Advertisement
ದಿ| ಹುಕ್ರ ಮೇರ ಎಂಬವರ ಮಗನಾದ ಚೆನ್ನ ಮೇರ ಎಂಬವರ ಬದುಕಿನಲ್ಲಿ ಮೂಡಿದ್ದ ಅನ್ಯಾಯವೆಂಬ ಭಾವ ಅವರನ್ನು ನಾಗರಿಕ ಸಮಾಜದಿಂದ ದೂರವಿರುವಂತೆ ಮಾಡಿತು. ತನಗೆ ಮಂಜೂರಾದ ಮನೆಯನ್ನು ಬೇರಾರೋ ಕಬಳಿಸಿದರೆಂಬ ಭಾವನೆಯಿಂದ ತನಗಿನ್ನು ಪಂ. ಕಚೇರಿ ಬೇಡ, ಚುನಾವಣೆ ಬೇಡ, ಪಡಿತರ ಬೇಡ, ವಿದ್ಯುತ್ ಬೇಡ, ಸೀಮೆ ಎಣ್ಣೆ ಬೇಡ ಎಂದೆಲ್ಲಾ ಪಟ್ಟು ಹಿಡಿದು, ನ್ಯಾಯಕ್ಕಾಗಿ ಪದೇ ಪದೇ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದವರ ಬದುಕಿನಲ್ಲಿ ಇದೀಗ ವಿಶ್ವಾಸದ ಆಶಾ ಕಿರಣ ಮೂಡಿದೆ. ಶಾಸಕ ಹರೀಶ್ ಪೂಂಜಾ, ವಿ.ಪರಿಷತ್ ಸದಸ್ಯ ಹರೀಶ್ ಕುಮಾರ್, ಪಂ. ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು. ಈ ಕುರಿತು ಉದಯವಾಣಿ 8 ತಿಂಗಳ ಹಿಂದೆ ಸಚಿತ್ರ ವರದಿ ಪ್ರಕಟಿಸಿತ್ತು.
ಚೆನ್ನ ಮೇರ ಅವರಿಗೆ ಸರಕಾರಿ ದಾಖಲೆಗಳನ್ನು ವಿತರಿಸಿ ಮಾತನಾಡಿದ ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್ಯ ಅವರು ಉಪ್ಪಿನಂಗಡಿಯ ನಂದ ಕುಮಾರ್ ಎಂಬ ಪೊಲೀಸ್ ಅಧಿಕಾರಿ ತೋರಿದ ಮಾನವೀಯ ಸ್ಪಂದನೆಯಿಂದಾಗಿ ಚೆನ್ನ ಮೇರ ಎಂಬ ಮುಗ್ಧ ವ್ಯಕ್ತಿಯ ಬದುಕಿನ ಕರಾಳ ಛಾಯೆ ಸಮಾಜಕ್ಕೆ ಅನಾವರಣವಾಯಿತು. ಅವರ ಹಠದ ಹೊರತಾಗಿಯೂ ಅವರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತು ಪತ್ರವನ್ನು ಒದಗಿಸಲು ಶ್ರಮಿಸಿದ ಜನ ಪ್ರತಿನಿಧಿಗಳ ಸಹಕಾರದಿಂದ ಚೆನ್ನರ ಮುನಿದಿದ್ದ ಮನಸು ನಲಿಯುವಂತಾಗಿದೆ. ಕಳೆದ 18 ವರ್ಷಗಳ ನೋವನ್ನು ಮರೆತು, ನಾಗರಿಕ ಸಮಾಜದೊಂದಿಗೆ ಸುಂದರ ಬದುಕು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.