Advertisement

Ration Card; ಬಿಪಿಎಲ್‌, ಅಂತ್ಯೋದಯಕ್ಕೆ ಆಹಾರ ಕಿಟ್‌: ಕೆ.ಎಚ್‌. ಮುನಿಯಪ್ಪ

12:11 AM Oct 22, 2024 | Team Udayavani |

ಬೆಂಗಳೂರು: ಬಿಪಿಎಲ್‌ ಹಾಗೂ ಅಂತ್ಯೋದಯ ಅನ್ನ ಕಾರ್ಡುದಾರರಿಗೆ ನೇರ ನಗದು ಪಾವತಿ ಬದಲು ಆಹಾರ ಕಿಟ್‌ ಪೂರೈಸಲು ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಅ. 28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

Advertisement

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು “ಅನ್ನ ಸುವಿಧಾ’ ಯೋಜನೆಯಡಿ 80 ವರ್ಷ ಮೇಲ್ಪಟ್ಟವರಿಗೆ ಮನೆಗೇ ಅಕ್ಕಿ ತಲುಪಿಸಲಾಗುತ್ತಿದೆ. ಇದಲ್ಲದೆ, ಕೇಂದ್ರ ಸರಕಾರವು ಕರ್ನಾಟಕಕ್ಕೆ ಭಾರತೀಯ ಆಹಾರ ನಿಗಮದ ಮೂಲಕ ಪ್ರತಿ ಕೆ.ಜಿ. 28 ರೂ.ಗಳಂತೆ ಅಕ್ಕಿ ಕೊಡಲು ಒಪ್ಪಿದ್ದು, ಇದನ್ನು ಖರೀದಿಸಲು ರಾಜ್ಯ ಸರಕಾರವೂ ಪ್ರಕ್ರಿಯೆ ನಡೆಸುತ್ತಿದೆ. ಒಂದು ವೇಳೆ ಈ ಅಕ್ಕಿ ಕೇಂದ್ರದಿಂದ ಸಿಕ್ಕಿದರೂ ರಾಜ್ಯ ಆಹಾರ ಇಲಾಖೆಯಿಂದ ನೀಡಿರುವ 12 ಲಕ್ಷ ಕಾರ್ಡುದಾರರಿಗೆ ಇದನ್ನು ಪೂರೈಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪರಿಷ್ಕರಣೆ ಅನಂತರ ಆಹಾರ ಕಿಟ್‌
ರಾಜ್ಯದಲ್ಲಿ ಎಲ್ಲ ಮಾದರಿಯ ಪಡಿತರ ಚೀಟಿಗಳು ಸೇರಿ ಒಟ್ಟು 1.51 ಕಾರ್ಡ್‌ಗಳಿದ್ದು, 5.22 ಕೋಟಿ ಫ‌ಲಾನುಭವಿಗಳಿದ್ದಾರೆ. ಇದರಲ್ಲಿ ಎಪಿಎಲ್‌ ಕುಟುಂಬಗಳೂ ಇವೆ. ಇದಲ್ಲದೆ, 2023ರಿಂದ ಈವರೆಗೆ ಸ್ವೀಕೃತವಾಗಿದ್ದ 4 ಲಕ್ಷಕ್ಕೂ ಅಧಿಕ ಅರ್ಜಿಗಳ ಪೈಕಿ 2.30 ಲಕ್ಷ ಅರ್ಜಿಗಳನ್ನು ಅರ್ಹ ಎಂದು ಪರಿಗಣಿಸಲಾಗಿದೆ. 75,437 ಅರ್ಜಿಗಳು ತಿರಸ್ಕೃತಗೊಂಡಿವೆ. 1.75 ಲಕ್ಷ ಕಾರ್ಡ್‌ಗಳನ್ನು ಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಡಿಬಿಟಿ ಬದಲು ಆಹಾರ ಕಿಟ್‌ಗೆ ಬೇಡಿಕೆ ಬಂದಿದ್ದು, ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಅನಂತರವಷ್ಟೇ ಆಹಾರ ಕಿಟ್‌ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

ಆಹಾರ ಪೋಲು ತಡೆಗೆ ಕಾನೂನು
ರಾಜ್ಯದ ಹೊಟೇಲ್‌ ಮತ್ತು ಕಲ್ಯಾಣ ಮಂಟಪಗಳಲ್ಲಿ ಸಾಕಷ್ಟು ಆಹಾರ ವ್ಯರ್ಥವಾಗುತ್ತಿದೆ. ಇದನ್ನು ತಡೆಯಲು ಕಾನೂನು ರೂಪಿಸುವ ಚಿಂತನೆ ನಡೆಸಲಾಗಿದೆ. ದೇಶದಲ್ಲಿ ವಾರ್ಷಿಕ 90 ಲಕ್ಷ ಕೋಟಿ ರೂ. ಮೌಲ್ಯದ ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿರುವ ಅಂದಾಜಿದ್ದು, ಇದನ್ನು ತಡೆಹಿಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜಾಗತಿಕ ಆಹಾರ ಭದ್ರತಾ ಸಮಸ್ಯೆಗಳಾದ ಹಸಿವು ಮತ್ತು ಅಪೌಷ್ಟಿಕತೆ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅವುಗಳನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಉತ್ತೇಜಿಸಲು ಶೀಘ್ರದಲ್ಲೇ ವಿಶ್ವ ಆಹಾರ ದಿನಾಚರಣೆ ಆಯೋಜಿಸಲಾಗುವುದು ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದರು.

ಆಹಾರ ಇಲಾಖೆಯಲ್ಲಿ ಸಾಕಷ್ಟು ಸುಧಾರಣ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕ ಪಡಿತರ ವಿತರಣ ವ್ಯವಸ್ಥೆಯನ್ನು ಪಾರದರ್ಶಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಅಳತೆ ಮತ್ತು ತೂಕದಲ್ಲಿ ವ್ಯತ್ಯಾಸ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ಕೂಡ ವಸೂಲಿ ಮಾಡಲಾಗುತ್ತಿದೆ. ಬಹಳ ವರ್ಷಗಳಿಂದ ಇದ್ದ ಸರ್ವರ್‌ ಸಮಸ್ಯೆಯನ್ನು ಬಗೆಹರಿಸಲಾಗಿದೆ.
– ಕೆ.ಎಚ್‌. ಮುನಿಯಪ್ಪ,
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next