ಬೆಂಗಳೂರು: ಸಣ್ಣ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಸರಕಾರದಿಂದ ಜಮೀನು ಪಡೆದು ಕಾಲಮಿತಿಯಲ್ಲಿ ಉದ್ಯಮ ಸ್ಥಾಪನೆ ಮಾಡದಿರುವ ಪ್ರಕರಣಗಳಲ್ಲಿ ಜಮೀನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್. ಆರ್. ಶ್ರೀನಿವಾಸ್ ತಿಳಿಸಿದ್ದಾರೆ.
ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಬೇಡಿಕೆ ಸಾಕಷ್ಟಿದೆ. ಆದರೆ ಸಣ್ಣ ಕೈಗಾರಿಕೆಗೆ ಎಂದೇ ಜಮೀನು ಪಡೆದವರು ಖಾಲಿ ಬಿಟ್ಟಿದ್ದಾರೆ. ಕೆಲವು ಪ್ರಕರಣಗಳಲ್ಲಿ ಬೇರೆ ಬೇರೆ ಉದ್ದೇಶಕ್ಕೂ ಬಳಕೆಯಾಗಿದೆ. ಹೀಗಾಗಿ ಕಾಲಮಿತಿಯಲ್ಲಿ ಉದ್ಯಮ ಸ್ಥಾಪನೆಯಾಗಿದ್ದರೆ ಅಥವಾ ಬೇರೆ ಉದ್ದೇಶಕ್ಕೆ ಬಳಕೆಯಾಗಿದ್ದರೆ ಜಮೀನನ್ನು ವಾಪಸ್ ಪಡೆಯಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಹದಿನೈದು ವರ್ಷಗಳಲ್ಲಿ ಈ ರೀತಿ ಜಮೀನು ಮಂಜೂರು ಮಾಡಿರುವ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾಹಿತಿ ಬಂದ ಅನಂತರ ಕಾನೂನು ಪ್ರಕಾರ ಎರಡು ನೋಟಿಸ್ ನೀಡಿ ಅನಂತರ ಇಂಥಾ ಜಮೀನುಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ತಿಳಿಸಿದರು.
ಜಮೀನು ಹಂಚಿಕೆಯಾದ ಮೇಲೆ ಆರು ತಿಂಗಳಿನಿಂದ ಎರಡು ವರ್ಷದ ಒಳಗೆ ಉದ್ಯಮ ಸ್ಥಾಪಿಸಬೇಕು. ಶೇ.70ರಷ್ಟು ಕಡೆ ಕೈಗಾರಿಕೆಗಳು ಸ್ಥಾಪನೆಯೇ ಆಗಿಲ್ಲದಿರುವುದು ಕಂಡುಬಂದಿದೆ. ಸುಮಾರು 15 ರಿಂದ ಇಪ್ಪತ್ತು ಸಾವಿರ ಎಕರೆ ಪ್ರದೇಶದಲ್ಲಿ ಈ ರೀತಿ ಆಗಿದೆ ಎಂದರು.
ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೋದ್ಯಮಿಗಳು, ಕೈಗಾರಿಕೆ ಸಂಘಟನೆಗಳ ಸಭೆ ಕರೆದು ಚರ್ಚಿಸಿ ಅವರ ಸಮಸ್ಯೆ ಹಾಗೂ ಸರಕಾರದ ಯೋಜನೆ ಅನುಷ್ಠಾನದ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು. ಪ್ರತಿ ತಾಲೂಕಿನಲ್ಲೂ ಒಂದು ಸಣ್ಣ ಕೈಗಾರಿಕೆ ಶೆಡ್ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು ಅದಕ್ಕಾಗಿ ಜಮೀನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೃಹತ್ ಕೈಗಾರಿಕೆ ಸಚಿವರ ಜತೆಯೂ ಈ ಬಗ್ಗೆ ಚರ್ಚಿಸಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದ್ದೇನೆ ಎಂದು ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಸಬ್ಸಿಡಿ ಪೋಲು
ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ ವಿಚಾರದಲ್ಲೂ ಸರಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಆದರೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಕೆಎಸ್‌ಎಫ್ಸಿಗೆ 800 ಕೋ.ರೂ. ಸಹಾಯಧನವನ್ನು ಸರಕಾರ ನೀಡುತ್ತಿದೆ. ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.