ಸಂಪಾದನೆ ಎಷ್ಟಿದೆ ಎಂಬುದು ಮುಖ್ಯವಲ್ಲ. ಬರುವ ಸಂಬಳದಲ್ಲಿ ನಾವು ಎಷ್ಟು ಉಳಿಸಿದ್ದೇವೆ ಎಂಬುದೇ ಮುಖ್ಯ…
ನಮ್ಮೆಲ್ಲರಲ್ಲೂ ಏಳುವ ಮೊದಲ ಪ್ರಶ್ನೆ: ಇಷ್ಟು ದುಬಾರಿಯ ದಿನದಲ್ಲಿ, ಆದಾಯವೇ ಕಡಿಮೆ ಇರುವಾಗ ಉಳಿಸುವುದು ಹೇಗೆ? ಇಷ್ಟಕ್ಕೂ ಉಳಿಸಲೇಬೇಕು ಎಂದರೆ, ಸಂಪಾದನೆ ಜಾಸ್ತಿ ಆದಮೇಲೆ ಉಳಿಸಿದರಾಯಿತು. ಈಗ ಹೇಗೋ ಸಂಸಾರ ನಡೆದರೆ ಸಾಕು ಅಂತ ನಾವೇ ಉತ್ತರವನ್ನೂ ಹೇಳಿಕೊಳ್ಳುತ್ತೇವೆ. ಹಿಂದೆಯೇ ನಾವಂದುಕೊಳ್ಳುತ್ತೇವೆ; ಜಾಸ್ತಿ ದುಡಿದಾಗ ಜಾಸ್ತಿ ಉಳಿಸಬಹುದು ಎಂದು. ಆದರೆ, ಈ ಮಾತು ಪೂರ್ತಿ ನಿಜ ಅಲ್ಲ. ನಾವು ಎಷ್ಟೇ ದುಡಿಯುತ್ತಿರಲಿ, ದುಡಿದಿರಲಿ, ನಮ್ಮ ಸಂಪಾದನೆ ಎಷ್ಟೇ ಇರಲಿ, ಅದು ಮುಖ್ಯ ಅಲ್ಲ. ಬದಲಾಗಿ, ನಾವು ಎಷ್ಟು ಉಳಿಸುತ್ತೇವೆ ಎನ್ನುವುದೇ ಮುಖ್ಯ. ಅದು ಹೇಗೆಂದರೆ, ನಾನು ಯಾವ ಪಾತ್ರೆಯಲ್ಲಿ ನೀರು ತಂದೆ ಎನ್ನವುದಕ್ಕಿಂತ ಎಷ್ಟು ನೀರು ಉಳಿದಿದೆ ಎಂದ ಹಾಗೆ. ಹಂಡೆಯಲ್ಲಿ ನೀರು ತಂದರೂ ಎಲ್ಲವನ್ನೂ ಸುರಿದರೆ ಏನು ಬಂತು? ಉಳಿತಾಯ ಎನ್ನುವುದೂ ಹೀಗೆ.
ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದರೂ ತಿಂಗಳ ಕೊನೆಯಲ್ಲಿ ದುಡ್ಡೇ ಇಲ್ಲ ಎನ್ನುವ; ಅಯ್ಯೋ, ಎಷ್ಟು ದುಡಿದರೂ ಸಾಲದು ಎಂದು ಹೇಳುವವರನ್ನು ನೋಡಿದ್ದೇವೆ. ಎಷ್ಟೇ ಇದ್ದರೂ ನನಗೆ ಸಾಕಷ್ಟು ಇದೆ ಎನ್ನುವ ಸಂತೃಪ್ತಿಯ ಮನೋಭಾವ ಇರುವವರು ವಿರಳ. ಕೆಲವರಂತೂ- ನಾವು ಜಾಸ್ತಿ ಸಂಪಾದಿಸುತ್ತೇವೆ ನಿಜ. ಆದರೆ, ಸಂಪಾದನೆಗೆ ತಕ್ಕ ಹಾಗೆ ಖರ್ಚೂ ಇರುತ್ತದೆ ಎನ್ನುತ್ತಾರೆ. ಈ ಖರ್ಚು ನಿರ್ಧರಿಸುವವರು ಯಾರು? ನಾವಲ್ಲದೇ ಬೇರೆ ಯಾರೂ ಅಲ್ಲ. ಖರ್ಚು ನಾವೇ ಮಾಡುವಂಥದ್ದು. ಅದನ್ನೇ ಇನ್ನೊಂದು ರೀತಿಯಿಂದ ನೋಡುವುದಾದರೆ, ನೀನು ಒಂದು ರೂಪಾಯಿ ಉಳಿಸಿದರೆ, ಒಂದು ರೂಪಾಯಿ ಗಳಿಸಿದ ಹಾಗೆ. ಹಾಗಾಗಿ ಉಳಿಸುವುದು ಗಳಿಸುವುದರ ಮೂಲ. ಉಳಿಕೆಯೇ ಗಳಿಕೆಯೂ ಆಗುವುದು ಹೀಗೆ.
ನಿಮ್ಗೆ ಹೇಗಪ್ಪಾ ವಿವರಿಸಿ ಹೇಳ್ಳೋದು? ನಮಗೆ ಎಷ್ಟೊಂದು ಕಮಿಟ್‌ಮೆಂಟ್ ಇದೆ ಗೊತ್ತಾ? ವಿಪರೀತ ಖರ್ಚು ಇದೆ… ಹೀಗೆ ಹೇಳುವ, ಮಧ್ಯ ವಯಸ್ಸೂ ದಾಟಿರದವರನ್ನು ನೋಡುತ್ತೇವೆ. ಅವರ ಖರ್ಚು ಏನು ಅಂದರೆ ಮತ್ತದೇ ಬಟ್ಟೆ, ಬರೆ, ಒಡವೆ, ಜೊತೆಗೆ ಮನೆಗಾಗಿ ಮಾಡಿದ ಸಾಲ, ಹೊಸ ಕಾರು ಖರೀದಿಸಿದ ಇ.ಎಂ.ಐ. ಹೀಗೆ ಹನುಮಂತನ ಬಾಲ ಬೆಳೆಯುತ್ತದೆ. ಇವೆಲ್ಲವೂ ಅನಿವಾರ್ಯ ಅಗತ್ಯಗಳಾ ಎಂದು ಕೇಳಿದರೆ, ಒಬ್ಬರಿಗೆ ಅಗತ್ಯ ಎಂದಿರುವುದು ಇನ್ನೊಬ್ಬರಿಗೆ ಅಗತ್ಯ ಅಲ್ಲದೇ ಇರಬಹುದು. ತನಗೆ ದುಡಿಯುವ ಶಕ್ತಿ ಇದೆ. ಹಾಗಾಗಿ ಅದಕ್ಕೆ ತಕ್ಕ ಹಾಗೆ ಖರ್ಚು ಮಾಡುತ್ತೇನೆ. ಈಗಲ್ಲದೇ ಇನ್ನು ಯಾವಾಗ ನಾನು ಇದನ್ನೆಲ್ಲ ಮಾಡಬೇಕು ಎಂಬ ಉತ್ತರ ಬರುತ್ತದೆ. ಖರ್ಚೇ ಬೇರೆ; ಅಗತ್ಯವೇ ಬೇರೆ. ಇವೆರಡೂ ಒಂದೇ ಎಂದು ನಮಗೆ ನಾವೇ ಸಮಜಾಯಿಷಿ ಹೇಳಿಕೊಳ್ಳುವುದು ಬೇಡ. ಇವತ್ತಿನ ನಮ್ಮ ದುಡಿಯುವ ಶಕ್ತಿ ಮತ್ತು ಸಾಮರ್ಥ್ಯ ವನ್ನು ಅವಲಂಬಿಸಿ ಕಮಿಟ್‌ಮೆಂಟ್ ಮಾಡಿಕೊಳ್ಳುತ್ತೇವೆ. ಎಷ್ಟೋ ಸಾರಿ ಇದು ಅಗತ್ಯ ಇರದಿದ್ದರೂ ಹೇಗೂ ಸಂಪಾದನೆ ಇದೆ, ಸಾಲ ಮಾಡಿದರಾಯಿತು ಎಂದು ಸಾಲವನ್ನೂ ಮಾಡುತ್ತೇವೆ. ಇಲ್ಲಿ ಅಗತ್ಯ ಎಷ್ಟು ಎಂದು ಲೆಕ್ಕ ಹಾಕುವ ವಿವೇಕವಿದ್ದರೆ ಮಾತ್ರ ಕಮಿಟ್‌ಮೆಂಟ್ ಎನ್ನುವ ಹಗ್ಗ ಕೊಟ್ಟು ನಾವೇ ಕಟ್ಟಿಸಿಕೊಳ್ಳುವುದರಿಂದ ಹೊರ ಬರಬಹುದು.
ಅತಿಯಾದ ಕಮಿಟ್‌ಮೆಂಟ್, ಅದರಲ್ಲೂ ಹಣಕಾಸು ವಿಷಯದಲ್ಲಿ ಮಾಡಿಕೊಳ್ಳುವ ಕಮಿಟ್‌ಮೆಂಟ್ ನಮ್ಮ ಜೀವನದ ನೆಮ್ಮದಿಯನ್ನೇ ಹಾಳು ಮಾಡುತ್ತದೆ. ಹೀಗೆ ಆದಾಗ, ಅರಮನೆಯಂಥ ಮನೆ, ಐಷಾರಾಮಿ ಕಾರು, ಆಳುಕಾಳು ಇದ್ದರೂ ಯಾವುದನ್ನೂ ಸಂಭ್ರಮದಿಂದ ಅನುಭವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಯಾವುದೇ ಕಮಿಟ್‌ಮೆಂಟ್, ನಮ್ಮ ದುಡಿಯುವ ಶಕ್ತಿಯನ್ನು ಅವಲಂಬಿಸಿ ಇರುವಂತೆ ನಮ್ಮ ಅಗತ್ಯಕ್ಕೂ ಅನುಗುಣವಾಗಲಿ. ದುಡ್ಡು ಇದೆ ಎಂದು ಬೇಕಾಗಿದ್ದು, ಬೇಡವಾಗಿದ್ದನ್ನು ತಂದುಕೊಳ್ಳುವುದು ಬೇಡ. ನೆನಪಿರಲಿ, ನಮಗೆ ಬೇಡವಾದದ್ದನ್ನು ತಂದರೆ ನಮಗೆ ಬೇಕಾಗಿರುವುದನ್ನು ಮಾರುವ ಸ್ಥಿತಿ ಬರಬಹುದು.
– ಸುಧಾ ಶರ್ಮ