Advertisement

ಅರ್ಜಿ ಹಾಕಿದರೆ ಕಲ್ಲಡ್ಕ  ಶಾಲೆಗೆ ಬಿಸಿಯೂಟ ನೀಡಲು ಸಿದ್ಧ

08:55 AM Aug 15, 2017 | Team Udayavani |

ಮಂಗಳೂರು: ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪ್ರೌಢಶಾಲೆಯ ಮಕ್ಕಳ ಊಟಕ್ಕೆ ಸರಕಾರ ಕನ್ನ ಹಾಕಿದೆ ಎಂಬ ಆರೋಪ ರಾಜಕೀಯ ಪ್ರೇರಿತವಾದುದು. ಪ್ರಭಾಕರ ಭಟ್‌ ಅವರು ಅರ್ಜಿಹಾಕಿದರೆ ಅನುದಾನಿತ ಶಾಲೆಯಾಗಿರುವ ಕಲ್ಲಡ್ಕ ಪ್ರೌಢಶಾಲೆಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.

Advertisement

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ಪ್ರೌಢಶಾಲೆಗಳಿಗೆ ಕೊಲ್ಲೂರು ದೇಗುಲದಿಂದ ನೆರವು ರದ್ದು ಮಾಡಿರುವ ಬಗ್ಗೆ ಉಂಟಾಗಿರುವ ವಿವಾದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪ್ರೌಢಶಾಲೆಯು ಅನುದಾನಿತ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ಸರಕಾರದ ಬಿಸಿಯೂಟ ಸೌಲಭ್ಯಕ್ಕೆ ಅವಕಾಶವಿದೆ. ಆದರೆ ಪ್ರಭಾಕರ ಭಟ್‌ ಅವರು ಈ ಶಾಲೆಗೆ ಬಿಸಿಯೂಟ ಸೌಲಭ್ಯ ಬೇಡ ಎಂದು ಬರೆದುಕೊಟ್ಟಿದ್ದರು. ಆ ಮೂಲಕ ಮಕ್ಕಳ ಅನ್ನವನ್ನು ಕಸಿದುಕೊಂಡಿದ್ದಾರೆ. ಮಕ್ಕಳ ಅನ್ನಕ್ಕೆ ರಮಾನಾಥ ರೈ ಕನ್ನ ಹಾಕಿದ್ದಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ ಎಂದರು.

ಸರಕಾರಿ ಶಾಲೆಗೆ ಸೇರಿಸಿ
ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ ಮಾತ್ರ ಅನುದಾನ ರಹಿತ ಖಾಸಗಿ ಶಾಲೆಯಾಗಿದ್ದು ಅದಕ್ಕೆ ಬಿಸಿಯೂಟ ನೀಡಲು ಸರಕಾರದ ನಿಯಮ ದಂತೆ ಅವಕಾಶವಿಲ್ಲ. ಅಲ್ಲೇ 100 ಮೀಟರ್‌ ದೂರದಲ್ಲಿ ಸರಕಾರಿ ಶಾಲೆ ಇದ್ದು, ಅಲ್ಲಿ ಬಿಸಿಯೂಟ, ಹಾಲು, ಸಮವಸ್ತ್ರ, ಶೂ, ಉಚಿತ ಪುಸ್ತಕ ಸಹಿತ ಸರಕಾರದ ಎಲ್ಲ ಸವಲತ್ತು ಲಭ್ಯವಿದೆ. ಆದುದರಿಂದ ಮಕ್ಕಳನ್ನು ಆ ಶಾಲೆಗೆ ಕಳುಹಿಸಿ ಎಂಬುದು ಹೆತ್ತವರಲ್ಲಿ ನನ್ನ ಮನವಿಯಾಗಿದೆ ಎಂದವರು ಹೇಳಿದರು.

ಹಣ ಸಂಗ್ರಹಿಸಿ ದುರುಪಯೋಗ
ಕಲ್ಲಡ್ಕ ವಿದ್ಯಾಸಂಸ್ಥೆ ಆರ್ಥಿಕವಾಗಿ ಬಲಾಡ್ಯವಾಗಿದೆ. ಅವರಿಗೆ ಭಿಕ್ಷೆ ಬೇಡುವ ಪ್ರಮೇಯವಿಲ್ಲ ಎಂದ ಅವರು, ಮಕ್ಕಳ ಹೆಸರಿನಲ್ಲಿ ಹಣ ಸಂಗ್ರಹ ಮಾಡಿ ಇದನ್ನು ದುರುಪಯೋಗ ಮಾಡಲಾಗುತ್ತಿದೆ. ಅವರ ಈ ಶಾಲೆಗಳಲ್ಲಿ ಮಕ್ಕಳ ಮನಸ್ಸುಗಳಲ್ಲಿ ಮತೀಯ ಭಾವನೆಗಳನ್ನು ಬಿತ್ತಲಾಗುತ್ತಿದೆ ಎಂದು ಆರೋಪಿಸಿದರು. ಅನುದಾನಿತ ಶಾಲೆಗಳ ಶಿಕ್ಷಕರು ಸರಕಾರದ ಅಧೀನಕ್ಕೆ ಬರುತ್ತಿದ್ದು ಮಕ್ಕಳನ್ನು ಕರೆತಂದು ಪ್ರತಿಭಟನೆ ನಡೆಸಿರುವುದು ನಿಯಮಬಾಹಿರ. ಅವರ ವಿರುದ್ಧ ಕ್ರಮಕ್ಕೆ ಚಿಂತನೆ ಮಾಡಲಾಗುವುದು ಎಂದರು.

Advertisement

ಮಾಹಿತಿ ಇಲ್ಲದೆ ಪೂಜಾರಿ ಟೀಕೆ
ಹಣ ದುರುಪಯೋಗವಾಗಿದೆ ಎಂಬುದಾಗಿ ಆರೋಪ ಮಾಡುತ್ತಿದ್ದೀರಿ. ಈ ಬಗ್ಗೆ ತನಿಖೆ ನಡೆಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಬಗ್ಗೆ ಮುಂದೆ ನಿರ್ಧರಿಸಲಾಗುವುದು ಎಂದರು. ನೆರವು ರದ್ದತಿ ಕ್ರಮವನ್ನು ಜನಾರ್ದನ ಪೂಜಾರಿ ಅವರು ಟೀಕಿಸಿರುವ ಬಗ್ಗೆ ಪ್ರಶ್ನೆಗೆ, ಜನಾರ್ದನ ಪೂಜಾರಿ ಅವರು ಮಾಹಿತಿ ಇಲ್ಲದೆ ಟೀಕೆ ಮಾಡಿದ್ದಾರೆ. ಧಾರ್ಮಿಕ ಪರಿಷತ್‌ನ ಕ್ರಮದ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುವುದು ಎಂದರು.

ಧಾರ್ಮಿಕ ಪರಿಷತ್‌ನ ನಿರ್ಧಾರದಿಂದ ಕೆಲವು ವಿಶೇಷ ಮಕ್ಕಳ ಶಾಲೆಗಳಿಗೂ ತೊಂದರೆಯಾಗುತ್ತಿದೆ ಎಂಬುದಾಗಿ ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ ಮಾನವೀಯ ನೆಲೆಯಲ್ಲಿ ಇವುಗಳನ್ನು ಪರಿಶೀಲಿಸಬೇಕಾಗಿದೆ. ಸಂಬಂಧಪಟ್ಟ ಇಲಾಖೆ ಗಮನ ಹರಿಸಲಿದೆ ಎಂದರು.

ಶಾಸಕರಾದ ಜೆ.ಆರ್‌. ಲೋಬೋ, ಮೊದಿನ್‌ ಬಾವಾ, ಡಿಸಿಸಿ ಅಧ್ಯಕ್ಷ ಹರೀಶ್‌ ಕುಮಾರ್‌, ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಮುಖಂಡರಾದ ಎ.ಸಿ. ಭಂಡಾರಿ, ಶಶಿಧರ ಹೆಗ್ಡೆ, ಕೋಡಿಜಾಲ್‌ ಇಬ್ರಾಹಿಂ, ಯು.ಕೆ. ಮೋನು ಉಪಸ್ಥಿತರಿದ್ದರು.

ನೆರವಿನ ಬಗ್ಗೆ ಆಕ್ಷೇಪಗಳಿದ್ದವು
ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳಂತೆ ದೇವಾಲಯಗಳಿಂದ ನಡೆಸಲ್ಪಡುವ ಶಾಲೆಗಳ ಹೊರತು ಇತರ ಶಾಲೆಗಳಿಗೆ ದೇವಾಲಯದಿಂದ ನೆರವು ನೀಡಲು ಅವಕಾಶವಿಲ್ಲ. ಇದರಂತೆ ಧಾರ್ಮಿಕ ಪರಿಷತ್‌ ಬಹಳಷ್ಟು ಶಾಲೆಗಳಿಗೆ ನೀಡುತ್ತಿದ್ದ ನೆರವು ಹಿಂದಕ್ಕೆ ಪಡೆದಿದೆ. ಇದೇ ರೀತಿಯಾಗಿ ಕೊಲ್ಲೂರು ದೇವಾಲಯದಿಂದ ಕಲ್ಲಡ್ಕ ಹಾಗೂ ಪುಣಚದ ಪ್ರೌಢ ಶಾಲೆಗಳಿಗೆ ನೀಡಿದ ನೆರವನ್ನು ಹಿಂಪಡೆಯಲಾಗಿದೆ. ಇವುಗಳಿಗೆ ನೆರವು ನೀಡುವ ಬಗ್ಗೆ ಕೊಲ್ಲೂರು ದೇವಾಲಯದ ಆಡಳಿತ ಮಂಡಳಿಯ ಕೆಲವು ಮಂದಿ ನನ್ನಲ್ಲಿ ಈ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಲ್ಲಿ ಆ ಭಾಗದ ಕೆಲವು ಬಿಜೆಪಿ ನಾಯಕರು ಕೂಡ ಸೇರಿದ್ದಾರೆ ಎಂದು ಸಚಿವ ರೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next