ಬೆಂಗಳೂರು: ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ ವತಿಯಿಂದ ಮಂಗಳವಾರ ಕೆ.ಆರ್.ಮಾರುಕಟ್ಟೆ ವ್ಯಾಪ್ತಿಯ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಈ ವೇಳೆ ಆಹಾರ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸ್, ಪಾಲಿಕೆ ಅಧಿಕಾರಿಗಳಿಂದ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ಯಾರಿಗೂ ಹೆದರದೆ, ನಿಶ್ಚಿಂತೆಯಿಂದ ವ್ಯಾಪಾರ ಮಾಡಿಕೊಳ್ಳಬಹುದು.
ಒಂದು ವೇಳೆ ಯಾರಾದರೂ ಹಣ ವಸೂಲಿ ಮಾಡಲು ಬಂದರೆ ಆ ಮಾಹಿತಿ ನನಗೆ ತಿಳಿಸಿ ಅವರ ಮೇಲೆ ಶಿಸ್ತು ಕ್ರಮ ವಹಿಸುತ್ತೇನೆ. ಇನ್ನು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಸಮೀಕ್ಷೆ ನಡೆಸಿ 24 ಸಾವಿರಕ್ಕೂ ಹೆಚ್ಚು ಬಿದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡುತ್ತಿದೆ ಎಂದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಮೊದಲ ಹಂತದಲ್ಲಿ 24 ಸಾವಿರ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುತ್ತಿದೆ. ರಸ್ತೆ ಅಕ್ಕಪಕ್ಕ, ಗಲ್ಲಿ, ಪಾದಚಾರಿ ಮಾರ್ಗ, ಸಾರ್ವಜನಿಕ ಉದ್ಯಾನ ಹಾಗೂ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸಂಚಾರಿಸುತ್ತಾ ವ್ಯಾಪಾರ ಮಾಡುವವರನ್ನು ಬೀದಿ ವ್ಯಾಪಾರಿಗಳೆಂದು ಪರಿಗಣಿಸಲಾಗಿದೆ.
ಪ್ರಸ್ತುತ ಕಳಾಸಿಪಾಳ್ಯ ವ್ಯಾಪ್ತಿಯಲ್ಲಿ 1,600 ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗಿದೆ. ಮುಂದಿಮ ದಿನಗಳಲ್ಲಿ ಹಂತ-ಹಂತವಾಗಿ ಗುರುತಿನ ಚೀಟಿ ಜತೆಗೆ ಟಾರ್ಪಲ್, ಪೆಟ್ಟಿಗೆ, ಸೋಲಾರ್ ಲೈಟ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಕೂಡಾ ನೀಡಲಾಗವುದು ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಂದಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಸಮೀಕ್ಷೆ ನಡೆಸಿ ಕೇವಲ 24,000 ಮಂದಿಗೆ ಮಾತ್ರ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ಸಮೀಕ್ಷೆ ನಡೆಸಿ ಎಲ್ಲರಿಗೂ ಗುರತಿನ ಚೀಟಿ ವಿತರಣೆ ಮಾಡಬೇಕೆಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಸದಸ್ಯರು ಆಗ್ರಹಿಸಿದರು.