Advertisement

ಎಲ್ಲೆಂದರಲ್ಲಿ ತ್ಯಾಜ್ಯ ಸುರಿದರೆ ಸ್ಥಳದಲ್ಲೇ ದಂಡ

12:19 PM Dec 18, 2018 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಬ್ಲಾಕ್‌ಸ್ಪಾಟ್‌ಗಳ ನಿಯಂತ್ರಣಕ್ಕಾಗಿ ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳಲು ಮುಂದಾಗಿರುವ ಪಾಲಿಕೆಯು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಅನೈರ್ಮಲ್ಯ ವಾತಾವರಣ ನಿರ್ಮಿಸುವವರಿಗೆ ದುಬಾರಿ ದಂಡ ವಿಧಿಸಲು ಆ್ಯಂಡ್ರಾಯ್ಡ ಯಂತ್ರಗಳ ಖರೀದಿಗೆ ಮುಂದಾಗಿದೆ.

Advertisement

ನಗರದಲ್ಲಿನ ತ್ಯಾಜ್ಯ ರಾಶಿಗಳ ಸಂಖ್ಯೆ ಕಡಿಮೆಗೊಳಿಸಲು ಪೌರಕಾರ್ಮಿಕರ ಮೂಲಕ ಬ್ಲಾಕ್‌ಸ್ಪಾಟ್‌ನಲ್ಲಿ ರಂಗೋಲಿ ಬಿಡಿಸುವುದು, ಕ್ಲೀನ್‌ 150 ಚಾಲೆಂಜ್‌ ಹೀಗೆ ಕೆಲ ಅಭಿಯಾನಗಳಿಂದ ಕಳೆದ ಎರಡು ತಿಂಗಳಲ್ಲಿ 250ಕ್ಕೂ ಹೆಚ್ಚು ಬ್ಲಾಕ್‌ಸ್ಪಾಟ್‌ಗಳು ಸ್ವತ್ಛವಾಗಿವೆ. ಡಿಸೆಂಬರ್‌ ವೇಳೆ ಮತ್ತಷ್ಟು ಬ್ಲಾಕ್‌ಸ್ಪಾಟ್‌ಗಳು ತೆರುವಾಗುವ ಸಾಧ್ಯೆತೆಯಿದೆ.

ಸದ್ಯ ಸ್ವತ್ಛವಾಗಿರುವ ಬ್ಲಾಕ್‌ಸ್ಪಾಟ್‌ಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ಕ್ರಮಕೈಗೊಳ್ಳುವ ಉದ್ದೇಶದಿಂದ ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. ಅದರಂತೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದವರ ವಿರುದ್ಧ ಮಾರ್ಷಲ್‌ಗ‌ಳು ಕಠಿಣ ಕ್ರಮಕೈಗೊಳ್ಳಲಿದ್ದು, ಸ್ಥಳದಲ್ಲಿಯೇ ತಪ್ಪಿತಸ್ಥರಿಗೆ ದಂಡ ಹಾಕಲು ರಶೀದಿ ಸೃಜಿಸುವಂತಹ ಯಂತ್ರಗಳ ಖರೀದಿಗೆ ಪಾಲಿಕೆ ಟೆಂಡರ್‌ ಕರೆದಿದೆ. 

ನಗರದಲ್ಲಿ ಸ್ವತ್ಛತೆ ಕಾಪಾಡಲು 233 ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಜತೆಗೆ ದುಪ್ಪಟ್ಟು ಪ್ರಮಾಣದ ದಂಡವನ್ನೂ ಮಾರ್ಷಲ್‌ಗ‌ಳು ವಿಧಿಸಲಿದ್ದಾರೆ. ಹೀಗಾಗಿ ವಸೂಲಿಗಾಗಿ ರಶೀದಿ ನೀಡುವ ಆ್ಯಂಡ್ರಾಯ್ಡ ಮುದ್ರಣ ಯಂತ್ರ ಖರೀದಿಸಲು ನಿರ್ಧರಿಸಲಾಗಿದೆ.

233 ಮಾರ್ಷಲ್‌ಗ‌ಳು ಹಾಗೂ 200 ಆರೋಗ್ಯ ನಿರೀಕ್ಷಕರಿಗೆ ಯಂತ್ರ ನೀಡಲು ತೀರ್ಮಾನಿಸಿದ್ದು, 2 ಕೋಟಿ ರೂ. ವೆಚ್ಚದಲ್ಲಿ 400 ಯಂತ್ರಗಳ ಖರೀದಿಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಯಂತ್ರದಲ್ಲಿ ದಂಡ ಪಾವತಿಸಿದವರ ಭಾವಚಿತ್ರ ಹಾಗೂ ಬಳಸಿದ ವಾಹನದ ಭಾವಚಿತ್ರ ಸೆರೆಹಿಡಿಯಲಾಗುತ್ತದೆ. ಬಳಿಕ ಆ ಮಾಹಿತಿಯನ್ನು ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ಅತ್ಯಾಧುನಿಕ ಸಹಾಯವಾಣಿ ಕೇಂದ್ರಕ್ಕೆ ರವಾನಿಸಲಾಗುತ್ತದೆ.

Advertisement

-233 ಮಾರ್ಷಲ್‌ಗ‌ಳ ನೇಮಕ
-2 ಕೋಟಿ ರೂ. ವೆಚ್ಚದಲ್ಲಿ 400 ಯಂತ್ರಗಳ ಖರೀದಿ
-ತ್ಯಾಜ್ಯ ಎಸೆದವರ ಭಾವಚಿತ್ರ, ಬಳಸಿದ ವಾಹನ ಚಿತ್ರ ಸೆರೆ
-ಅತ್ಯಾಧುನಿಕ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ರವಾನೆ

Advertisement

Udayavani is now on Telegram. Click here to join our channel and stay updated with the latest news.

Next