Advertisement

ಗಣೇಶ ಚೌತಿಗೆ ವಿಗ್ರಹಗಳು ಸಿದ್ಧ

09:19 PM Aug 31, 2019 | Lakshmi GovindaRaj |

ಗುಂಡ್ಲುಪೇಟೆ: ಹಿಂದುಗಳ ಪವಿತ್ರ ಹಬ್ಬ ಗಣೇಶ ಚತುರ್ಥಿಗೆ ಪಟ್ಟಣದ ತುಂಬೆಲ್ಲಾ ಈಗ ಗಣಪಣ್ಣನ ಮೂರ್ತಿಗಳು ರಾರಾಜಿಸ ತೊಡಗಿದೆ. ಪರಿಸರ ಪ್ರೇಮಿ ಗಣೇಶ ಮೂರ್ತಿಗಳು ಸೇರಿದಂತೆ ವಿವಿಧ ಬಣ್ಣ ಬಣ್ಣ, ನಾನಾ ರೂಪಗಳ ಮೂರ್ತಿಗಳು ಪಟ್ಟಣದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಈಗಾಗಲೇ ಪಟ್ಟಣ ಕುಂಬಾರ ಬೀದಿಯಲ್ಲಿ ಕಳೆದ ಆರು ತಿಂಗಳಿನಿಂದ ಕಲಾವಿದರ ಕೈ ಚಳಕದಿಂದ ಅರಳುತ್ತಿರುವ ಗಣಪನ ಮೂರ್ತಿಗಳು ಈಗಾಗಲೇ ತಾಲೂಕಿನಾದ್ಯಂತ ಮಾರಾಟವಾಗಲು ಸಿದ್ಧವಾಗಿದೆ.

Advertisement

45 ವರ್ಷದಿಂದ ಮೂರ್ತಿ ತಯಾರಿ ಕಾಯಕ: ಕಳೆದ 45ಕ್ಕೂ ಹೆಚ್ಚು ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ಮತ್ತು ಕುಟುಂಬದವರನ್ನು ತೊಡಗಿಸಿಕೊಂಡಿರುವ ಕುಂಬಾರ ಬೀದಿಯ ವಾಸಿ ಹಾಗೂ ಕಲಾವಿದ ಶ್ರೀನಿವಾಸ್‌ ಅವರು ಜೇಡಿಮಣ್ಣಿನಿಂದ ತಯಾರಿಸಿದ್ದ ಗಣಪತಿ ಮೂರ್ತಿಗೆ ಬಣ್ಣ ಹಚ್ಚುವ ಕಾಯಕದಲ್ಲಿ ನಿರತರಾಗಿದ್ದರು. ಗಣೇಶ ಮೂರ್ತಿ ತಯಾರಿಕೆಯ ಕಾಯಕವನ್ನು ಅವರ ತಂದೆಯವರ ಕಾಲದಿಂದಲೂ ಅಂದರೆ ಸುಮಾರು 45ಕ್ಕೂ ಹೆಚ್ಚು ವರ್ಷಗಳಿಂದಲೂ ಕುಲಕಸುಬನ್ನಾಗಿ ಮಾಡಿಕೊಂಡಿದ್ದಾರೆ.

ಮೂರ್ತಿಗೆ ವಾಟರ್‌ ಕಲರ್‌ ಬಳಕೆ: ಪ್ರಮುಖವಾಗಿ ತಾಲೂಕಿನ ಎಲ್ಲಾ ಹಳ್ಳಿ-ಹಳ್ಳಿಗೂ ಗಣೇಶನ ಮೂರ್ತಿಯನ್ನು ನೀಡುತ್ತಾ ಬಂದಿರುವ ಶ್ರೀನಿವಾಸ್‌, ಒಂದು ಅಡಿ ಮೂರ್ತಿಯಿಂದ ಐದು ಅಡಿ ಮೂರ್ತಿಯವರೆಗೆ ತಮ್ಮ ಮನೆಯಲ್ಲೇ ತಯಾರು ಮಾಡುತ್ತಾರೆ. ಗಣೇಶನ ಹಬ್ಬಕ್ಕಾಗಿಯೇ ಆರು ತಿಂಗಳು ಕಾಲ ಮೂರ್ತಿ ತಯಾರಿಕೆಯಲ್ಲಿ ತಲ್ಲೀನರಾಗುವ ಇವರು, ಗಣೇಶ ಹಾಗೂ ಗೌರಿ ವಿಗ್ರಹಗಳ ತಯಾರಿಕೆಯಲ್ಲಿ ಎತ್ತಿದ ಕೈ. ವಿವಿಧ ಆಕಾರಗಳ ಮುದ್ದು -ಮುದ್ದು ಗಣಪಗಳು ಇವರ ಕೈಯಲ್ಲಿ ಆಕಾರಗೊಂಡು ಮಿಂಚುತ್ತವೆ. ಇತ್ತೀಚಿಗೆ ಸರ್ಕಾರ ಪರಿಸರ ಸ್ನೇಹಿ ಗಣಪನನ್ನು ತಯಾರಿಸಲು ಹಾಗೂ ಹಾನಿಕಾರಕ ಬಣ್ಣಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ. ಆದ್ದರಿಂದ ಪರಿಸರ ಸ್ನೇಹಿ ಗಣಪ ಹಾಗೂ ಪರಿಸರಕ್ಕೆ ಮಾರಕವಲ್ಲದ ವಾಟರ್‌ ಕಲರ್‌ ಗಣಪಗಳನ್ನು ತಯಾರಿಸಲಾಗುತ್ತಿದೆ.

ಮಕ್ಕಳ ಉತ್ಸಾಹ: ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಪಟ್ಟಣದ ಗಲ್ಲಿ ಗಲ್ಲಿಗಳಲ್ಲೂ ಗಣೇಶನನ್ನು ಕೂರಿಸಲು ಕಂಬನೆಟ್ಟು ಗಣೇಶನ ಫೋಟೋ ಹಾಕಿ, ಜಾಗ ಗುರುತಿಟ್ಟು ಕೊಳ್ಳುತ್ತಿರುವ ಹಾಗೂ ಮನೆ ಮನೆಗೆ ತೆರಳಿ ಗೋಲಕ ಹಿಡಿದು ಗಣಪತಿ ವಸೂಲಿ ಎಂದು ಕೂಗುತ್ತಾ ಚಂದಾ ಹಣ ಸಂಗ್ರಹಿಸುತ್ತಿರುವ ಮಕ್ಕಳ ಉತ್ಸಾಹ ಹಬ್ಬಕ್ಕೆ ಮತ್ತಷ್ಟು ಕಳೆ ಕಟ್ಟುತ್ತಿರುವುದರಲ್ಲಿ ಎರಡು ಮಾತಿಲ್ಲ. ಏನೇ ಆಗಲಿ ಮುದುಕರಿಂದ ಮಕ್ಕಳವರೆಗೂ ಇಷ್ಟವಾಗುವ ಪ್ರಿಯ ದೈವ ಗಣೇಶನನ್ನು ಬರಮಾಡಿಕೊಳ್ಳಲು ಜನರು ಕಾತುರರಾಗಿರುವುದು ಸತ್ಯ.

ಕಳೆದ 45 ವರ್ಷಗಳಿಂದ ಗಣಪತಿಯ ಮೂರ್ತಿಯನ್ನು ಮಾಡುತ್ತಿದ್ದೇವೆ. ಇದಕ್ಕಾಗಿ ನಮ್ಮ ಕುಟುಂಬದ ಸದಸ್ಯರು ಸೇರಿ ಆರು ತಿಂಗಳಿನಿಂದ ಶ್ರಮ ಹಾಕುತ್ತೇವೆ. ಪಿಒಪಿ ಗಣಪತಿಯನ್ನು ಸರ್ಕಾರ ನಿಷೇಧಿಸಿರುವುದರಿಂದ ಈ ಬಾರಿ ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣಪತಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ.
-ಶ್ರೀನಿವಾಸ್‌, ಗಣಪತಿ ತಯಾರಕರು, ಗುಂಡ್ಲುಪೇಟೆ

Advertisement

ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿರುವ ಅಣ್ಣೂರು ರಸ್ತೆಯ ಪಂಪ್‌ಹೌಸ್‌ನಲ್ಲಿ ಸುಮಾರು 15 ಅಡಿ ಅಗಲದ ಮತ್ತು ಇಪ್ಪತ್ತು ಅಡಿ ಉದ್ದದ ಕೃತಕ ತೊಟ್ಟಿಯನ್ನು ಪುರಸಭೆ ವತಿಯಿಂದ ನಿರ್ಮಿಸಲಾಗಿದೆ. ಸಾರ್ವಜನಿಕರು ಪಿಒಪಿ ಗಣಪತಿಯನ್ನು ಬಳಸದೇ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪೂಜಿಸಿ. ನಂತರ ಗಣಪತಿಯನ್ನು ವಿಸರ್ಜಿಸಲು ಅನುಕೂಲ ಮಾಡಲಾಗಿದೆ. ಇದರ ಬಳಕೆ ಮಾಡಿಕೊಂಡು ಪರಿಸರ ಸಂರಕ್ಷಣೆ ಮಾಡಿ.
-ಎ.ರಮೇಶ್‌, ಮುಖ್ಯಾಧಿಕಾರಿ, ಪುರಸಭೆ, ಗುಂಡ್ಲುಪೇಟೆ

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next