ಆಳಂದ: ಬಸವ ತತ್ವವನ್ನು ಅರ್ಥಮಾಡಿಕೊಂಡಿದ್ದರೆ ದೇಶ, ನಾಡು ಸಮೃದ್ಧವಾಗುತ್ತಿತ್ತು ಎಂದು ಬೈಲಹೊಂಗಲ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಯುವ ವೇದಿಕೆ ಆಶ್ರಯದಲ್ಲಿ ರವಿವಾರ ನಡೆದ ಬಸವ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳದ ಕಾರಣ ಇಂದಿಗೂ ಜಾತಿ, ಧರ್ಮಗಳ ತಿಕ್ಕಾಟ ನಡೆಯುತ್ತಿವೆ. ಬಸವಣ್ಣನವರ ಧರ್ಮವನ್ನು ಬೆಳೆಯಲು ಬಿಡದ ಕಾರಣ ಇಂದಿಗೂ ಸಂಕಷ್ಟದಿಂದ ಬದುಕು ಕೂಡಿದೆ. ಜಯಂತಿಗಳು ಜಾತಿ, ಧರ್ಮಕ್ಕೆ ಸೀಮಿತಗೊಳಿಸಿದೆ ಮಾನವರ ಒಳಿತಿಗಾಗಿ ಅವರ ಸ್ಮರಣೆಯ ಆಗಬೇಕು ಎಂದು ಹೇಳಿದರು.
ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಆಳಂದ ತಾಲೂಕು ಹೋರಾಟ ಮತ್ತು ಕ್ರಾಂತಿಯ ಸೌಹಾರ್ದದ ನೆಲೆಬಿಡಾಗಿದೆ. ಇಂಥ ವಾತಾವರಣವನ್ನು ಪಟ್ಟಭದ್ರ ಸ್ವಹಿತಾಶಕ್ತಿಗಳು ಕಲುಷಿತಗೊಳಿಸಿ ಜಾತಿ ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುವ ಹುನ್ನಾರ ನಡೆಸಿದ್ದಾರೆ. ಇಂಥವುಗಳಿಗೆ ಇಲ್ಲಿಯ ಜನರು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಉತ್ಸವ ಸಮಿತಿ ಕೋರಿಕೆಯಂತೆ ಆರು ತಿಂಗಳಲ್ಲಿ ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮಳಖೇಡದ ದರ್ಗಾದ ಸೈಯ್ಯದ್ ಮುಸ್ತಾಫ್ ಖಾದ್ರಿ ಮಾತನಾಡಿ, ತನ್ನ ಧರ್ಮವನ್ನು ಅರ್ಥಮಾಡಿಕೊಂಡು ಇನ್ನೂಬ್ಬರ ಧರ್ಮವನ್ನು ಪ್ರೀತಿಸುವುದೇ ಮಾನವ ಧರ್ಮವಾಗಿದೆ ಎಂದು ಹೇಳಿದರು.
ಬೀದರ ಮಲ್ಲಿಕಾರ್ಜುನ ಸ್ವಾಮಿಗಳು, ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಸ್.ಪಿ.ಸುಳ್ಳದ ಮಾತನಾಡಿದರು. ವೀರಶೈವ ಸಮಾಜದ ಅಧ್ಯಕ್ಷ ಡಾ| ಎಸ್. ಆರ್. ಬೇಡಗೆ, ಪುರಸಭೆ ಮಾಜಿ ಅಧ್ಯಕ್ಷ ವಿಠuಲರಾವ ಪಾಟೀಲ, ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಶರಣಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ,
-ಹಮ್ಮಿದ್ ಅನ್ಸಾರಿ, ಕಾರ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಚನ್ನಪ್ಪ ಎಸ್. ಹತ್ತರಕಿ ಇದ್ದರು. ಜಯಂತಿ ಸ್ವಾಗತ ಸಮಿತಿ ಅಧ್ಯಕ್ಷ ನಿಜಲಿಂಗಪ್ಪ ಎಸ್. ಕೊರಳಿ ಸ್ವಾಗತಿಸಿದರು. ಶೇಖರ ಮುನ್ನೋಳಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ಹೂಗಾರ, ಶಿವಶರಣಪ್ಪ ಪೂಜಾರಿ ಅನೇಕ ಕಲಾವಿದರು ವಚನ ಗಾಯನ ನಡೆಸಿಕೊಟ್ಟರು.