ಕೆ.ಆರ್.ಪುರ: ಒಂದೆಡೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇನ್ನೊಂದೆಡೆ ಅರ್ಹ ಮತದಾರರಿಗೆ ಮತದಾನದಿಂದ ವಂಚಿತರಾಗುವ ಭಯ ಕಾಡುತ್ತಿದೆ. ಕಾರಣ ಕಳೆದ ಆರು ತಿಂಗಳ ಹಿಂದೆ ಮತದಾರರ ಗುರುತಿನ ಚೀಟಿ ತಿದ್ದುಪಡಿ ಹಾಗೂ ಹೊಸದಾಗಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದವರಿಗೆ ಈವರೆಗೂ ಗುರುತಿನ ಚೀಟಿ ತಲುಪಿಲ್ಲ.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.14 ಕಡೆಯದಿನವಾಗಿದ್ದು, ಕೆ.ಆರ್.ಪುರದ ಬಿಬಿಎಂಪಿ ಕಚೇರಿಯಲ್ಲಿ ಜನಜಂಗುಳಿ ಹೆಚ್ಚಾಗುತ್ತಿದೆ. ಆದರೆ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಅರ್ಜಿ ಸ್ವೀಕಾರ, ವಿಲೇವಾರಿಗೆ ನಿಯೋಜಿಸಿರುವ ಸಿಬ್ಬಂದಿ ಆ ಕಾರ್ಯ ಮಾಡದೆ, ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿದ್ದು, ಗುರುತಿನ ಚೀಟಿಗಾಗಿ ನಿತ್ಯ ಕಚೇರಿಗೆ ಅಲೆಯಬೇಕಾಗಿದೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.
ಇತ್ತಿಚೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕಂಪೂಟರ್‌ನಲ್ಲಿ ಅಪ್‌ಲೋಡ್ ಮಾಡಲು ತೊಂದರೆಯಾಗುತ್ತಿದೆ. ಇದರೊಂದಿಗೆ ಸಿಬ್ಬಂದಿ ಕೊರತೆ ಕೂಡ ಇದೆ ಎನ್ನುವ ಅಧಿಕಾರಿಗಳು, ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 4.38 ಲಕ್ಷ ಮತದಾರರಿದ್ದು, ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಮತ್ತು ತಿದ್ದುಪಡಿಗಾಗಿ ಕಳೆದ ಮೂರು ತಿಂಗಳಲ್ಲಿ 23 ಸಾವಿರ ಅರ್ಜಿಗಳು ಬಂದಿವೆ. ಈ ಪೈಕಿ ಅಸಮರ್ಪಕ ದಾಖಲೆಗಳ ಕಾರಣದಿಂದ ಸಾವರಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತಗೊಂಡಿವೆ. ಮತದಾನ ದಿನದ ಒಳಗಾಗಿ ಎಲ್ಲ ಅರ್ಹ ಮತದಾರರನ್ನು ಒಳಗೊಂಡ ಮತದಾರರ ಅಂತಿಮ ಪಟ್ಟಿ ಸಿದ್ಧಪಡಿಸುವುದಾಗಿ ಕಂದಾಯ ಅಧಿಕಾರಿ ಸತೀಶ್ ತಿಳಿಸಿದ್ದಾರೆ.
ಮತದಾರರ ಪಟ್ಟಿಗೆ ಹೆಸರು ಸೇರಿಸುವ ಸಂಬಂಧ ಜನವರಿ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೆ ಇದುವರೆಗೂ ಗುರುತಿನ ಚೀಟಿ ನೀಡಿಲ್ಲ. ಕೇಳಿದರೆ, ನಾಳೆ ಬರುತ್ತೆ, ನಾಡಿದ್ದು ಬನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದು, ಮೊದಲ ಬಾರಿ ಮತದಾನ ಮಾಡುವ ಅವಕಾಶ ಸಿಗುವುದೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ.
-ಸಹನಾ, ಸ್ಥಳೀಯ ನಿವಾಸಿ