“ಎಲ್ಲವೂ ಸರಿ ಇದ್ದಿದ್ದರೆ, ಇಷ್ಟೊತ್ತಿಗೆ ನಾನು ಸಾವಿರ ಹಪ್ಪಳ ಮಾಡ್ತಿದ್ದೆ ಗೊತ್ತಾ…’ ಬೆಂಗಳೂರಿನ ಉರಿ ಬಿಸಿಲನ್ನು ದಿಟ್ಟಿಸುತ್ತಾ ಹೀಗಂತ ಅದೆಷ್ಟು ಬಾರಿ ಹೇಳಿದ್ದೇನೋ ಲೆಕ್ಕವಿಲ್ಲ. “ಬಿಡು ಮಾರಾಯ್ತಿ, ಮುಂದಿನ ವರ್ಷವೂ ಹಲಸಿನ ಕಾಯಿ ಇರುತ್ತೆ. ಬಿಸಿಲಂತೂ ಇದ್ದೇ ಇರುತ್ತೆ. ಆಗ ಹಪ್ಪಳ ಮಾಡುವಿಯಂತೆ, ಈಗ ಸುಮ್ಮನಾಗು’ ಎಂದು ರೇಗುತ್ತಾರೆ ಯಜಮಾನರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಯುಗಾದಿ ಹಬ್ಬಕ್ಕೆ ನಾನು ಊರಿಗೆ ಹೋಗ್ಬೇಕಿತ್ತು.
ಏಪ್ರಿಲ್ ಮೊದಲ ವಾರ ನಡೆಯಲಿದ್ದ ಅಕ್ಕನ ಮಗಳ ಮದುವೆ ಮುಗಿಸಿ, ಅಮ್ಮ- ಅತ್ತಿಗೆಯ ಜೊತೆ ಸೇರಿ, ವರ್ಷ ಕ್ಕಾಗುವಷ್ಟು ಹಲಸಿನ ಹಪ್ಪಳ, ಚಿಪ್ಸ್, ಸಂಡಿಗೆ ಮಾಡ ಬೇಕಿತ್ತು. ಅಟ್ಟದ ಮೇಲಿರುವ ಚನ್ನೆಮಣೆ ತೆಗೆದು, ಮಕ್ಕಳಿಗೆ ಆಟ ಕಲಿಸಬೇಕಿತ್ತು. ಮಾವಿನ ಹಣ್ಣಿನಿಂದ ಮಾಡಿದ, ಅಮ್ಮನ ಕೈ ರುಚಿಯ ಸೀಕರಣೆ ಸವಿಯ ಬೇಕಿತ್ತು. ಕಾಡಿನ ಹಣ್ಣುಗಳನ್ನು ಮಕ್ಕಳಿಗೆ ಪರಿಚಯಿಸಬೇಕಿತ್ತು. ಉಪ್ಪಿನಕಾಯಿ ಮಾಡುವುದನ್ನು, ಅತ್ತೆ ಯಿಂದ ಹೇಳಿಸಿಕೊಳ್ಳಬೇಕಿತ್ತು.
ಮಕ್ಕಳ ರಜೆ ಮುಗಿ ಯುವತನಕ ಊರಲ್ಲೇ ಇದ್ದು, ಆಮೇಲೆ ಹಪ್ಪಳ, ಸಂಡಿಗೆಯ ಗಂಟಿನೊಂದಿಗೆ ಬೆಂಗಳೂರು ಬಸ್ಸು ಹತ್ತಬೇಕಿತ್ತು… ಆದರೆ, ಮಾರ್ಚ್ ಮೊದಲ ವಾರವೇ, ಕೊರೊನಾ ಭಾರತದ ದಾರಿ ಹಿಡಿದು ಬಂದಿತ್ತು. ಇದ್ದಕ್ಕಿದ್ದಂತೆ, ಮಕ್ಕಳಿಗೆ ಎಕ್ಸಾಮ್ ಇಲ್ಲ ಅಂತ ಘೋಷಿಸಲಾಯ್ತು. ಯಜಮಾನರ ಆಫೀಸಿನಲ್ಲೂ ವರ್ಕ್ ಫ್ರಮ್ ಹೋಂ ಬಗ್ಗೆ ಮಾತು ಕೇಳಿ ಬಂತು. “ಈಗಲೇ ಊರಿಗೆ ಹೋಗೋದು ಬೇಡ.
ವರ್ಕ್ ಫ್ರಮ್ ಹೋಂ ಕೊಡುತ್ತಾರಾ ಅಂತ ನೋಡಿಕೊಂಡು, ಯುಗಾದಿ ಹಿಂದಿನ ದಿನ ಎಲ್ಲಾ ಒಟ್ಟಿಗೆ ಹೊರ ಡೋಣ’ ಅಂದ್ರು ಮನೆಯವರು. ಜನತಾ ಕರ್ಫ್ಯೂ ಅಂತ ಒಂದು ದಿನ ಒಳಗಿದ್ದವರು, ವಾರವಲ್ಲ, ತಿಂಗಳುಗಟ್ಟಲೆ ಗೃಹ ಬಂಧಿಗಳಾಗ್ತಿವಿ ಅಂತ ಗೊತ್ತಿದ್ದಿದ್ದರೆ… ಆನಂತರದ ಒಂದೂವರೆ ತಿಂಗಳ ಬಗ್ಗೆ ಹೇಳಬಾರದು ಬಿಡಿ. ಅದಾಗಲೇ ಊರಿಗೆ ಹೋಗಿದ್ದ ಅಕ್ಕ, ತಂಗಿ, ಅವರ ಮಕ್ಕಳು, ಹಳ್ಳಿಯ ಬೆಟ್ಟ-ಗುಡ್ಡಗಳನ್ನೆಲ್ಲ ಹತ್ತಿ,
ಕಾಡಿನ ಹಣ್ಣುಗಳನ್ನೆಲ್ಲ ತಿಂದು, ಹಲಸಿನ ಚಿಪ್ಸ್, ಹಪ್ಪಳ ಮಾಡಿ, ನನ್ನ ಹೊಟ್ಟೆ ಉರಿಸಲೆಂದೇ ಹತ್ತಾರು ಫೋಟೋ ಕಳಿಸುತ್ತಿದ್ದರು; “ನೀನೊಬ್ಬಳೇ ಮಿಸ್ಸಿಂಗ್ ಕಣೇ’ ಅನ್ನೋ ಕ್ಯಾಪ್ಶನ್ ಜೊತೆಗೆ. ಕೆಲವೊಮ್ಮೆ ವಿಡಿಯೋ ಕಾಲ್ ಮಾಡಿಯೂ, ನನ್ನ ಬೇಸರವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದರು. ಅವರ ಸಂಭ್ರಮವನ್ನೆಲ್ಲ ನೋಡಿ, ಮನಸ್ಸು ಹೇಳುತ್ತಿತ್ತು: ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ನಾನೂ ಅವರೊಂದಿಗೆ ಇರಬೇಕಿತ್ತು…
* ರಶ್ಮಿ ಎ.ಪಿ.