Advertisement

ಬಿಜೆಪಿ 8 ಸ್ಥಾನ ಗೆಲ್ಲದಿದ್ದರೆ ಜೆಡಿಎಸ್‌ ಬೆಂಬಲ ನೀಡಲ್ಲ

10:45 PM Nov 25, 2019 | Team Udayavani |

ಹುಬ್ಬಳ್ಳಿ: “ಕುದುರೆ ವ್ಯಾಪಾರದ ಮೂಲಕ 17 ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ, ಉಪ ಚುನಾವಣೆಯಲ್ಲಿ ಎಂಟು ಸ್ಥಾನ ಗೆಲ್ಲುವುದು ಅನಿವಾರ್ಯ. ಇಲ್ಲದಿದ್ದರೆ ಬಿಜೆಪಿ ಸರ್ಕಾರ ಪತನವಾಗಿ ಮಧ್ಯಂತರ ಚುನಾವಣೆ ಬರುವುದು ಖಚಿತ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸದ್ಯ 105 ಶಾಸಕರನ್ನು ಹೊಂದಿದ್ದು, ಬಹುಮತ ಸಾಬೀತು ಪಡಿಸಲು ಇನ್ನೂ 8 ಸ್ಥಾನ ಅವಶ್ಯವಿದೆ. ಹೀಗಾಗಿ ಉಪ ಚುನಾವಣೆಯಲ್ಲಿ 8 ಸ್ಥಾನ ಗೆಲ್ಲುವುದು ಅನಿವಾರ್ಯವೆಂದರು.

Advertisement

ಅಲ್ಲಿನ ಪರಿಸ್ಥಿತಿ ತಿಳಿದಿದೆ: “ಬಹುಮತ ದೊರೆಯದಿದ್ದರೆ ಆಗ ಜೆಡಿಎಸ್‌ ಪಕ್ಷ ಬಿಜೆಪಿ ಬೆಂಬಲಿಸಲ್ಲ. ಈ ಬಗ್ಗೆ ನನಗೆ ಗೊತ್ತಿದೆ. ನಾವೇನು ಜೆಡಿಎಸ್‌ನವರೊಂದಿಗೆ ಮಾತನಾಡಿಲ್ಲ. ನಾನು ಜೆಡಿಎಸ್‌ನಲ್ಲಿ ಇದ್ದು ಬಂದವ. ಅಲ್ಲಿನ ಪರಿಸ್ಥಿತಿ ಅರಿವು ನನಗಿದೆ’ ಎಂದರು. ನಾನು ಈಗಾಗಲೇ ಐದು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ಡಿ.3ರೊಳಗೆ ಎಲ್ಲಾ 15 ಕ್ಷೇತ್ರಗಳಿಗೆ ಭೇಟಿ ಕೊಟ್ಟು ಪ್ರಚಾರ ಮಾಡುತ್ತೇನೆ. ಉಪ ಚುನಾವಣೆ ನಂತರ ಬಿಜೆಪಿ ವಿಶ್ವಾಸಮತ ಯಾಚಿಸುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಪಾಪ ಡಿಸ್ಟರ್ಬ್ ಆಗಿದ್ದಾರೆ. ಸೋಲುವುದು ಗೊತ್ತಾಗಿಯೇ 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂದು ಏನೇನೋ ಹೇಳುತ್ತಿದ್ದಾರೆಂದರು.

ನಾವೇ ಗೆಲ್ಲುತ್ತೇವೆ: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಖಚಿತ. ಆಗ ನೂರಕ್ಕೆ ನೂರು ನಾವೇ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ನಂತರ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಶಾಸಕಾಂಗ ಸಭೆ, ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಿಸುತ್ತದೆ. ನಾನೇ ಮುಖ್ಯಮಂತ್ರಿ ಆಗುತ್ತೇನೆಂದು ಎಲ್ಲಿಯೂ ಹೇಳಿಲ್ಲ ಎಂದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಈ ರೀತಿಯ ವ್ಯವಸ್ಥೆ ತಾನು ಎಲ್ಲೂ ನೋಡಿರಲಿಲ್ಲ. ರಾತ್ರೋರಾತ್ರಿ ರಾಷ್ಟ್ರಪತಿ ಆಡಳಿತ ಹಿಂಪಡೆದು ಬೆಳಗಾಗುವಷ್ಟರಲ್ಲಿ ಬಹುಮತ ಇಲ್ಲದ ಸರ್ಕಾರ ರಚಿಸಿದ್ದಾರೆ. ಇದಕ್ಕಿಂತ ಪ್ರಜಾಪ್ರಭುತ್ವದ ದೊಡ್ಡ ಅಣಕ ಇನ್ನೊಂದಿಲ್ಲ. ಶಿವಸೇನೆ ಹಿಂದುತ್ವ ಹಾಗೂ ಕೋಮುವಾದಿ ಪಕ್ಷದಿಂದ ಹೊರಗೆ ಬರುವುದಾಗಿ ಹೇಳಿದ್ದರಿಂದ ಕಾಂಗ್ರೆಸ್‌ ಅದಕ್ಕೆ ಬೆಂಬಲ ನೀಡಲು ತೀರ್ಮಾನಿಸಿತು. ಅಲ್ಲದೆ ಶಿವಸೇನೆಯ ಸಂಸದರೊಬ್ಬರು ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿ ಎನ್‌ಡಿಎದಿಂದ ಹೊರಕ್ಕೆ ಬಂದಿದ್ದಾರೆಂದರು. ಶಾಸಕ ಪ್ರಸಾದ ಅಬ್ಬಯ್ಯ, ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ ಮತ್ತಿತರರಿದ್ದರು.

ಶಾಸಕರ ಖರೀದಿಗೆ ಕಪ್ಪು ಹಣ
ಹೊಸಕೋಟೆ: ರಾಜ್ಯದಲ್ಲಿ 17 ಶಾಸಕರನ್ನು ಖರೀದಿಸಲು 100 ಕೋಟಿ ರೂ.ಗಳಿಗೂ ಹೆಚ್ಚು ಕಪ್ಪು ಹಣ ಬಳಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ವಿಶ್ವೇಶ್ವರಯ್ಯ ಬಡಾವಣೆಯ ಗಂಗಮ್ಮಗುಡಿ ರಸ್ತೆಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

Advertisement

2016ರಲ್ಲಿ ನೋಟು ಅಮಾನ್ಯಿಕರಣಗೊಳಿಸಿ ಕಪ್ಪು ಹಣವನ್ನು ನಿಯಂತ್ರಿಸಲಾಗುವುದು ಎಂದು ಹೇಳಿದ್ದ ಪ್ರಧಾನಿ, ಪ್ರಸ್ತುತ ರಾಜ್ಯದಲ್ಲಿ 17 ಅನರ್ಹರನ್ನು ಖರೀದಿಸಲು ಯಾವ ಹಣ ಬಳಕೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ಎಂಟಿಬಿ ನಾಗರಾಜ್‌ ಅವರನ್ನು ಜನರು ಗುರುತಿಸಿದ್ದು ಕಾಂಗ್ರೆಸ್‌ ಪಕ್ಷದಿಂದಾಗಿಯೇ ಹೊರತು ಅವರು ಆಸ್ತಿ ಅಂತಸ್ತಿನಿಂದಲ್ಲ. ಈ ಹಿಂದಿನ ಎಲ್ಲ ಚುನಾವಣೆಗಳಲ್ಲೂ ಪ್ರಚಾರ ಮಾಡಿದ್ದು ಮತದಾರರು ನಮ್ಮ ಮನವಿಗೆ ಸ್ಪಂದಿಸಿ ಎಂಟಿಬಿ ನಾಗರಾಜ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಇದೀಗ ಅವರ ವಿರುದ್ಧವೇ ಮತ ಯಾಚಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಇದಕ್ಕೆಲ್ಲ ಎಂಟಿಬಿ ಅವರೇ ಕಾರಣವೆಂದರು.

ಪಾಠ ಕಲಿಸಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸ್ವ ಹಿತಾಸಕ್ತಿಗಾಗಿ ಪಕ್ಷಕ್ಕೆ, ಮತದಾರರಿಗೆ ಮಾಡಿರುವ ದ್ರೋಹ ಕ್ಕಾಗಿ ಎಂಟಿಬಿ ನಾಗರಾಜ್‌ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಪಾಠ ಕಲಿಸಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದರೂ ಪಕ್ಷಕ್ಕೆ, ಮತದಾರರಿಗೆ ವಿಶ್ವಾಸ ದ್ರೋಹ ಮಾಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದರಷ್ಟೇ ಪದವಿ ನೀಡಬೇಕೆಂದು ಸುಪ್ರೀಂಕೋರ್ಟ್‌ ಸೂಚಿಸಿದೆ. ಮತದಾರರೂ ಶಾಶ್ವತವಾಗಿ ಅನರ್ಹರಾಗಿಯೇ ಉಳಿಯುವಂತೆ ಮಾಡ ಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next