Advertisement

ಮಕ್ಕಳಲ್ಲಿನ ನಾಟಕದ ಅಭಿರುಚಿ ಗುರುತಿಸಿ, ಪ್ರೋತ್ಸಾಹಿಸಿ

05:54 AM Jan 25, 2019 | |

ದಾವಣಗೆರೆ: ನಟನಾ ಕಲೆಯ ಬಗ್ಗೆ ಮಕ್ಕಳಲ್ಲಿನ ಅಭಿರುಚಿ ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಕಲೆಗಳ ಬಗ್ಗೆ ಆಸಕ್ತಿ ಹೆಚ್ಚಿಸಬೇಕು ಎಂದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ಜಸ್ಟಿನ್‌ ಡಿಸೋಜಾ ತಿಳಿಸಿದ್ದಾರೆ.

Advertisement

ಗುರುವಾರ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಲಭವನದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಕ್ಕಳ ನಾಟಕೋತ್ಸವ ಅಭಿರಂಗ… ಉದ್ಘಾಟಿಸಿದ ಅವರು, ನಾಟಕಕ್ಕೆ ಅದರದ್ದೇ ಆದಂತಹ ಸ್ಥಾನಮಾನ ಮತ್ತು ಚೌಕಟ್ಟುಗಳಿವೆ. ಮಕ್ಕಳು ನಾಟಕವನ್ನು ಆಸಕ್ತಿಯಿಂದ ಕಲಿಯಬೇಕು. ಎಳೆಯ ವಯಸ್ಸಿನ ಮಕ್ಕಳಲ್ಲಿ ನಾಟಕದ ಸದಭಿರುಚಿ ಮೂಡಿಸುವುದು ನಾಟಕದ ಉಳಿವಿಗೆ ಸಹಕಾರಿಯಾಗಲಿದೆ ಎಂದರು.

ಇಂದಿನ ದಿನಮಾನಗಳಲ್ಲಿ ಟಿವಿ, ಇತರೆ ಮಾಧ್ಯಮಗಳ ಪ್ರಭಾವದಿಂದಾಗಿ ಜನರಲ್ಲಿ ನಾಟಕದ ಬಗೆಗಿನ ಆಸಕ್ತಿ ಕಡಿಮೆಯಾಗಿದೆ. ನಾಟಕ ಅಳಿವಿನಂಚಿನಲ್ಲಿದೆ. ಜೀವನ ಕಲೆ ಎಂದೇ ಕರೆಯಲ್ಪಡುವ ನಾಟಕ ಕ್ಷೇತ್ರವನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲಾ ಕಡೆಯಿಂದ ಆಗಬೇಕು ಎಂದು ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಮಾತನಾಡಿ, ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ರಾಜ್ಯದ್ಯಾಂತ ನಾಟಕೋತ್ಸವ ನಡೆಸಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಜೊತೆಗೆ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳನ್ನು ಬೆಳೆಸಲು ನಾಟಕ ಸಹಕಾರಿಯಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೂ ರಂಗ ಪ್ರತಿಭೆಯ ಕುರಿತು ಹೆಚ್ಚಿನ ತಿಳಿವಳಿಕೆ ಅಗತ್ಯ. ನಗರ ಪ್ರದೇಶದ ವಿದ್ಯಾರ್ಥಿಗಳು ಸಹ ನಾಟಕದ ಅಭಿರುಚಿ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ವಿಷಯ ಪರಿವೀಕ್ಷಕ ಕುಮಾರ್‌ ಹನುಮಂತಪ್ಪ ಸಾರಥಿ ಮಾತನಾಡಿ, ಶಾಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಆಯೋಜಿಸಿ, ಆರು ತಂಡಗಳನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟದಲ್ಲಿ ಪ್ರದರ್ಶನ ನಿಡಲಾಗುತ್ತಿದೆ. ಸಾಹಿತ್ಯ ಪ್ರಕಾರಗಳಲ್ಲಿ ನಾಟಕ ಹೆಚ್ಚು ಮನೋರಂಜನಾತ್ಮಕವಾದ ಸಾಧನ. ಮಕ್ಕಳು ನಾಟಕದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್‌, ನಾಟಕ ರಚನಕಾರ ಎಸ್‌.ಎಸ್‌. ಸಿದ್ದರಾಜು ಇತರರು ಇದ್ದರು.

ಗಮನ ಸೆಳೆದ ನಾಟಕಗಳು…

ಮೊಬೈಲ್‌ ಬಳಕೆಯ ದುಷ್ಪಪರಿಣಾಮಗಳ ಕುರಿತಾಗಿ ನಗರದ ಸರ್ಕಾರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ರಾಮಾಯಣದ ಶಬರಿ ಕಥಾ ಪ್ರಸಂಗ… ಕುರಿತು ಹರಿಹರ ತಾಲೂಕು ಮಲೆಬೆನ್ನೂರಿನ ಶ್ರೀ ಬೀರಲಿಂಗೇಶ್ವರ ಬಾಲಕರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ಚನ್ನಗಿರಿ ತಾಲೂಕಿನ ದೇವರಹಳ್ಳಿಯ ಶ್ರೀ ಲಕ್ಷ್ಮೀ ರಂಗನಾಥ ಪ್ರೌಢಶಾಲಾ ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣನ ಕುರಿತು ಪ್ರದರ್ಶನ ನೀಡಿದರು. ವಿದ್ಯಾಸಾಗರ ಕಾನ್ವೆಂಟ್‌ನ ವಿದ್ಯಾರ್ಥಿಗಳು ಅಭಿಮನ್ಯು ಚಕ್ರವ್ಯೂಹ ಭೇದಿಸುವ ಪ್ರಸಂಗದ ಯಕ್ಷಗಾನ ಪ್ರಸ್ತುತಪಡಿಸಿದರು. ಕಂಸನ ಸಂಹಾರ… ಪ್ರಸಂಗದ ಕುರಿತು ತಾಲೂಕಿನ ಆನಗೊಡು ಗ್ರಾಮದ ಸಿದ್ದೇಶ್ವರ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಹೊನ್ನಾಳಿ ಜೀನಹಳ್ಳಿಯ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳು ಮುಗಿಯದ ಗೋಳು… ನಾಟಕ ಪ್ರದರ್ಶಿಸಿದರು. ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮದ ಆರ್‌.ಪಿ.ಎಸ್‌. ಶಾಲೆಯ ವಿದ್ಯಾರ್ಥಿಗಳಿಂದ ಸ್ಮಶಾನ ಕುರುಕ್ಷೇತ್ರ ಪ್ರದರ್ಶನ ನಡೆಯಿತು. ಮಕ್ಕಳನ್ನು ದುಡಿಸಬಾರದು… ಎಂಬ ಪ್ರಸಂಗದ ಕುರಿತಾಗಿ ಸರ್ಕಾರಿ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next