Advertisement

ಖಾಲಿ ಜಾಗ ಗುರುತಿಸಿ ಶೀಘ್ರ ಪಾರ್ಕಿಂಗ್‌ಗೆ ವ್ಯವಸ್ಥೆ: ವೇದವ್ಯಾಸ ಕಾಮತ್‌

11:44 PM Jan 18, 2021 | Team Udayavani |

ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಿರುವ ಮಂಗಳೂರು ನಗರದಲ್ಲಿ ಪಾರ್ಕಿಂಗ್‌ಗೆ ಸಮರ್ಪಕ ಸ್ಥಳಾವಕಾಶ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಈ ನಡುವೆ ನೋ ಪಾರ್ಕಿಂಗ್‌ ಪ್ರದೇಶದಲ್ಲಿ ಕೆಲವೇ ನಿಮಿಷ ವಾಹನ ನಿಲ್ಲಿಸಿದರೂ ಸೂಚನೆ ನೀಡದೆ ಏಕಾಏಕಿ ಟೋಯಿಂಗ್‌ ಮಾಡಲಾಗುತ್ತದೆ ಎಂಬ ಆರೋಪ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಸುದಿನ ತಂಡ ವಸ್ತುಸ್ಥಿತಿ ಅಧ್ಯಯನ ನಡೆಸಿ “ಪಾರ್ಕಿಂಗ್‌ ಪರದಾಟ’ ಅಭಿಯಾನ ನಡೆಸಿ, ಪರಿಸ್ಥಿತಿಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದೆ. ಮುಂದಿನ ಕ್ರಮಗಳ ಕುರಿತು ಶಾಸಕ ವೇದವ್ಯಾಸ ಕಾಮತ್‌ ಮತ್ತು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು ಸುದಿನ ಸಂವಾದದಲ್ಲಿ ಭಾಗವಹಿಸಿ ಜನರ ಸಮಸ್ಯೆ ಪರಿಹರಿಸುವ ಕುರಿತು ಭರವಸೆ ನೀಡಿದ್ದು, ಪ್ರಮುಖಾಂಶ ಇಲ್ಲಿದೆ.

Advertisement

ಮಹಾನಗರ: ಮಂಗಳೂರು ನಗರದಲ್ಲಿ ತಲೆದೋರಿರುವ ಪಾರ್ಕಿಂಗ್‌ ಸಮಸ್ಯೆ ಬಗೆಹರಿಸಲು ವಿವಿಧೆಡೆ ಲಭ್ಯವಿರುವ ಖಾಲಿ ಜಾಗ ಗುರುತಿಸಿ ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡುವುದಕ್ಕೆ ಹತ್ತು ದಿನದೊಳಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸಂಚಾರ ಪೊಲೀಸರ ಟೋಯಿಂಗ್‌ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ತೊಂದರೆ ಸರಿಪಡಿಸಲು ಒಂದು ವಾರದೊಳಗೆ ಪೊಲೀಸ್‌ ಅಧಿಕಾರಿಗಳ ಜತೆಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ತಿಳಿಸಿದರು.

ಮಂಗಳೂರು ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಕುರಿತಂತೆ “ಸುದಿನ’ವು 8 ದಿನಗಳಿಂದ ಹಮ್ಮಿಕೊಂಡಿದ್ದ “ಪಾರ್ಕಿಂಗ್‌ ಪರದಾಟ’ ಅಭಿಯಾನದ ಭಾಗವಾಗಿ ಸಾರ್ವಜನಿಕರು ಮುಂದಿಟ್ಟಿರುವ ಸಮಸ್ಯೆ, ಸಲಹೆ ಅಭಿಪ್ರಾಯಗಳ ಕುರಿತಂತೆ ಉದಯವಾಣಿ ಮಂಗಳೂರು ಕಚೇರಿಯಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಭರವಸೆ ನೀಡಿದರು.

ತಾತ್ಕಾಲಿಕ ಪಾರ್ಕಿಂಗ್‌ ವ್ಯವಸ್ಥೆ ಅಗತ್ಯ :

ಮಂಗಳೂರಿನ ಸ್ಟೇಟ್‌ಬ್ಯಾಂಕ್‌, ಹಂಪನಕಟ್ಟೆ, ಜ್ಯೋತಿ, ಕಂಕನಾಡಿ, ಪಂಪ್‌ವೆಲ್‌, ಫಳ್ನೀರ್‌, ಕುದ್ರೋಳಿ, ಬಂದರು, ಪಿವಿಎಸ್‌, ಬಂಟ್ಸ್‌ ಹಾಸ್ಟೆಲ್‌, ಲಾಲ್‌ಬಾಗ್‌ ಸಹಿತ ಕೆಲವು ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್‌ಗೆ ಜಾಗದ ಕೊರತೆಯಿದೆ. ನಗರದಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಯಿಲ್ಲದೆ ಜನರಿಗೆ ತೊಂದರೆಯಾಗುತ್ತಿರುವುದು ನಿಜ. ಹೀಗಾಗಿ ಎಲ್ಲಿ ಖಾಲಿ ಜಾಗ ಲಭ್ಯವಿದೆಯೋ ಅಂತಹ ಕಡೆಗೆ ತುರ್ತಾಗಿ ತಾತ್ಕಾಲಿಕ ಪಾರ್ಕಿಂಗ್‌ ವ್ಯವಸ್ಥೆ ಕೈಗೊಳ್ಳಬೇಕಿದೆ ಎಂದ ರು.

Advertisement

ಪ್ರತ್ಯೇಕ ತಂಡ ರಚನೆ :

ಇದಕ್ಕಾಗಿ ನಗರ ವ್ಯಾಪ್ತಿಯಲ್ಲಿ ಸರಕಾರಿ/ಖಾಸಗಿ ಖಾಲಿ ಜಾಗ ವನ್ನು    ಗುರುತಿಸಿ ಪರಿಶೀಲನೆ ನಡೆಸುವುದಕ್ಕೆ ಪ್ರತ್ಯೇಕ ತಂಡವನ್ನು   ನಿಯೋಜಿಸಲಾಗುವುದು. ಈ ತಂಡವು ಖಾಲಿ ಜಾಗದ ಬಗ್ಗೆ ಪರಿಶೀಲಿಸಿ ಭೂ ಮಾಲಕರ ಜತೆಗೆ ಚರ್ಚಿಸಿ, ಜಾಗದ ಮಾಲಕರ ಮೂಲಕವೇ ಪೇ-ಪಾರ್ಕಿಂಗ್‌, ಪಾಲಿಕೆ ವತಿಯಿಂದ ಪೇ-ಪಾರ್ಕಿಂಗ್‌ ವ್ಯವಸ್ಥೆ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ. ಸುದಿನದಲ್ಲಿ ಒಂದು ವಾರದಿಂದ ಪಾರ್ಕಿಂಗ್‌ ಸಮಸ್ಯೆ ಬಗ್ಗೆ ವರದಿಯನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

 ವಾರದೊಳಗೆ ಪೊಲೀಸರ ಜತೆಗೆ ಸಭೆ :

ಪಾರ್ಕಿಂಗ್‌ ಸಮಸ್ಯೆ ಇತ್ಯರ್ಥಕ್ಕಾಗಿ ಜಾರಿಗೆ ಬಂದ ಟೋಯಿಂಗ್‌ನಿಂದಾಗಿ ನಗರದಲ್ಲಿ ಜನಸಾಮಾನ್ಯರು ವಿವಿಧ ಸಮಸ್ಯೆ ಎದುರಿಸುತ್ತಿದ್ದಾರೆ. ಪಾರ್ಕಿಂಗ್‌ಗೆ ಸೂಕ್ತ ಸ್ಥಳ ನಿಗದಿ ಮಾಡದೆ ಟೋಯಿಂಗ್‌ ಮಾಡುವುದು ಯಾವ ನ್ಯಾಯ? ಜತೆಗೆ ಟೋಯಿಂಗ್‌ ಮಾಡುವಾಗ ಪೊಲೀಸರು ನಿಯಮಾವಳಿ ಪಾಲಿಸುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ  ಶಾಸಕ ಕಾಮತ್‌,  “ಟೋಯಿಂಗ್‌  ಸರಕಾರದ ವ್ಯವಸ್ಥೆ. ಇದನ್ನು ನಿಲ್ಲಿಸುವುದು ಸೂಕ್ತವಲ್ಲ. ಆದರೆ ನಿಯಮಾವಳಿ ಪಾಲನೆ ಮಾಡದ ಅಧಿಕಾರಿಗಳ ಬಗ್ಗೆ ನಿಗಾ ವಹಿಸಬೇಕಾಗಿರುವುದು ಅಗತ್ಯ. ಟೋಯಿಂಗ್‌ ಅಧಿಕಾರಿಯಿಂದ ಯಾವುದೇ ಸಮಸ್ಯೆ ಆದ ಬಗ್ಗೆ ಸಾರ್ವಜನಿಕರ ದೂರುಗಳಿದ್ದರೆ ನನ್ನ ಗಮನಕ್ಕೆ ತರಲಿ. ಜತೆಗೆ ಟೋಯಿಂಗ್‌ ವಾಹನದಲ್ಲಿರುವವರು ಕೂಡ ನಿಯಮಾವಳಿ ಪಾಲಿಸಬೇಕು. ಏಕಾಏಕಿ ಬಂದು ವಾಹನ ಹೊತ್ತೂಯ್ಯದೆ ನಿಯಮಾನುಸಾರ ಅನೌನ್ಸ್‌ ಮೆಂಟ್‌ ಮಾಡಿ ಕಾಯಬೇಕು.

ಇದನ್ನು ಪಾಲನೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ನನಗೂ ತಿಳಿಸಿದ್ದಾರೆ. ಟೋಯಿಂಗ್‌ನಿಂದಾಗಿ ವಾಹನಗಳಿಗೆ ಹಾನಿಯಾದರೆ ಕ್ರಮ ಕೈಗೊಳ್ಳುವ ಬಗ್ಗೆಯೂ ತೀರ್ಮಾನಿಸಲಾಗುವುದು.  ಜನರಿಗೆ ಆಗುವ ಕಿರುಕುಳ ತಪ್ಪಿಸುವುದಕ್ಕೆ ಟೋಯಿಂಗ್‌ ವಾಹನದಲ್ಲಿ ಕೆಮರಾ ಅಳವಡಿಸುವ ಬಗ್ಗೆಯೂ ಚಿಂತನೆ ಇದೆ. ಈ ಎಲ್ಲ ವಿಚಾರದ ಬಗ್ಗೆ ವಾರದೊಳಗೆ ಪೊಲೀಸ್‌ ಆಯುಕ್ತರ ಜತೆಗೆ ಸಭೆ ನಡೆಸಿ ಟೋಯಿಂಗ್‌ ತೊಂದರೆ ತಪ್ಪಿಸಲು ಕಾರ್ಯಾಚರಣೆಯನ್ನು ಪಾರದರ್ಶ ಕಗೊಳಿಸಿ ಹಾಗೂ ಕಟ್ಟುನಿಟ್ಟಾಗಿ ಅದರ ಪಾಲನೆಗೆ ಒತ್ತು ನೀಡಲು ಸೂಚಿಸಲಾಗುವುದು ಎಂದರು.

ಪಾರ್ಕಿಂಗ್‌ ಜಾಗ ಅತಿಕ್ರಮಣ; 50 ಕಟ್ಟಡಗಳಿಗೆ ನೋಟಿಸ್‌: ಆಯುಕ್ತ ಅಕ್ಷಯ್‌ :

ನಗರದಲ್ಲಿರುವ ಹಲವಾರು ಕಟ್ಟಡಗಳು ಪಾರ್ಕಿಂಗ್‌ ಜಾಗವನ್ನು ಅತಿಕ್ರಮಿಸಿದ್ದು, ಈ ಬಗ್ಗೆ ಪಾಲಿಕೆ ಯಾಕೆ ಮೌನ ವಹಿಸುತ್ತಿದೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು, “ಪಾಲಿಕೆ ವ್ಯಾಪ್ತಿಯಲ್ಲಿ ಪಾರ್ಕಿಂಗ್‌ಗಾಗಿ ನಿಗದಿಪಡಿಸಿರುವ ಜಾಗವನ್ನು ಅತಿಕ್ರಮಿಸಿ ವಾಣಿಜ್ಯ ವಹಿವಾಟಿಗೆ ನೀಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದು ಕಾನೂನು ಉಲ್ಲಂಘನೆ. ಇದರ ವಿರುದ್ಧ ಪಾಲಿಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ದೂರುಗಳು ಬಂದಿರುವ ಸುಮಾರು 50 ಕಟ್ಟಡಗಳ ಮಾಲಕರಿಗೆ ಪಾಲಿಕೆಯಿಂದ ಈಗಾಗಲೇ ನೋಟಿಸ್‌ ನೀಡಲಾಗಿದೆ. ಆ ಪೈಕಿ 15 ಮಂದಿ ಈಗಾಗಲೇ ಅತಿಕ್ರಮ ತೆರವುಗೊಳಿಸಿದ್ದಾರೆ. ಮುಂದೆಯೂ ಪಾರ್ಕಿಂಗ್‌ ನಿಯಮ ಉಲ್ಲಂಘಿಸಿರುವ ಕಟ್ಟಡಗಳ ವಿರುದ್ಧ ದಿಟ್ಟ ಹೆಜ್ಜೆಯನ್ನು ಪಾಲಿಕೆ ಕೈಗೊಳ್ಳಲಿದೆ. ಹೀಗಾಗಿ ಪಾರ್ಕಿಂಗ್‌ಗಾಗಿ ನಿಗದಿ ಮಾಡಿರುವ ಜಾಗ ಅತಿಕ್ರಮಣ ಮಾಡಿದವರು ತತ್‌ಕ್ಷಣವೇ ಅವರಾಗಿಯೇ ತೆರವುಗೊಳಿಸಬೇಕು; ಇಲ್ಲವಾದರೆ ಪಾಲಿಕೆಯೇ ತೆರವು ಮಾಡಲಿದೆ’ ಎಂದರು.  ಶಾಸಕ ಕಾಮತ್‌ ಮಾತನಾಡಿ, “ಪಾರ್ಕಿಂಗ್‌ಗೆ ಸಮಸ್ಯೆ ಆಗುವ ರಸ್ತೆಯ ಭಾಗದಲ್ಲಿರುವ ಕಟ್ಟಡಗಳಲ್ಲಿ ಪಾರ್ಕಿಂಗ್‌ ಜಾಗವನ್ನು ಅತಿಕ್ರಮಣ ಮಾಡಿದ್ದು ಇದ್ದರೆ ಅದನ್ನು ಸಂಪೂರ್ಣವಾಗಿ ತೆಗೆಯಲು ಪಾಲಿಕೆಗೆ ಈಗಾಗಲೇ ಸೂಚಿಸಲಾಗಿದೆ. ಈ ಬಗ್ಗೆ ಮುಂದೆ ಹಂತ-ಹಂತವಾಗಿ ಕಟ್ಟುನಿಟ್ಟಿನ ಕಾರ್ಯಾಚರಣೆಗಳು ನಡೆಯಲಿವೆ’ ಎಂದರು.

ರಥಬೀದಿಯಲ್ಲಿ 60 ವಾಹನ ಪಾರ್ಕಿಂಗ್‌ ಮಹಡಿ! :

ರಥಬೀದಿ ಭಾಗ ದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಬಾಳಂಭಟ್‌ ಹಾಲ್‌ ಸಮೀಪದಲ್ಲಿ ಮೂರು ಮಹಡಿಗಳ ಪಾರ್ಕಿಂಗ್‌ ಸಂಕೀರ್ಣ ನಿರ್ಮಾಣವಾಗಲಿದೆ. ಸ್ಮಾರ್ಟ್‌ ಸಿಟಿಯೋಜನೆ ಯಲ್ಲಿ ಇದನ್ನು ಜಾರಿಗೊಳಿ ಸಲಾ ಗುವುದು. 60 ವಾಹನಗಳ ನಿಲುಗಡೆಗೆ ಇಲ್ಲಿ ಅವಕಾಶ ಸಿಗಲಿದೆ. ಬಳಿಕ ಇಲ್ಲಿನ ಪಾರ್ಕಿಂಗ್‌ ಸಮಸ್ಯೆ ಇತ್ಯರ್ಥ ವಾಗಲಿದೆ ಎಂದು ಶಾಸಕ ಕಾಮತ್‌ ಹೇಳಿದರು.

ಡಿಸಿ ಆಫೀಸ್‌/ಬಸ್‌ ನಿಲ್ದಾಣ ಸ್ಥಳಾಂತರ; ಸಮಸ್ಯೆ ಪರಿಹಾರ :

ಸ್ಟೇಟ್‌ಬ್ಯಾಂಕ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಪಡೀಲ್‌ಗೆ ಸ್ಥಳಾಂತರವಾದ  ಬಳಿಕ ಸರಕಾರಿ ಇಲಾಖೆಗಾಗಿ ನಗರಕ್ಕೆ ಬರುವ ವಾಹನಗಳ ಸಂಖ್ಯೆ ಕಡಿಮೆ ಆಗಬಹುದು. ಜತೆಗೆ ಸರ್ವಿಸ್‌ ಬಸ್‌ ನಿಲ್ದಾಣ ಕೂಡ ಪಂಪ್‌ವೆಲ್‌ಗೆ ಸ್ಥಳಾಂತರವಾದರೆ ವಾಹನ ದಟ್ಟಣೆ ಕಡಿಮೆಯಾಗಲಿದೆ. ಇದರ ಜತೆಗೆ ದೇಶದಲ್ಲಿ ಎಲ್ಲೂ ಇಲ್ಲದ 11 ಅಂತಸ್ತಿನ ಸೆಂಟ್ರಲ್‌ ಮಾರುಕಟ್ಟೆ ನಿರ್ಮಾಣವಾಗಲಿದೆ. ಈ ಪೈಕಿ 3 ಅಂತಸ್ತು ಪಾರ್ಕಿಂಗ್‌ಗೆ ಮೀಸಲಾಗಲಿದೆ.  ಹಂಪನಕಟ್ಟೆಯಲ್ಲಿ  ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಜಾರಿಯಾಗಲಿದೆ. ಪಾರ್ಕಿಂಗ್‌ ಸ್ಥಳ ನಿಗದಿ ಸೇರಿದಂತೆ ಇತರ ಮಾಹಿತಿ ನೀಡುವ ಕಾರ್ಯಕ್ಕಾಗಿ ಅನುದಾನ ಮೀಸಲಿಡಲಾಗುವುದು. ಪ್ಲೈಓವರ್‌ ಕೆಳ ಭಾಗದಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡಬಹುದೇ ಎಂಬ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಶಾಸಕ ಕಾಮತ್‌ ಹೇಳಿದರು.

ಹೆಚ್ಚುವರಿ ಪಾರ್ಕಿಂಗ್‌ ನೀಡಿದವರಿಗೆ ತೆರಿಗೆ ವಿನಾಯಿತಿ ;

ಅಂಗಡಿ, ಕಟ್ಟಡ ನಿರ್ಮಿಸುವಾಗ ಪಾರ್ಕಿಂಗ್‌ಗಾಗಿ ಹೆಚ್ಚುವರಿ ಸ್ಥಳಾವಕಾಶ ಮಾಡುವವರಿಗೆ ಪ್ರೋತ್ಸಾಹ ಅಥವಾ ತೆರಿಗೆ ವಿನಾಯಿತಿ ನೀಡಬೇಕು ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಶಾಸಕ ಕಾಮತ್‌ ಅವರು, “ಪಾಲಿಕೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶಗಳಿವೆಯೇ ಎಂಬ ಬಗ್ಗೆ ಪರಿಶೀಲಿ ಸಲಾಗುವುದು’ ಎಂದರು. ಆಯುಕ್ತ ಅಕ್ಷಯ್‌ ಶ್ರೀಧರ್‌ ಕೂಡ ಪ್ರತಿಕ್ರಿಯಿಸಿ “ನಗರದಲ್ಲಿ ಪಾರ್ಕಿಂಗ್‌ಗಾಗಿ ಹೆಚ್ಚುವರಿ ಸ್ಥಳಾವಕಾಶ ನೀಡಿದವರಿಗೆ ತೆರಿಗೆ ವಿನಾ ಯಿತಿ ಕಲ್ಪಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ಸಾರ್ವಜನಿಕರಿಂದ ಸಲಹೆಗಳ ಮಹಾಪೂರ :

“ಸುದಿನದಲ್ಲಿ ಪ್ರಕಟವಾದ ಪಾರ್ಕಿಂಗ್‌ ಪರದಾಟ ವರದಿಯನ್ನು ನೋಡಿ ಸಾರ್ವಜನಿಕರು ನನ್ನನ್ನು ಸಂಪರ್ಕಿಸಿ ಹಲವು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳನ್ನು ಹಾಗೂ ಸುದಿನದಲ್ಲಿ ಬಂದಿರುವ ಅಂಶಗಳ ಬಗ್ಗೆಯೂ ಪರಿಶೀಲಿಸಿ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಪಾಲಿಕೆ ಆಯುಕ್ತರು, ಪೊಲೀಸ್‌ ಆಯುಕ್ತರು ಸಹಿತ ವಿವಿಧ ಇಲಾಖೆ ಅಧಿಕಾರಿಗಳ ಜತೆಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಆ ಮೂಲಕ, ಮಂಗಳೂರು ನಗರದಲ್ಲಿ ತಲೆದೋರಿರುವ ಈ ಪಾರ್ಕಿಂಗ್‌ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಕ್ಕೆ ಈಗಾಗಲೇ ಪಾಲಿಕೆ ಅಧಿಕಾರಿಗಳು ಕೂಡ ಕಾರ್ಯ ಪ್ರವೃತ್ತಗೊಂಡಿದ್ದಾರೆ. ಈ ನಿಟ್ಟಿನಲ್ಲಿ, ಸಾರ್ವಜನಿಕರು ಕೂಡ ಎಲ್ಲ ರೀತಿಯ ಸಹಕಾರ ನೀಡುವ ಅಗತ್ಯವಿದೆ ಎಂದು ಶಾಸಕ ಕಾಮತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next