇದ್ದರೇನು ಫಲ. ಯಡಿಯೂರಪ್ಪ ಅವರಿಗೆ ಬಂದಿರುವ ಈ ದಯನೀಯ ಸ್ಥಿತಿ ನನಗೇನಾದರೂ ಬಂದಿದ್ದರೆ ತಕ್ಷಣವೇ ರಾಜೀನಾಮೆ ಎಸೆದು ಹೊರ ಬರುತ್ತಿದ್ದೆ’ ಎಂದರು. ಅಧಿ ಕಾರ ಹೋಗುವ ಭೀತಿಯಿಂದ ಈ ದಯನೀಯತೆ ಕುರಿತು ಆಡಳಿತ ಪಕ್ಷದ ಶಾಸಕರು, ಸಚಿವರಲ್ಲಿ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ.
ಇಂಥ ಸ್ಥಿತಿಯಲ್ಲೇ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ತೇಜಸ್ವಿ ಸೂರ್ಯ ಸಂತ್ರಸ್ತರ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಇಬ್ಬರನ್ನೂ ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆಯಲ್ಲಿ ಒಯ್ದು ಬಿಡಬೇಕು. ಆಗ ಅವರಿಗೆ ಪ್ರವಾಹ ಎಂದರೇನು ಎಂಬ ಅರಿವಾಗುತ್ತದೆ ಎಂದು ಕಿಡಿ ಕಾರಿದರು.
ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ ಮುಂದುವರಿಯಲಿದೆ. 12ನೇ ಶತಮಾನದಲ್ಲಿ ಬಸವಣ್ಣ, ಬಸವಾದಿ ಶರಣರು ಲಿಂಗಾಯತ ಧರ್ಮ ಹುಟ್ಟು ಹಾಕಿದ್ದಾರೆ. ಹೀಗಾಗಿ, ಧರ್ಮ ಒಡೆಯುವ ಮಾತು ಬರುವುದೇ ಇಲ್ಲ.
-ಎಂ.ಬಿ.ಪಾಟೀಲ್, ಮಾಜಿ ಸಚಿವ